Advertisement

ಜೇನು ಸತ್ಯ

04:41 PM Jan 01, 2018 | |

ಸುಳ್ಯ ತಾಲೂಕು ಜೇನು ಕೃಷಿಯಲ್ಲಿ ಜಿಲ್ಲೆಯಲ್ಲೇ ಮುಂದಿದೆ. ಇಲ್ಲಿ ಸಾಕಷ್ಟು ಕಾಡುಮರಗಳಿವೆ, ರಬ್ಬರ್‌ ತೋಟಗಳಿವೆ. ಜೇನು ಉತ್ಪಾದನೆಗೆ ಸಹಜ ಅರಣ್ಯ ಪೂರಕವಾಗಿರುವಂತೆ ಕೃಷಿಯ ಗಿಡ ಮರಗಳ ಹೂವುಗಳೂ ಅನುಕೂಲ ಒದಗಿಸಿವೆ. ಇಲ್ಲಿರುವ ಜೇನು ವ್ಯವಸಾಯಗಾರರಲ್ಲಿ ಒಬ್ಬರು ಎಂ. ಜಿ. ಸತ್ಯನಾರಾಯಣ. 

Advertisement

ಕುಕ್ಕುಜಡ್ಕದ ಮಾಯಿಪಡ್ಕದಲ್ಲಿ ಸತ್ಯನಾರಾಯಣರು ಅಡಿಕೆ, ತೆಂಗು, ಕೋಕೋ, ಕಾಳುಮೆಣಸು, ಬಾಳೆ ಎಲ್ಲವನ್ನೂ ಬೆಳೆಯುತ್ತಾರೆ. ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರುವ ಅವರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ದೊಡ್ಡ ಗಾತ್ರದ ಸ್ಪ್ರಿಂಕ್ಲರ್‌ ಉಪಯೋಗಿಸಿ ನೀರಿನ ಕೊಳವೆಗಳ ಸಾಲುಗಳನ್ನು ಕಡಿಮೆಗೊಳಿಸಿದ್ದು, ಮೈಲುತುತ್ತದ ಜೊತೆಗೆ ಶೇ. 50ರಷ್ಟು ಮಣ್ಣಿನ ಮಿಶ್ರಣ ಮಾಡಿ ಅಡಿಕೆ ಗೊನೆಗಳಿಗೆ ಸಿಂಪಡಿಸಿ ಅರ್ಧ ಭಾಗ ವೆಚ್ಚ ಉಳಿಸಿ, ರೋಗ ನಿಯಂತ್ರಣ ಮಾಡಿದ್ದಾರೆ. ಹೀಗೆ ಹಲವು ಸಾಧನೆಗಳು ಅವರ ಹೆಸರಿನ ಹಿಂದಿದೆ.

ಸತ್ಯನಾರಾಯಣ ಅರಿಗೆ ನಲವತ್ತು ಎಕರೆ ಕೃಷಿ ಭೂಮಿ ಇದೆ. ಹಲವು ವರ್ಷಗಳಿಂದ ಜೇನು ವ್ಯವಸಾಯವನ್ನೂ ಅದರೊಂದಿಗೇ ಮಾಡುತ್ತ ಬಂದಿದ್ದಾರೆ. ತೊಡುವೆ ಜೇನಿನ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಕಾರಣ ಜೇನ್ನೊಣಗಳು ಅವರ ಮಿತ್ರನಾಗಿವೆ. 36 ಪೆಟ್ಟಿಗೆಗಳಲ್ಲಿ ಜೇನ್ನೊಣ ಸಾಕಾಣಿಕೆ ಮಾಡುತ್ತಿದ್ದಾರೆ. ಒಂದು ಪೆಟ್ಟಿಗೆಯಲ್ಲಿ ಕನಿಷ್ಠ ಐದು ಕಿಲೋ ತುಪ್ಪ ಸಿಗುತ್ತದೆ.

ಕಿಲೋ ಧಾರಣೆ 400 ರೂ. ಸಿಗುತ್ತದೆ. ಫೆಬ್ರವರಿ ತಿಂಗಳ ಬಳಿಕ ಮೇ ತನಕ ತಿಂಗಳಲ್ಲಿ ಎರಡು ಸಲ ತುಪ್ಪ ತೆಗೆಯಬಹುದು. ವಾರ್ಷಿಕ 400 ಕಿಲೋ ಉತ್ಪಾದನೆ. ಶುದ್ಧವಾದ ಈ ತುಪ್ಪಕ್ಕೆ ಮಂಗಳೂರು, ಮುಂಬೈ ಸೇರಿದಂತೆ ಅವರದೇ ಖಾಯಮ್‌ ಗ್ರಾಹಕ ಬಳಗವಿದೆ. 50 ಕಿಲೋ ಜೇನು ತುಪ್ಪವನ್ನು ಮನೆ ಬಳಕೆಗಾಗಿ ಉಳಿಸಿಕೊಂಡು ವರ್ಷಕ್ಕೆ 350 ಕಿಲೋ ಜೇನು ತುಪ್ಪ ಮಾರಾಟ ಮಾಡುತ್ತಾರೆ.

ಜೇನು ಉತ್ಪಾದನೆಗೆ ಯಾವುದೇ ಖರ್ಚುಗಳಿಲ್ಲ ಎನ್ನುತ್ತಾರೆ ಸತ್ಯನಾರಾಯಣ. ಮಳೆಗಾಲದಲ್ಲಿ ಜೇನು ಹುಳುಗಳು ಪೆಟ್ಟಿಗೆಯಿಂದ ಹೊರಗೆ ಬರುವುದಿಲ್ಲ. ಸತತ ಮಳೆ ಬರುತ್ತಿದ್ದರೆ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ನಿಂಬೆಹಣ್ಣಿನ ರಸ ಹಿಂಡಿ ಆಹಾರವಾಗಿ ಕೊಡಬೇಕಾಗುತ್ತದೆ. ಸತ್ಯನಾರಾಯಣರು ಬೇಸಿಗೆಯಲ್ಲಿ ಇನ್ನೊಂದು ವಿಧದ ವಿಶಿಷ್ಟ ಆಹಾರ ನೀಡುವ ಪ್ರಯೋಗವನ್ನೂ ಮಾಡಿದ್ದಾರೆ.

Advertisement

ಅದು ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಕಾಡು ಮಾವಿನ ಹಣ್ಣುಗಳ ರಸ ಹಿಂಡಿ ಜೇನ್ನೊಣಗಳಿಗೆ ಆಹಾರವಾಗಿ ನೀಡುವುದು. ಮೊದಲ ದಿನ ರಸ ನೀಡಿದರೆ ಅದರಲ್ಲಿರುವ ಒಗರು ಗುಣದಿಂದಾಗಿ ಅವು ಮುಟ್ಟುವುದಿಲ್ಲ. ಆದರೆ ಒಂದು ದಿನ ಫ್ರಿಡಿjನಲ್ಲಿರಿಸಿ ಮರುದಿನ ನೀಡಿದರೆ ಒಗರು ಮಾಯವಾಗಿ ಸಿಹಿ, ಸಿಹಿಯಾಗಿರುತ್ತದೆ. ಹೀಗೆ ಮಾಡಿದಾಗ, ಪೆಟ್ಟಿಗೆಯಲ್ಲಿರುವ ಹುಳುಗಳು ಎಲ್ಲ ರಸವನ್ನು ಸೇವಿಸಿ ಇಮ್ಮಡಿಯಾಗಿ ತುಪ್ಪ ಉತ್ಪಾದಿಸುತ್ತವೆಯೆಂಬುದು ಅವರ ಪ್ರಯೋಗದಿಂದ ತಿಳಿದು ಬಂದ ಸತ್ಯ.

ಜೇನ್ನೊಣಗಳು ಪಾಲಾಗುವ ಸಮಯದಲ್ಲಿ ಅವುಗಳನ್ನು ವಿಂಗಡಿಸುವುದು, ಎರಿಗಳಲ್ಲಿ ಹುಳಗಳಾಗದಂತೆ ನೋಡಿಕೊಳ್ಳುವುದು, ಹಲ್ಲಿಯಂಥ ಶತ್ರುಗಳ ಬಾಧೆ ಬರದಂತೆ ಎಚ್ಚರಿಕೆ ವಹಿಸುವುದು, ಹುಳುಗಳಿಗೆ ಹಿತಕರವಾದ ವಾತಾವರಣ ಸೃಷ್ಟಿಸುವುದರಿಂದ ಯಾವ ಖರ್ಚೂ ಇಲ್ಲದೆ. ಹಾಗಾಗಿ, ಜೇನು ಕೃಷಿ ಮಾಡಿ ಕೈತುಂಬ ಗಳಿಸಲು ಸಾಧ್ಯ ಅನ್ನೋದನ್ನು ಸತ್ಯನಾರಾಯಣ ತೋರಿಸಿದ್ದಾರೆ.

* ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next