ಬೆಂಗಳೂರು: ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರ ಆಪ್ತರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಯತ್ನಿಸಿದ ಇಬ್ಬರು ಬೆಂಗಳೂರಿನ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೈಸೂರು ಮೂಲದ ಸಂತೋಷ್, ಪುಟ್ಟರಾಜು ಬಂಧಿತರು. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗೆ ಶೋಧ ನಡೆಸಲಾಗುತ್ತಿದೆ.
ಆರೋಪಿಗಳಿಂದ ಪೆನ್‌ಡ್ರೈವ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ಉದ್ಯಮಿಗಳು, ಶ್ರೀಮಂತ ರನ್ನೇ ಗುರಿ ಮಾಡಿ ಬ್ಲ್ಯಾಕ್‌ಮೇಲ್ ಗೆ ಯತ್ನಿಸಿರುವ ಸಂಗತಿ ತನಿಖೆಯಲ್ಲಿ ಹೊರ ಬಿದ್ದಿದೆ.ಆರೋಪಿಗಳ ಗ್ಯಾಂಗ್ ಹರೀಶ್ ಅವರ ಸ್ನೇಹಿತರ ವಿರುದ್ಧ ಸುಳ್ಳು ಹನಿಟ್ರ್ಯಾಪ್ ಮಾದರಿ ವೀಡಿಯೋ ಸೃಷ್ಟಿಸಿ ಬೆದರಿಕೆ ಹಾಕಲು ಮುಂದಾಗಿತ್ತು. ಕೋಟ್ಯಂತರ ರೂ.ಗೆ ಬೇಡಿಕೆಯಿಟ್ಟು ಬ್ಲ್ಯಾಕ್‌ವೆುàಲ್ ಮಾಡಿತ್ತು. ಬಳಿಕ ಶಾಸಕ ಹರೀಶ್ ಗೌಡ ಸಿಸಿಬಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ವೇಶ್ಯಾವಾಟಿಕೆ ವೇಳೆ ಸೆರೆ ಹಿಡಿದ ವೀಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ಆರೋಪಿಗಳ ಪೈಕಿ ಒಬ್ಬ ಈ ಹಿಂದೆ ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಆಗ ಮಹಿಳೆಯರನ್ನು ಬಳಸಿಕೊಂಡು ಗಿರಾಕಿಗಳ ಗುರುತು ಸಿಗದಂತಹ, ಮುಖಚಹರೆ ಮರೆಮಾಡಿದ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಇಟ್ಟುಕೊಂಡಿದ್ದ. ಅನಂತರ ಇಬ್ಬರು ಸೇರಿ ಈ ವೀಡಿಯೋಗಳನ್ನು ತಿರುಚಿ ಉದ್ಯಮಿಗಳಿಗೆ ಕಳಿಸಿ ಇದು ನಿಮಗೆ ಸೇರಿದ ವೀಡಿಯೋ ತುಣುಕುಗಳು ಎಂದು ಹೇಳಿ ದುಡ್ಡು ಕೊಡುವಂತೆಯೂ ಇಲ್ಲದಿದ್ದರೆ ಜಾಲತಾಣಗಳಲ್ಲಿ ಹಾಕಿ ಮಾನಹರಣ ಮಾಡುವುದಾಗಿ ಬೆದರಿಸುತ್ತಿದ್ದರು.ವಿಶ್ವವಿದ್ಯಾಲಯದ ಕುಲಪತಿಗಳು ಸೇರಿ ಹಲವು ಗಣ್ಯರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ನನ್ನ ವಿರುದ್ಧ ನಡೆದಿಲ್ಲ: ಹರೀಶ್ ಗೌಡ
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಹರೀಶ್‌ಗೌಡ, “ನನ್ನ ವಿರುದ್ಧ ಹನಿಟ್ರ್ಯಾಪ್ ನಡೆದಿಲ್ಲ. ನನ್ನ ಪರಿಚಿತರನ್ನು ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ನನ್ನ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ನಡೆಯುವುದನ್ನು ತಡೆಯುವ ಸಲುವಾಗಿ ಪೊಲೀಸರಿಗೆ ದೂರು ಕೊಡಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಐಪಿಗಳ ಹೊಟೇಲ್
ರೂಂ ಪಡೆದು ಟ್ರ್ಯಾಪ್
ಆರೋಪಿಗಳು ಮೈಸೂರು, ಬೆಂಗಳೂರು ಸೇರಿ ವಿವಿಧೆಡೆ ರಾಜಕಾರಣಿಗಳು, ಉದ್ಯಮಿಗಳು, ವಿ.ವಿ.ಗಳ ಕುಲಪತಿಗಳು ಉಳಿದುಕೊಳ್ಳುತ್ತಿದ್ದ ಪಂಚಾತಾರ ಹೊಟೇಲ್‌ಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅವರು ಹೋದ ಬಳಿಕ ಅದೇ ಕೊಠಡಿ ಬಾಡಿಗೆ ಪಡೆದು ಅಲ್ಲಿ ಯುವತಿಯನ್ನು ಬಳಸಿಕೊಂಡು ಹಿಡನ್ ಕೆಮರಾ ಇಟ್ಟಿರುವ ರೀತಿಯಲ್ಲಿ ವೀಡಿಯೋ ಮಾಡಿಕೊಳ್ಳುತ್ತಿದ್ದರು. ಬಳಿಕ ಆ ರೂಮಿನಲ್ಲಿ ಉಳಿದುಕೊಂಡಿದ್ದ ವಿಐಪಿ ಈ ಯುವತಿ ಜತೆ ಆತ್ಮೀಯತೆಯಿಂದಿರುವಂತೆ ವೀಡಿಯೋ ಸೃಷ್ಟಿಸಿ ಬ್ಲ್ಯಾಕ್‌ವೆುàಲ್ ಮಾಡುತ್ತಿದ್ದರು.