Advertisement

ಹನಿ-ಹನಿ ನೀರು ಸಂಗ್ರಹಿಸಿ ಅಂತರ್ಜಲ ವೃದ್ಧಿಸಿ

11:16 PM Jun 06, 2019 | Sriram |

ಮಹಾನಗರ: ನಗರ ಸಹಿತ ಕರಾವಳಿ ಭಾಗದಲ್ಲಿ ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದ್ದು, ಒಂದೂವರೆ ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ನಗರವಾಸಿಗಳಿಗೆ ಹನಿ ನೀರೂ ಎಷ್ಟು ಅಮೂಲ್ಯ ಎನ್ನುವುದು ಅರಿವಾಗಿದೆ. ಹೀಗಿರುವಾಗ, ಬೆಳೆಯುತ್ತಿರುವ ನಗರ, ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅಧಿಕಗೊಳ್ಳುತ್ತಿರುವ ನೀರಿನ ಬಳಕೆ ಮತ್ತು ಬೇಡಿಕೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಪರ್ಯಾಯ ಮೂಲಗಳನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ವರ್ಷದಿಂದ ವರ್ಷಕ್ಕೆ ಮುಂಗಾರು ಮಳೆ ಕ್ಷೀಣಿಸುತ್ತಾ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಇದರಿಂದ ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗಿ, ಬೇಸಗೆಯ ಮಧ್ಯಭಾಗದಲ್ಲೇ ಮಂಗಳೂರಿಗರಿಗೆ ನೀರಿಲ್ಲವಾಗಿದೆ. ಈ ಪರಿಸ್ಥಿತಿಯ ನಿರ್ವಹಣೆಗೆ ನಗರದಲ್ಲಿನ ಅಂತರ್ಜಲ ಮಟ್ಟ ವೃದ್ಧಿಸುವುದೇ ಪರ್ಯಾಯ ವ್ಯವಸ್ಥೆ. ಈ ಸಂಬಂಧ ಮನೆ-ವಾಣಿಜ್ಯ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುವುದು ಸೂಕ್ತ ಮಾರ್ಗ.

ಮಳೆಗಾಲಕ್ಕೆ ಕೆಲವೇ ದಿನಗಳಿವೆ. ಮಳೆ ಕೊಯ್ಲು ವ್ಯವಸ್ಥೆಯ ಅಳವಡಿಕೆಯನ್ನು ಉತ್ತೇಜಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲೆಂದೇ “ಸುದಿನ’ವು “ಮನೆ-ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನ ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಮಳೆಕೊಯ್ಲು ಅಳವಡಿಸುವ ಬಗೆ, ಅದರಿಂದಾಗುವ ಪ್ರಯೋಜನ, ಖರ್ಚು-ವೆಚ್ಚ ಹಾಗೂ ಮಳೆಕೊಯ್ಲು ಸಾಧಕರ ಯ ಶೋಗಾಥೆಗಳನ್ನು ವಿವರಿಸಲಾಗುವುದು. ಆ ಮೂಲಕ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಳೆ ಕೊಯ್ಲು ಪದ್ಧತಿಯತ್ತ ಮನಸ್ಸು ಮಾಡಲಿ ಎಂಬುದು “ಸುದಿನ’ದ ಕಳಕಳಿ.

ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 3912 ಮಿ.ಮೀ. ಮಳೆಯಾಗುತ್ತಿದೆ. ಮಳೆಗಾಲದಲ್ಲಿ ತೋಡುಗಳು ಉಕ್ಕಿ ಹರಿದು ನಗರದ ರಸ್ತೆಗಳನ್ನು ಆವರಿಸಿಕೊಳ್ಳುತ್ತವೆ. ಅದೇ ಬೇಸಗೆಯಲ್ಲಿ ತೀವ್ರ ಸ್ವರೂಪದ ಜಲಕ್ಷಾಮಕ್ಕೆ ತುತ್ತಾಗುತ್ತದೆ. ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂ ಕೂಡಾ ಬರಿದಾಗುವ ಆತಂಕ ಎದುರಾಗಿದೆ. ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಮಂಗಳೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪ್ರಸ್ತುತ 20.11 ಮೀಟರ್‌ಗೆ ಇಳಿದಿದೆ. ಹಾಗಾಗಿಯೇ ಜಲ ಸಂರಕ್ಷಣೆ ಹೆಚ್ಚು ಪ್ರಾಮುಖ್ಯ ಪಡೆದಿದೆ. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಹಿಡಿದಿಡುವುದು ಇಂದು ಅನಿವಾರ್ಯ.

ಮನೆಗೆ ನೀರು ಬಂದಿಲ್ಲ ಎಂದು ಪರಿತಪಿಸುವ ಬದಲು ಅಥವಾ ನೀರಿನ ಕೊರತೆಗೆ ಇನ್ಯಾರನ್ನೋ ದೂರುವ ಬದಲು “ನಾನೇನು ಮಾಡಬಹುದು’? ಎಂದು ಆಲೋಚಿಸಿ ಕ್ರಿಯಾಶೀಲವಾಗುವ ಹೊತ್ತಿದು. ಈ ನಿಟ್ಟಿನಲ್ಲಿ ಮಳೆ ಕೊಯ್ಲು ಒಂದು ಸರಳ ಉಪಾಯ.

Advertisement

ಮಳೆ ನೀರು ಕೊಯ್ಲು ಅಂದರೆ ಮಳೆಗಾಲದಲ್ಲಿ ಭೂಮಿಗೆ ಬಿದ್ದಂತಹ ಮಳೆ ನೀರನ್ನು ವಿವಿಧ ಅಗತ್ಯಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಸಂಗ್ರಹಿಸುವುದು ಮತ್ತು ಭೂಮಿಯೊಳಗೆ ಇಂಗಿಸುವುದು. ನಗರದಲ್ಲಿ ಮಳೆನೀರು ಕೊಯ್ಲು ಅಂದರೆ ಮೇಲ್ಚಾವಣಿ ಮಳೆ ನೀರು ಸಂಗ್ರಹ. ಮೇಲ್ಚಾವಣಿಯ ಮೇಲೆ ಬಿದ್ದು ಕೆಳಗೆ ಹರಿಯುವ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನಿತ್ಯದ ಬಳಕೆಗೆ ಉಪಯೋಗಿಸುವುದೇ ಇದರ ಮೂಲ ಉದ್ದೇಶ. ಹೀಗೆ ಬೀಳುವ ನೀರನ್ನು ಕೊಳವೆ ಬಾವಿ, ತೆರೆದ ಬಾವಿಗಳಿಗೆ ವರ್ಗಾಯಿಸಿ ಅಂತರ್ಜಲವನ್ನು ಹೆಚ್ಚಿಸಲೂಬಹುದು.

ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ
ನಗರದಲ್ಲಿ 200 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು ಎಂಬ ನಿಯಮ ಇದೆ. ನಗರದಲ್ಲಿ ಒಟ್ಟು 2,11,578 ಅಸ್ತಿಗಳಿವೆ. ಇದರಲ್ಲಿ ಶೇ.30 ರಷ್ಟು ಖಾಲಿ ಜಾಗ. ಉಳಿದೆಡೆ ಕಟ್ಟಡಗಳಿವೆ. ಶೇ.70 ರಷ್ಟು ಕಟ್ಟಡಗಳಲ್ಲಿ ಶೇ. 75 ರಷ್ಟು ತಾರಸಿ ಕಟ್ಟಡಗಳು. ಕಟ್ಟಡ ಪರವಾನಿಗೆಯಲ್ಲೇ ಮಳೆ ನೀರು ಕೊಯ್ಲು ಅಳವಡಿಸಬೇಕೆಂದು ಇದ್ದರೂ ಕಟ್ಟುನಿಟ್ಟಾಗಿ ಜಾರಿಗೊಂಡಿಲ್ಲ. ಹಾಗಾಗಿ ಕೆಲವರಷ್ಟೇ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿ ಮಳೆ ನೀರನ್ನು ಅಂಗಳದಲ್ಲಿ ಇಂಗಿಸುವ, ತೆರೆದ ಬಾವಿಗಳಿಗೆ, ನೆÇದಡಿಯ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಮರು ಬಳಕೆ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಮಳೆ ನೀರು ಕೊಯ್ಲು ಯೋಜನೆ ಆಳವಡಿಕೆ ಮಾಡಿಕೊಳ್ಳದ ಮನೆಗೆ ಶೇ.50ರಷ್ಟು, ವಾಣಿಜ್ಯ ಸಂಕೀರ್ಣಗಳಿಗೆ ಶೇ. 100ರಷ್ಟು ದಂಡ ಮೊತ್ತವನ್ನು ಏರಿಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.

ದ.ಕ.ಜಿ.ಪಂ. ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆ/ಕಟ್ಟಡ ನಿರ್ಮಿ ಸುವುದಾದರೆ, ಮಳೆ ನೀರು ಕೊಯ್ಲು ಹಾಗೂ ಶೌಚಾಲಯ ವ್ಯವಸ್ಥೆಗಳು ಕಡ್ಡಾಯವಾಗಿ ಮಾಡಬೇಕೆಂಬ ನಿಯಮವಿದೆ. ಮನೆ ನಂಬರ್‌/ ಕಟ್ಟಡ ಸಂಖ್ಯೆ ನೀಡುವಾಗ ಪರಿಶೀಲಿಸಬೇಕು. ಪ್ರಸಕ್ತ ಇದು ಕೆಲವು ಗ್ರಾ.ಪಂ.ನಲ್ಲಿ ಮಾತ್ರ ಅನುಷ್ಠಾನದಲ್ಲಿದೆ.

ನೀವು ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ
ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್‌ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

ಮಳೆ ನೀರು ಕೊಯ್ಲು
ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಸರಕಾರ/ಪಾಲಿಕೆಯನ್ನು ಕಾಯಬೇಕಿಲ್ಲ. ಅದು ಕಷ್ಟವೂ ಅಲ್ಲ. ಮನೆ/ಕಟ್ಟಡದ ಛಾವಣಿ ಅಥವಾ ತಾರಸಿ ಮೇಲೆ ಬೀಳುವ ಮಳೆ ನೀರು ಕೊಳವೆಗಳ ಮೂಲಕ ಒಂದೆಡೆ ಹರಿದು ಹೋಗುವಂತೆ ಮಾಡಬೇಕು. ಅದನ್ನು ಸಂಗ್ರಹಿಸಲು ಅಂಗಳದಲ್ಲಿ ಒಂದು ದೊಡ್ಡ ತೊಟ್ಟಿ ನಿರ್ಮಿಸಿಕೊಳ್ಳಬೇಕು. ಮೇಲ್ಛಾವಣಿಯನ್ನು ಸ್ವತ್ಛಗೊಳಿಸಿಕೊಳ್ಳಬೇಕು. ಹರಿದು ಬಂದ ನೀರು ಕೊಳವೆಗೆ ಬಂದು ಸೇರುವಲ್ಲಿ ಕಬ್ಬಿಣದ ಜಾಳಿಯಿಟ್ಟು ಕಸ-ಕಡ್ಡಿ ಬೇರ್ಪಡಿಸಿ, ಸಂಗ್ರಹಿಸಬೇಕು. ವಿವಿಧ ರೀತಿಯ ಮೇಲ್ಚಾವಣಿಗಳಿಗೆ ತಕ್ಕಂತೆ ಅಂದರೆ, ಹೆಂಚು, ತಾರಸಿ ಮಾದರಿ ಮನೆ-ಕಟ್ಟಡಗಳಿಗೆ ಪರಿಣತರ ಸಲಹೆಯಂತೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬಹುದು.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next