ಬೆಂಗಳೂರು: ವೆಬ್‌ಸೈಟ್ ಮೂಲಕ ಪರಿಚಯವಾದ ವ್ಯಕ್ತಿಗಳನ್ನು ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಇಬ್ಬರು ಯುವತಿಯರು ಸೇರಿ 6 ಮಂದಿಯ ತಂಡವನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಅನಿಲ್ ಕುಮಾರ್ (37), ತುಮಕೂರಿನ ಗಿರೀಶ್ (36), ಬ್ಯಾಟರಾಯನಪುರ ನಿವಾಸಿ ಶಿವಶಂಕರ್(50) ಮತ್ತು ರಾಜಾಜಿನಗರ ನಿವಾಸಿ ರಾಮಮೂರ್ತಿ(37) ಹಾಗೂ ಇಬ್ಬರು ಯುವತಿ ಯರನ್ನು ಬಂಧಿಸಲಾಗಿದೆ.
ಆರೋಪಿಗಳು 39 ವರ್ಷದ ರಾಜಶ್ರೀಲೇಔಟ್ ನಿವಾಸಿ ಶ್ರೀನಿವಾಸ್ ಎಂಬುವರಿಗೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟು, ಈ ಪೈಕಿ 3 ಲಕ್ಷ ರೂ. ಪಡೆದು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳು ಬಾಡೋ ಮತ್ತು ಟಾಗೆಡ್ ಎಂಬ ವೆಬ್‌ಸೈಟ್‌ನಲ್ಲಿ ಖಾತೆ ತೆರೆದು, ಅದರಲ್ಲಿ ಕೆಲ ಯುವತಿಯರ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದರು. ಅದನ್ನು ಗಮನಿಸಿದ ದೂರುದಾರ ಶ್ರೀನಿವಾಸ್, ವೆಬ್ ಸೈಟ್‌ನಲ್ಲಿ ಯುವತಿಯ ಪೋಟೋ ಕಂಡು ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಯುವತಿಯೊಬ್ಬಳ ಮನೆ ವಿಳಾಸ ಕಳುಹಿಸಿದ್ದರು. ಅದರಂತೆ ಶ್ರೀನಿವಾಸ್ ಯುವತಿ ಮನೆಗೆ ಬಂದಿದ್ದಾರೆ. ಕೆಲ ಹೊತ್ತಿನ ಬಳಿಕ ಮೂವರು ಆರೋಪಿಗಳು ಬಂದು, ಯುವತಿ ಜತೆ ಅರೆನಗ್ನವಾಗಿದ್ದ ಶ್ರೀನಿವಾಸ್‌ರ ವಿಡಿಯೋ ಮಾಡಿಕೊಂಡು, 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮಾರ್ಯಾದೆಗೆ ಹೆದರಿದ ಶ್ರೀನಿವಾಸ್ ಸ್ನೇಹಿತರ ಮೂಲಕ 3 ಲಕ್ಷ ರೂ. ಪಡೆದು ಆರೋಪಿಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆ ಬಳಿಕವೂ ಬಾಕಿ 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅದನ್ನು ಕೊಡಲು ಸಾಧ್ಯವಿಲ್ಲ ಎಂದಾಗ, ಅರೆನಗ್ನ ವಿಡಿಯೋವನ್ನು ಕುಟುಂಬ ಸದಸ್ಯರಿಗೆ ತೋರಿಸುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಅದರಿಂದ ಬೇಸತ್ತ ಶ್ರೀನಿವಾಸ್ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಇಬ್ಬರು ಯುವತಿಯರು ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ, ಎಸಿಪಿ ಸಿ.ಆರ್.ರವಿಶಂಕರ್ ಮಾರ್ಗದರ್ಶನ ದಲ್ಲಿ ಬೇಗೂರು ಠಾಣಾಧಿಕಾರಿ ಎಚ್.ಡಿ. ಅನಿಲ್ ಕುಮಾರ್, ಪಿಎಸ್‌ಐ ಸವಿನಯ, ಎಎಸ್‌ಐ ಚಿದಾನಂದ ಹಾಗೂ ಸಿಬ್ಬಂದಿ ನಾಗರಾಜಪ್ಪ, ಅರುಣ್, ಇಸ್ಮಾಯಿಲ್ ನದಾಫ್ ತಂಡ ಕಾರ್ಯಾಚರಣೆ ನಡೆಸಿದೆ.