Advertisement

ಎನಿತು ಚೆಂದವೀ ಹನಿಮಳೆ…

12:01 AM Jul 22, 2019 | Sriram |

ಈ ಮಳೆಗೆ ಅದೆಷ್ಟೊಂದು ಮುಖಗಳು! ಮಳೆಯೆಂದರೆ ಹುಟ್ಟು, ಮಳೆಯೆಂದರೆ ಸಂಭ್ರಮ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯೆಂದರೆ ಧಾರೆ ಧಾರೆ ಸುರಿಯುವ ಪ್ರೀತಿ. ಒರಟು ಹೃದಯವನ್ನು ಹದಗೊಳಿಸುವ ಜೀವನದ ರೀತಿ. ಸೋಂಬೇರಿಯಂತೆ ಬಿದ್ದುಕೊಂಡ ಒಣಬೀಜಗಳೆಲ್ಲವನ್ನೂ ತಡವಿ ಮೃದು ಮೈಯೊಳಗೆ ಹುದುಗಿಸಿಕೊಂಡು ಅಪ್ಪಿ ತಲೆ ನೇವರಿಸುತ್ತಿದೆ. ತುಂತುರು ಹನಿಗಳ ಸಿಂಚನಕ್ಕೆ ಮಣ್ಣ ತೆಕ್ಕೆ ಬಿಡಿಸಿಕೊಂಡ ಬೀಜದ ಮೊಳಕೆ ಕಣ್ಣರಳಿಸಿ ನೋಡುತ್ತಿದೆ.

Advertisement

ಎನಿತು ಚೆಂದವೀ ಹನಿಮಳೆ….
ಎಂತಹ ವಿಸ್ಮಯ! ನಿನ್ನೆ ಮೊನ್ನೆ ಬಡಕಲಾಗಿ ಸೊರಗಿ ಹೋಗಿದ್ದ ಸಣಕಲು ನದಿ ಈಗ ಮೈ ಕೈ ತುಂಬಿಕೊಂಡು ವೈಯಾರದಲ್ಲಿ ನರ್ತಿಸುತ್ತ ಸಾಗುತ್ತಿದೆ. ಅಬ್ಟಾ! ಏನು ಲಯಬದ್ಧವಾದ ನಡಿಗೆ, ಬಳುಕಾಟ, ತಳುಕಾಟ. ಇಷ್ಟು ದಿನ ಸದ್ದೇ ಇರದ ಪೆಚ್ಚು ಹಳ್ಳಕ್ಕೆ ಈಗ ಅದೆಂತಹ ಜೀವನೋತ್ಸವ! ಎಲ್ಲಿಂದ ದಕ್ಕಿತು ಇಂತಹ ಹುರುಪು? ಮಳೆ ಮನದೊಳಗೂ ಬಂದು ಕೆಲಸವನ್ನು ಅದೆಷ್ಟು ಸಲೀಸುಗೊಳಿಸುತ್ತದೆ.

ನಮಗೂ ಮಳೆಯ ಜೋಗುಳಕ್ಕೆ ಹಾಗೇ ನಿದ್ದೆ ಹೋಗುವ ಆಸೆ ಅದೆಷ್ಟಿಲ್ಲ? ಬಾಲ್ಯವೆಲ್ಲ ಒಂದು ಕನಸಿನ ತುಣುಕಿನಂತೆ, ಮಳೆಯ ನೀರಿನಂತೆ ಸರಿದು ಹರಿದು ಹೋಯಿತಾ? ಮಳೆಯಂತೆ ಬಾಲ್ಯ ಮತ್ತೂಮ್ಮೆ ಬರುವ ಹಾಗಿದ್ದರೆ ಇನ್ನಷ್ಟು ಚೆಂದದ ಕಾಗದದ ದೋಣಿ ಮಾಡಿ ಅದರ ತುಂಬಾ ಮನದ ಆಸೆಗಳನ್ನು ಹರವಿಟ್ಟು ಸೀದಾ ಕಡಲು ಸೇರುವ ಕಡೆಗೇ ತೇಲಿಬಿಡಬಹುದಿತ್ತು. ಕೊಡೆಯೊಳಗೆ ಮೈಯನ್ನು ಹಿಡಿಯಾಗಿಸಿ ನೂರೆಂಟು ಕನಸು ಕಾಣುತ್ತ ಹನಿಗಳೊಂದಿಗೆ ಸಂವಾದ ನಡೆಸುತ್ತ ಆದಷ್ಟೂ ನಿಧಾನಕ್ಕೆ ನಡೆಯಬಹುದಿತ್ತು.
ಹಾದಿಯ ತುಂಬೆಲ್ಲ ಬಣ್ಣ ಬಣ್ಣದ ಕೊಡೆಗಳ ರಂಗೋಲಿ ಚೆಲುವು. ಕೊಡೆಯೊಳಗೆ ಪಿಸುಗುಟ್ಟುತ್ತಿದೆ, ಯಾವುದೋ ಮಧುರ ಒಲವು. ಒದ್ದೆ ಹಾದಿಯ ಮೇಲೆ ಹೆಜ್ಜೆ ಹಾಕುವಾಗ ಹಾದಿಯ ತುಂಬೆಲ್ಲ ನಿರ್ಜೀವ ಕೊಡೆಗೆ ಜೀವಂತಿಕೆಯ ಮೆರುಗು. ಪುಟ್ಟ ಕೊಡೆಯೊಂದು ಅಷ್ಟು ದೊಡ್ಡ ದೇಹವನ್ನು ಒದ್ದೆಯಾಗದಂತೆ ನಡೆಸುತ್ತಿದೆಯಲ್ಲ. ಯಾವ ಯೋಚನೆಗೂ ಸಿಲುಕಿಕೊಳ್ಳದೆ ಕೊಡೆಯೊಳಗಿನ ಮನ ಮಾತ್ರ ಮಳೆಯನ್ನೇ ಧ್ಯಾನಿಸುತ್ತ ಸಾಗುತ್ತಿದೆ. ಮನಸ್ಸು ಮತ್ತು ಕನಸಿನ ನಡುವೆ ಮಳೆ ಕೊಂಡಿಯಾಗುತ್ತಿದೆ. ಕೊಡೆಯ ಸುತ್ತಲೂ ಮಳೆ ಸುರಿಯುತ್ತಾ ನರ್ತಿಸುತ್ತಿದೆ. ಬಾನಿನ ಕನಸೆಲ್ಲವೂ ಸೂರಿನಡಿಯಲ್ಲಿ ಅನಾವರಣಗೊಳ್ಳುವಂತೆ ಅನ್ನಿಸುತ್ತದೆ.

ಮೈ ತೋಯಿಸಿಕೊಳ್ಳಲಾಗುತ್ತಿಲ್ಲ. ಆದರೆ, ಮನಸ್ಸಿಡೀ ತೋಯ್ದು ತೊಪ್ಪೆಯಾಗುತ್ತಿದೆ. ಮನೆ ಬಾಗಿಲಲ್ಲಿ ವರ್ಷಧಾರೆ : ಮನದ ಬಾಗಿಲಲ್ಲಿ ಹರ್ಷಧಾರೆ…

ನಿಜವಾದ ಸ್ನೇಹಿತರು
ಬಹಳ ವರ್ಷಗಳ ಹಿಂದೆ ಚೀನದಲ್ಲಿ ಇಬ್ಬರು ಪರಮಾಪ್ತ ಗೆಳೆಯರಿದ್ದರು. ಅವರ ಆಪ್ತತೆ ಎಲ್ಲರನ್ನು ಬೆರಗುಗೊಳಿಸುತ್ತಿತ್ತು. ಒಮ್ಮೆ ಬಬ್ಬ ಅತ್ಯಂತ ಸುಂದರವಾಗಿ, ಮಧುರವಾಗಿ ತಂತಿ ವಾದ್ಯವನ್ನು ನುಡಿಸುತ್ತಿದ್ದ. ಮತ್ತೂಬ್ಬ ಅಷ್ಟೇ ಸಹೃದಯತೆಯಿಂದ ಕೇಳುತ್ತಿದ್ದ. ಒಬ್ಬ ಪರ್ವತದ ಬಗ್ಗೆ ನುಡಿಸಿ ಹಾಡಿದಾಗ, ಮತ್ತೂಬ್ಬ ನಿಜವಾಗಲೂ ಪರ್ವತದ ಸೌಂದರ್ಯವನ್ನೇ ಅನುಭವಿಸುವಂತಿದೆ’ ಎಂದ. ಹಾಗೆಯೇ ಮತ್ತೂಬ್ಬ ಜಲಧಾರೆ ಬಗ್ಗೆ ನುಡಿಸಿದ. ಅದನ್ನು ಕೇಳಿದ ಮೊದಲಿಗ ಇಲ್ಲೇ ಜಲಪಾತ ಹರಿದಂತಾಗಿದೆ’ ಎಂದು ನುಡಿದ. ಸಹೃದಯಿ ಕೇಳುಗ (ಗೆಳೆಯ) ಕಾಯಿಲೆ ಬಂದು ಸತ್ತು ಹೋದ. ಇದು ಮತ್ತೂಬ್ಬ ಗೆಳೆಯನಿಗೆ ಬಹಳ ಬೇಸರ ತಂದಿತು. ತತ್‌ಕ್ಷಣವೆ ತನ್ನ ವಾದ್ಯದ ತಂತಿ ಹರಿದು ಹಾಕಿದ. ಮುಂದೆ ಎಂದೂ ನುಡಿಸದಿರಲು ನಿರ್ಧರಿಸಿದ. ಅಂದಿನಿಂದ ಇದು ಪರಮಾಪ್ತ ಸ್ನೇಹಕ್ಕೆ ಸಾಕ್ಷಿಯಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next