ಚಂಡೀಗಢ : “ಎಲ್ಲರೂ ತಿಳಿದಿರುವಂತೆ ಹನಿಪ್ರೀತ್ ಇನ್ಸಾನ್, ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ದತ್ತುಪುತ್ರಿಯಾಗಿರದೆ ಆತನ ಪ್ರೇಯಸಿಯಾಗಿದ್ದಳು’ ಎಂದು ಆಕೆಯ ಮಾಜಿ ಪತಿ ವಿಶ್ವಾಸ್ ಗುಪ್ತಾ ಹೇಳಿದ್ದಾರೆ.
“ನನ್ನ ಪತ್ನಿಯಾಗಿದ್ದ ಹನಿಪ್ರೀತ್ ಇನ್‌ಸಾನ್ ಎಂದೂ ನನ್ನ ಜತೆ ಮಲಗಿರಲಿಲ್ಲ; ಆಕೆ ಪ್ರತೀ ರಾತ್ರಿ ಎಂಬಂತೆ ಡೇರಾ ಮುಖ್ಯಸ್ಥನ ಜತೆಗೇ ಮಲಗುತ್ತಿದ್ದಳು’ ಎಂದು ವಿಶ್ವಾಸ್ ಗುಪ್ತಾ ಹೇಳಿರುವುದು ವರದಿಯಾಗಿದೆ.
ಹನಿಪ್ರೀತ್ ಇನ್ಸಾನ್ ಮತ್ತು ಗುರ್ಮಿತ್ ನಡುವೆ ಅಕ್ರಮ ಲೈಂಗಿಕ ಸಂಬಂಧ ಇತ್ತು. ಅವರಿಬ್ಬರ ನಡುವಿನ ತಂದೆ – ಮಗಳ ಸಂಬಂಧವು ತಮ್ಮ ಅನುಯಾಯಿಗಳನ್ನು ಮೂರ್ಖರನ್ನಾಗಿಸಲು ಹೆಣೆದ ಸಂಬಂಧ ಆಗಿತ್ತು ಎಂದು ಗುಪ್ತಾ ಹೇಳಿದ್ದಾರೆ.
ಹರಿಯಾಣದ ಸಿರ್ಸಾ ಪಟ್ಟಣಕ್ಕೆ ಸಮೀಪವಿರುವ ಡೇರಾ ಕ್ಯಾಂಪಸ್ ಒಳಗೆ ಇರುವ ಗುರ್ಮಿತ್‌ನ ಗುಫಾದಲ್ಲಿ ನ ಅವರ ಖಾಸಗಿ ಶಯನ ಕೊಠಡಿಯಲ್ಲಿ ಗುರ್ಮಿತ್ ಮತ್ತು ಹನಿಪ್ರೀತ್ ಲೈಂಗಿಕ ಕ್ರಿಯೆಯಲ್ಲಿ ಇದ್ದುದನ್ನು ನಾನು ಕಂಡಿದ್ದೇನೆ ಎಂದು ಗುಪ್ತಾ ಹೇಳಿದರು.
“ನಾನು ನೋಡಿದ್ದನ್ನು ಬಹಿರಂಗ ಮಾಡಿದರೆ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಕೊಂದು ಬಿಡುವುದಾಗಿ ಗುರ್ಮಿತ್ ನನಗೆ ಬೆದರಿಕೆ ಹಾಕಿದ್ದ; ನನ್ನ ಬದುಕನ್ನು ಆತ ನಾಶ ಮಾಡಿ ಹೊಸಕಿ ಹಾಕಿದ. ಆ ಬಳಿಕ ನಾನು ಬೇರೊಂದು ಮದುವೆಯಾದೆ’ ಎಂದು ಗುಪ್ತಾ ಹೇಳಿದರು.
ಹನಿಪ್ರೀತ್‌ಳನ್ನು ಗುರ್ಮಿತ್ ಕಾನೂನು ಬದ್ಧವಾಗಿ ಅಥವಾ ಧಾರ್ಮಿಕ ವಿಧಿ ವಿಧಾನಗಳ ಮೂಲಕವಾಗಿ ತನ್ನ ಮಗಳೆಂದು ದತ್ತು ಸ್ವೀಕಾರ ಮಾಡಿಯೇ ಇಲ್ಲ. ಅವರೊಳಗಿನ ಅನೈತಿಕ ಸಂಬಂಧ ಮೊದಲಿಂದಲೂ ಇತ್ತು. ಕೇವಲ ಹೊರಗಿನವರಿಗೆ, ಹಿಂಬಾಲಕರಿಗೆ, ಅನುಯಾಯಿಗಳಿಗೆ ಮಾತ್ರವೇ ಅವರು ತಂದೆ – ಮಗಳಾಗಿ ಕಾಣಸಿಕೊಂಡಿದ್ದರು. ಇದನ್ನು ಪ್ರತಿಭಟಿಸಿದ ನನಗೆ ಅದೆಷ್ಟೋ ಬಾರಿ ಆತ ಕೊಂದು ಮುಗಿಸುವ ಬೆದರಿಕೆ ಒಡ್ಡಿದ್ದ. ನನ್ನನ್ನು ಮತ್ತು ನನ್ನ ಹೆತ್ತವರನ್ನು ಡೌರಿ ಕೇಸಿನಲ್ಲಿ ಸಿಲುಕಿಸಿದ್ದ ಎಂದು ವಿಶ್ವಾಸ್ ಗುಪ್ತಾ ಹೇಳಿದರು.