ಹಾಂಕಾಂಗ್: ಚೀನ ಸರ್ಕಾರದಿಂದ ಮತ್ತಷ್ಟು ಕಠಿಣ ಕಾನೂನು ಜಾರಿ ಮಾಡುವ ಪ್ರಸ್ತಾಪಕ್ಕೆ ಹಾಂಕಾಂಗ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚೀನಾದ ದಬ್ಟಾಳಿಕೆ ನಿಲುವು ಖಂಡಿಸಿ ಭಾನುವಾರ ಸಹಸ್ರಾರು ಮಂದಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ ಮತ್ತು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ.
ಪ್ರಜಾಪ್ರಭುತ್ವಪರ ಹೋರಾಟಗಾರರು ಹಾಂಕಾಂಗ್‌ನ ಜನಪ್ರಿಯ ಶಾಂಪಿಂಗ್ ಕೇಂದ್ರ ವಾಗಿರುವ ಕ್ಯೂಸ್‌ವೇ ಬೇಯಲ್ಲಿ ಬೀದಿಗೆ ಇಳಿದು ಹೊಸ ನಿಯಮದ ಬಗ್ಗೆ ಖಂಡನೆ ವ್ಯಕ್ತ ಪಡಿಸಿದರು. ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿ, ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು. “ಇದು ನಮ್ಮ ಅವಧಿಯ ಕ್ರಾಂತಿ’, “ಹಾಂಕಾಂಗ್ ಅನ್ನು ಮುಕ್ತ ಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ಮುಕ್ತಾಯಗೊಳಿಸಿ ವಾಪಸ್ ತೆರಳುವಂತೆ ಮುನ್ನೆಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಮುಂದೊತ್ತಿ ಬರುತ್ತಿದ್ದವರನ್ನು ತಡೆಯಲು ಅಶ್ರು ವಾಯು ಸಿಡಿಸಿದರು, ಜಲಫಿರಂಗಿ ಪ್ರಯೋಗಿ ಸಿದರು. ಪ್ರಮುಖ ಪ್ರಜಾಪ್ರಭುತ್ವಪರ ಹೋರಾಟಗಾರ ಟಾಮ್ ಟಕ್- ಚಿ ಸೇರಿದಂತೆ ಕನಿಷ್ಠ 120 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದೆಡೆ ಹಾಂಕಾಂಗ್‌ಗೆ ಚೀನ ಮೋಸ ಮಾಡಿದೆ ಎಂದು ಬ್ರಿಟಿಷ್ ಆಡಳಿತದ ಅವಧಿಯಲ್ಲಿದ್ದ ಕೊನೆಯ ಗವರ್ನರ್ ಕ್ರಿಸ್ ಪಾಟೆನ್ ಟೀಕಿಸಿದ್ದಾರೆ. ಈ ನಡುವೆ, ಹಾಂಕಾಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶ ಮಾಡುವ ಪ್ರಸ್ತಾಪವನ್ನು ತಳ್ಳಿ ಹಾಕಿರುವ ಚೀನ, ಇದರಿಂದ ಮತ್ತೊಂದು ಹಂತದ ಶೀತಲ ಸಮರ ಶುರುವಾಗಲಿದೆ ಎಂದು ಎಚ್ಚರಿಸಿದೆ.