ಚಡಚಣ: ಸಹಕಾರಿ ಬ್ಯಾಂಕ್‌ಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಹಕರ ಸಹಕಾರ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆ ಇದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಭೀಮಾಶಂಕರ ಸಹಕಾರಿ ಬ್ಯಾಂಕಿನ ಎರಡನೇ ವರ್ಷದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೀಮಾಶಂಕರ ಸಕ್ಕರೆ ಕಾರ್ಖಾನೆ ಷೇರುದಾರರಾದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೀಮಾಶಂಕರ ಸೌಹಾರ್ದ ಸಹಕಾರಿ ಬ್ಯಾಂಕ್ ಆರಂಭಿಸಿದ್ದೇವೆ ಎಂದರು.
ರಾಜ್ಯಗಳಿಗೆ ಸೀಮಿತವಾಗಿರುವುದನ್ನು ಸಹಕಾರಿ ಕ್ಷೇತ್ರವನ್ನು ಕೇಂದ್ರ ಸರಕಾರ ಕೇಂದ್ರದಲ್ಲಿ ಸಹಕಾರಿ ಇಲಾಖೆ ಆರಂಭಿಸಿದ್ದು ಸ್ವಾಗತಾರ್ಹ ಎಂದ ಅವರು, ಇಂದಿನ ಸಕ್ಕರೆ ಉದ್ಯಮ ಸಂಪೂರ್ಣ ಸಂಕಷ್ಟದಲ್ಲಿದೆ. ಅದರಂತೆ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಷ್ಟದಲ್ಲಿದೆ ಎಂದರು.
ಸಭೆ ಉದ್ಘಾಟಿಸಿದ ಬ್ಯಾಂಕ್ ಉಪಾಧ್ಯಕ್ಷ ಧನ್ಯಕುಮಾರ ಶಹಾ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲರು ಇಂಡಿ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಜಿಲ್ಲೆ ಮಾಡುವುದು ಅಷ್ಟೇ ಬಾಕಿಯಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಹಾವಿನಾಳ ಮಠದ ವಿಜಯಮಹಾಂತೇಶ್ವರ ಶಿವಾಚಾರ್ಯ ಆಶೀರ್ವಚನ ನೀಡಿದರು. ಉದ್ಯಮಿ ಪ್ರಕಾಶಗೌಡ ಪಾಟೀಲ ಮಾತನಾಡಿದರು. ಸಭೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಾಬುಗೌಡ ಪಾಟೀಲ, ಜವಳಿ ವ್ಯಾಪಾರಸ್ಥ ಅಜೀತ ಮುತ್ತಿನ, ಸಂಗಮೇಶ್ವರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ವಿ.ಜಿ. ಮುತ್ತಿನ, ಕಾರ್ಯದರ್ಶಿ ಎಸ್.ಆರ್. ಅವಜಿ ಇದ್ದರು.