ಕುದೂರು: ಸಾಮಾಜಿಕ ಜಾಲತಾಣಗಳನ್ನು ಬಳಸಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುವುದು ಇತ್ತಿಚಿಗೆ ಹೆಚ್ಚಾಗುತ್ತಿದೆ. ಇದೀಗ ಕುದೂರಿನಲ್ಲೂ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂ., ಹಣವನ್ನು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಅಪರಿಚಿತ ಮಹಿಳೆ ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿಟ್ರ್ಯಾಪ್ ಬ್ಲಾಕ್ ಮೇಲ್‌ಗೆ ಒಳಗಾಗಿ, ಸಾಕಷ್ಟು ಭಯದ ವಾತಾವರಣದಲ್ಲಿ ನಲುಗಿದ್ದಾರೆ. ವ್ಯಾಟ್ಸಾಪ್, ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿ ಜತೆ ಚಾಟಿಂಗ್ ಮಾಡಿದ್ದ ಯುವಕ ಖದೀಮರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾನೆ. ಕುದೂರಿನಲ್ಲಿ ಯುವಕನೊಬ್ಬ ವ್ಯಾಟ್ಸಾಪ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ವಿಡಿಯೋ ಕಾಲ್ ಮೂಲಕ ಚಾಟಿಂಗ್ ನಡೆಸುತ್ತಿದ್ದರು. ವಿಡಿಯೋ ಕಾಲಿಂಗ್‌ನಲ್ಲಿ ಇಬ್ಬರು ಮಾತನಾಡುತ್ತಾ ಬೆತ್ತಲಾಗಿ ಮಾತುಕತೆ ನಡೆಸುತ್ತಿದ್ದರು. ಆದರೆ, ಯುವಕನ ನಗ್ನ ವಿಡಿಯೋವನ್ನು ರೆರ್ಕಾಡ್ ಮಾಡಿಕೊಂಡು ಮೊಬೈಲ್ ಮೂಲಕ ಚಿತ್ರಿಸಿ, ಅದಾದ ಬಳಿಕ ವಿಡಿಯೋ ಬಹಿರಂಗ ಪಡಿಸಿವುದಾಗಿ ಬೆದರಿಸಿ, ಹಣ ವಸೂಲಿ ಮಾಡಿದ್ದಾರೆ.
ಬೆತ್ತಲೆ ದೇಹ ಪ್ರದರ್ಶನ: ಯುವಕನೊಬ್ಬನಿಗೆ ವಿಡಿಯೋ ಕಾಲ್ ಮಾಡಿದ ಯುವತಿ, ತನ್ನ ಬೆತ್ತಲೆ ದೇಹವನ್ನು ಪ್ರದರ್ಶನ ಮಾಡಿದ್ದಾಳೆ. ನಂತರ ಅದನ್ನೇ ರೆಕಾರ್ಡಿಂಗ್ ಮಾಡಿಕೊಂಡು ಆತನ ಕುಟುಂಬದವರು, ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸಿವುದಾಗಿ ಬೆದರಿಸಿ, ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾಳೆ. ಸಾಮಾನ್ಯವಾಗಿ ಯುವತಿಯೊಬ್ಬಳೇ ಮಾಡಲು ಸಾಧ್ಯವಾಗುವುದಿಲ್ಲ. ಯುವತಿಯೊಂದಿಗೆ ಇಂತಹ ವ್ಯವಹಾರದಲ್ಲಿ ನುರಿತ ಪುರುಷರೂ ಸೇರಿ ಈ ರೀತಿ ಬಲೆ ಬೀಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜನಪ್ರಿಯರೇ ಟಾರ್ಗೆಟ್: ಕೆಲವು ತಂಡಗಳು ಈ ಹನಿಟ್ರ್ಯಾಪ್ ಎಂಬ ವಂಚಕ ಜಾಲವನ್ನು ವ್ಯವಸ್ಥಿತವಾಗಿ ಹೊಂದಿದೆ ಎಂಬುದು ವಾಸ್ತವ ಸಂಗತಿ. ಮನೆ ಕಳ್ಳತನ, ಸರ ಕದಿಯುವುದು, ವೇಶ್ಯಾವಟಿಕೆ, ಮಾದಕ ವಸ್ತುಗಳ ಮಾರಾಟ, ಜೂಜು ಕೇಂದ್ರಗಳು ಮುಂತಾದ ರೀತಿ ಹೊಸ ಆಧುನಿಕ ತಂತ್ರಜ್ಞಾನದ ದಂಧೆ ಈ ಹನಿಟ್ರ್ಯಾಪ್. ಬಿಪಿ, ಶುಗರ್ ರೀತಿಯಲ್ಲಿ ಇದು ಸಹ ಸಾಮಾನ್ಯವಾಗಿ ಹಣವಂತರು, ಜನಪ್ರಿಯರೇ ಮುಖ್ಯ ಟಾರ್ಗೆಟ್. ಆದರೆ, ಕೆಲವೊಮ್ಮೆ ಅಮಾಯಕ ಸಾಮಾನ್ಯರು ಸಹ ಇದಕ್ಕೆ ಬಲಿಯಾಗುತ್ತಿರುವುದು ಕಂಡು ಬಂದಿದೆ. ಹೆಣ್ಣೊಬ್ಬಳು ನಿರ್ದಿಷ್ಟ ಗಂಡಸನ್ನು ಗುರಿಯಾಗಿಸಿ, ಆಕರ್ಷಕವಾಗಿ ಭಾವನಾತ್ಮಕವಾಗಿ, ದೈಹಿಕವಾಗಿ ಅಥವಾ ಬೇರೆ ಇನ್ಯಾವುದೇ ರೀತಿಯಲ್ಲಿ ಅಮಿಷಕ್ಕೆ ಒಳಪಡಿಸಿ, ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಅಥವಾ ಬೆಳೆಸಿದಂತೆ ನಟಿಸಿ, ಅದನ್ನು ತನ್ನ ತಂಡದ ಸದಸ್ಯರು ಗುಪ್ತವಾಗಿ ಚಿತ್ರಿಕರಿಸಿ, ನಂತರ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ, ಅವರಿಂದ ಹಣ ವಸೂಲಿ ಮಾಡುವುದೇ ಹನಿಟ್ರ್ಯಾಪ್.
Related Articles
ಅಶ್ಲೀಲ ಭಂಗಿ ಪ್ರದರ್ಶನ: ಇತ್ತೀಚೆಗೆ ಸುಮ್ಮನೆ ವಿಡಿಯೋ ಕಾಲ್ ಮಾಡಿ, ಅದನ್ನು ಸ್ವೀಕರಿಸಿದ ತಕ್ಷಣ ಆ ಕೊನೆಯಲ್ಲಿ ಹೆಣ್ಣು ಅಶ್ಲೀಲ ಭಂಗಿ ಪ್ರದರ್ಶಿಸಿ, ಅದನ್ನು ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಿಸಿ, ನಮ್ಮದು ಯಾವುದೇ ಪ್ರಕ್ರಿಯೆ ಇಲ್ಲದಿದ್ದರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದಾಗಿ ಹೆದರಿಸುವುದು ಸಹ ನಡೆಯುತ್ತಿದೆ. ಇಲ್ಲಿ ಬಲತ್ಕಾರ ಅಥವಾ ಅತ್ಯಾಚಾರದ ಲಕ್ಷಣಗಳು ಇರುವುದಿಲ್ಲ. ಇದು ಗಂಡಿನ ಆಸೆ, ದುರಾಸೆ ಅಥವಾ ವೀಕ್‌ನೆಸ್ ಅನ್ನು ದುರುಪಯೋಗಿಸಿಕೊಂಡು ಹಣ ಮಾಡುವ ಒಂದು ವಂಚಕ ತಂತ್ರಗಾರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಹಣ ಮಾಡುವ ದಂಧೆ: ಹಿಂದೆಲ್ಲಾ ಗೂಢಚಾರಿಕೆಗಾಗಿ ಬೇರೆ ದೇಶಗಳ ರಹಸ್ಯ ಮಾಹಿತಿ ಪಡೆಯಲು ಮಹಿಳೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಹನಿಟ್ರ್ಯಾಪ್ ಹಣ ಮಾಡುವ ದಂಧೆಯಾಗಿದೆ. ಹನಿಟ್ರ್ಯಾಪ್ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಆತನಿಗೆ ಮಹಿಳೆ ಮೂಲಕ ಲೈಂಗಿಕ ಅಮಿಷವೊಡ್ಡಿ, ಆತನಿಂದ ಗೌಪ್ಯ ಮಾಹಿತಿ ಪಡೆದು ಹಣ ಮಾಡುವ ಪರಿಪಾಠ ಆರಂಭವಾಗಿದೆ. ಮೊಬೈಲ್, ರಹಸ್ಯ ಕ್ಯಾಮಾರಗಳು ಸಾಮಾನ್ಯರ ಕೈಗೆ ಸಿಗುವಂತಾದ ಬಳಿಕವಂತು ಹಣವಂತರನ್ನು ಅದರಲ್ಲೂ, ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ದಂಧೆ ಹೆಚ್ಚಾಗಿವೆ. ಹೀಗಾಗಿಯೇ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಆರಂಭವಾಗಿದ್ದು, ಬ್ಲಾಕ್ ಮೇಲ್ ಗಳಿಂದ ರೋಸಿ ನೊಂದ ಜನರು ಪೊಲೀಸರಿಗೆ ದೂರು ನೀಡದೆ ಮರ್ಯಾದೆಗೆ ಅಂಜಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನೊಂದ ಜನರಲ್ಲಿ ಬಹುಪಾಲು ಪುರುಷರೇ ಆಗಿದ್ದಾರೆ. ಈ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇಂತಹ ಗಂಭೀರ ಅಪರಾಧಗಳಿಗೆ ಕಠಿಣ ಕಾನೂನು ಇಲ್ಲ. ಹನಿಟ್ರ್ಯಾಪ್‌ನನ್ನು ಸಮರ್ಥವಾಗಿ ವಿವರಿಸುವಂತಹ ಸೆಕ್ಷನ್‌ಗಳಿಲ್ಲ. ಸದ್ಯ ಪೊಲೀಸರು ಇಂತಹ ಪ್ರಕರಣಕ್ಕೆ ಸುಲಿಗೆ, ವಂಚನೆಯಂತಹ ಸೆಕ್ಷನ್ ಗಳಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ನಮ್ಮ ಯಾವ ತಪ್ಪು ಇಲ್ಲದೇ ವಂಚನೆಗೆ ಒಳಗಾದರೇ ಅದನ್ನು ಪೊಲೀಸರಿಗೆ ದೂರು ನೀಡಿ, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು. – ಹೇಮಂತ್ ಕುಮಾರ್, ಕುದೂರು
ಜನ ಸಾಮಾನ್ಯರೇ ನಿಮ್ಮ ಮೊಬೈಲಿಗೆ ಅನ್ಯ ನಂಬರಿಂದ ಕರೆ ಅಥವಾ ಸಂದೇಶ ಬಂದಾಗ ಎಚ್ಚರವಹಿಸಬೇಕು. ಸುಮ್ಮನೇ ಗೊತ್ತಿಲ್ಲದವರ ಕರೆಗಳಿಗೆ ಉತ್ತರಿಸಬೇಡಿ, ಏನಾದರೂ ತೊಂದರೆಯಾದರೆ ತಕ್ಷಣ ಪೊಲೀಸರಿಗೆ ದೂರು ನೀಡಿ, ಆಗ ನೀವು ಕಷ್ಟ ಅನುಭವಿಸುವುದು ತಪ್ಪುತ್ತದೆ. – ಎ.ಪಿ.ಕುಮಾರ್, ಸಿಪಿಐ, ಕುದೂರು ಪೊಲೀಸ್ ಠಾಣೆ
ಕೆಲವೊಮ್ಮೆ ಎಲ್ಲಾ ಎಚ್ಚರಗಳ ಹೊರತಾಗಿಯೂ ಎಡವಟ್ಟಾಗುವ ಸಾಧ್ಯತೆಯಿದೆ. ಆಗ ಅದರ ಪರಿಣಾಮಗಳನ್ನು ಎದುರಿಸುವ ಧೈರ್ಯ ಪ್ರದರ್ಶಿಸಬೇಕು. ಕಾನೂನಾತ್ಮಕ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ತಕ್ಷಣಕ್ಕೆ ವಿಚಲಿತರಾಗಿ ವಂಚಕರ ಬಲೆಯೊಳಗೆ ಬೀಳದೆ ಅವಮಾನ ಸಹಿಸಿಕೊಂಡು ತಾಳ್ಮೆಯಿಂದ ಎದುರಿಸಬೇಕು. – ನಟರಾಜು, ಮೊಬೈಲ್ ಅಂಗಡಿ ಮಾಲೀಕ, ಕುದೂರು
– ಕೆ.ಎಸ್.ಮಂಜುನಾಥ್