ಬೆಳಗಾವಿ: ಮಹಿಳೆಯರನ್ನು ಇಟ್ಟುಕೊಂಡು ವ್ಯಕ್ತಿಯನ್ನು ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟು ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿಯ ಸದಾಶಿವ ಚಿಪ್ಪಲಕಟ್ಟಿ, ಬೆಳಗಾವಿಯ ನೆಹರು ನಗರದ ರಘುನಾಥ ಧುಮಾಳೆ, ಸವದತ್ತಿಯ ಗೌರಿ ಲಮಾಣಿ, ಮಂಜುಳಾ ಜತ್ತೆನ್ನವರ ಹಾಗೂ ಸವದತ್ತಿ ತಾಲೂಕಿನ ಉಗರಗೋಳದ ಸಂಗೀತಾ ಕಣಕಿಕೊಪ್ಪ ಎಂಬುವರನ್ನು ಬಂಧಿಸಲಾಗಿದೆ.
ಜಮಖಂಡಿ ಮೂಲದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡ ಈ ಮಹಿಳೆಯರು ಲಾಡ್ಜ್ ಗೆ ಕರೆಯಿಸಿಕೊಂಡಿದ್ದಾರೆ. ನಗರದ ಲಾಡ್ಜ್ ಗೆ ಕರೆಯಿಸಿ ಮಾತುಕತೆ ನಡೆಸಿದ್ದಾರೆ. ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡ ಈ ಮಹಿಳೆಯರು ಹನಿಟ್ರ್ಯಾಪ್ ಜಾಲ ಬೀಸಿದ್ದಾರೆ. ಅಷ್ಟರೊಳಗೆ ಪ್ರೈಮ್ ನ್ಯೂಸ್ ಯೂಟ್ಯುಬ್ ಚಾನೆಲ್ ಎಂದು ಹೇಳಿಕೊಂಡು ಲಾಡ್ಜ್ ಗೆ ಬಂದಿದ್ದಾರೆ. ಮಹಿಳೆಯರೊಂದಿಗೆ ಕುಳಿತಿದ್ದ ವ್ಯಕ್ತಿಯ ವಿಡಿಯೋ ಮಾಡಿಕೊಂಡಿದ್ದಾರೆ. ಜತೆಗೆ ಸಂಭಾಷಣೆಯ ಆಡಿಯೋ ಇಟ್ಟುಕೊಂಡು ಹೆದರಿಸಿದ್ದಾರೆ.
ಈ ವಿಡಿಯೋ ಹಾಗೂ ಸಂಬಾಷಣೆಯ ಆಡಿಯೋ ಚಾನೆಲ್‌ನಲ್ಲಿ ಪ್ರಸಾರ ಮಾಡುವುದಾಗಿ ಹೆದರಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ನಂತರ 5 ಲಕ್ಷ ರೂ.ಗೆ ವ್ಯವಹಾರ ಕುದಿರಿಸಿದ್ದಾರೆ. ಬಳಿಕ ಜಮಖಂಡಿಯ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಐವರನ್ನು ಲಾಡ್ಜ್ ನಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ಪ್ರೈಮ್‌ನ್ಯೂಸ್ ಎಂಬ ಚಾನೆಲ್ ನ ಗುರುತಿನ ಚೀಟಿ, ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರ್ಕೆಟ್ ಎಸಿಪಿ ಎನ್.ವಿ. ಭರಮನಿ, ಮಾಳಮಾರುತಿ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಹನಿಟ್ರ್ಯಾಪ್ ಜಾಲವನ್ನು ಭೇದಿಸಿದ್ದಾರೆ.