Advertisement

ಬಿಬಿಎಂಪಿ ವಾರ್ಡ್‌ ಕಚೇರಿಯಲ್ಲೇ ಹನಿಟ್ರ್ಯಾಪ್‌!

12:03 PM Jan 14, 2017 | Team Udayavani |

ಬೆಂಗಳೂರು: ವೆಬ್‌ಸೈಟ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಹನಿಟ್ರ್ಯಾಪ್‌ ದಂಧೆ ನಡೆಸುತ್ತಿದ್ದ ಆರು ಮಂದಿ ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಬಿಜೆಪಿ ಕಾರ್ಯಕರ್ತರಾದ ವಿಜಯನಗರದ ಆನಂದ್‌ ಆಚಾರ್ಯ, ರವಿ, ಆಗ್ರಹಾರ ದಾಸರಹಳ್ಳಿಯ ರವಿಕುಮಾರ್‌, ಆಂಧ್ರ ಮೂಲದ ನಿಹಾರಿಕಾ, ಮಾಗಡಿ ರಸ್ತೆಯ ಮನಾಲಿ ಮತ್ತು ನಿಖೀಲಾ ಬಂಧಿತರು.

Advertisement

ಆರೋಪಿಗಳು ಲೋಕ್ಯಾಂಟೋ ಎಂಬ ವೆಬ್‌ಸೈಟ್‌ನಲ್ಲಿ ಕಾಮಕ್ರೀಡೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದನ್ನು ನೋಡಿದ ಗ್ರಾಹಕರು ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು. ಈ ವೇಳೆ ಆರೋಪಿಗಳ ತಂಡ ತಮ್ಮನ್ನು ಸಂಪರ್ಕಿಸಿದ ಗ್ರಾಹಕರಿಗೆ ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಬರುವಂತೆ ಸೂಚಿಸುತ್ತಿದ್ದರು.  ನಿಹಾರಿಕಾ, ಮನಾಲಿ ಹಾಗೂ ನಿಖೀಲಾ ಮೆಟ್ರೋ ನಿಲ್ದಾಣದಿಂದ ಗ್ರಾಹಕರನ್ನು ಕರೆದುಕೊಂಡು ಮಾರೇನಹಳ್ಳಿಯ ಬಿಬಿಎಂಪಿ ವಾರ್ಡ್‌ ಕಚೇರಿಗೆ ಬರುತ್ತಿದ್ದರು.

ಇಲ್ಲಿನ ಕೊಠಡಿಯೊಂದರಲ್ಲಿ ಗ್ರಾಹಕರನ್ನು ಕೂರಿಸಿ ಮಾತುಕತೆಯಲ್ಲಿ ತೊಡಗುತ್ತಿದ್ದರು. ಇನ್ನೇನು ರತಿ ಕ್ರೀಡೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಆರೋಪಿಗಳಾದ ಆನಂದ್‌ ಆಚಾರ್ಯ ಹಾಗೂ ಸಹಚರರು ಕೊಠಡಿಗೆ ನುಗ್ಗಿ ಯುವತಿಯರ ಜತೆಯಿರುವ ಗ್ರಾಹಕರ ಫೋಟೋ ತೆಗೆಯುತ್ತಿದ್ದರು. ಬಳಿಕ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಫೋಟೋವನ್ನು ಹೊರಗಡೆ ತೋರಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ದುಷ್ಕೃತ್ಯಕ್ಕೆ ಮಾರೇನಹಳ್ಳಿ ವಾರ್ಡ್‌ ಕಚೇರಿಯನ್ನು ಬಳಸಿಕೊಳ್ಳುತ್ತಿದ್ದರು. ಹಿಂದಿನ ವಾರ್ಡ್‌ ಸದಸ್ಯ ವಾಗೀಶ್‌ ಅವರ ಅವಧಿಯಿಂದ ಈ ಕಚೇರಿಯನ್ನು ಪಡೆದು ಹನಿಟ್ರ್ಯಾಪ್‌ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯರಿಗೆ 35 ಸಾವಿರ ಸಂಬಳ
ಪ್ರಮುಖ ಆರೋಪಿ ಆನಂದ್‌ ಆಚಾರ್ಯ ಎನ್‌ಜಿಓದಲ್ಲಿ ಕೆಲಸ ಮಾಡಲು ಯುವತಿಯರು ಬೇಕಿದ್ದಾರೆ ಎಂದು ವೆಟ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದ. ಈ ಜಾಹೀರಾತು ನೋಡಿ ಕೆಲಸಕ್ಕೆ ಬಂದು ಮೂವರು ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ. ಈ ಯುವತಿಯರಿಗೆ ತಾವು ಮಾಡಬೇಕಿರುವ ಕೆಲಸದ ಬಗ್ಗೆ ವಿವರಿಸಿದ್ದ. ಆರಂಭದಲ್ಲಿ ಯುವತಿಯರು ಇದಕ್ಕೆ ಒಪ್ಪಿರಲಿಲ್ಲ. ಆದರೆ, ಕಿವುಡ ಮತ್ತು ಮೂಕ ಮಕ್ಕಳಿಗೆ ಸಹಾಯ ಮಾಡಲು ಈ ಕೆಲಸ ಮಾಡುತ್ತಿರುವುದಾಗಿ ಹೇಳಿ ಒಪ್ಪಿಸಿದ್ದ.

Advertisement

ಅಲ್ಲದೆ ಈ ಹನಿಟ್ರ್ಯಾಪ್‌ ಕೆಲಸಕ್ಕೆ ಯುವತಿಯರಿಗೆ ಮಾಸಿಕ 35 ಸಾವಿರ ಸಂಬಳ ನಿಗದಿಗೊಳಿಸಿ ನೀಡುತ್ತಿದ್ದ. ಆದರೆ, ಗ್ರಾಹಕರ ಜತೆ ಈ ಯುವತಿಯರನ್ನು ವೇಶ್ಯಾವಾಟಿಕೆಗೆ ಬಿಟ್ಟಿರಲಿಲ್ಲ. ಗ್ರಾಹಕರನ್ನು ಕೊಠಡಿಗೆ ಕರೆದು ತಂದು ಐದಾರು ನಿಮಿಷದಲ್ಲಿ ದಾಳಿ ಮಾಡಿ ಬೆದರಿಸಿ ದರೋಡೆ ಮಾಡುತ್ತಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next