ವೃತ್ತಿ- ಪ್ರವೃತ್ತಿಗಳು ಬದುಕಿನ ಬಂಡಿಯ ಎರಡು ಗಾಲಿಗಳಿದ್ದಂತೆ. ವೃತ್ತಿ ಬದುಕಿನ ರಥಯಾತ್ರೆಯ ಸಾಧನವಾದರೆ, ಪ್ರವೃತ್ತಿ ಎಂಬುದನ್ನು ಹವ್ಯಾಸ, ಉಪವೃತ್ತಿ ಎಂಬುದಾಗಿ ವ್ಯಾಖ್ಯಾನಿಸಬಹುದು. ಬದುಕಿನಲ್ಲಿ ಪ್ರವೃತ್ತಿ, ವೃತ್ತಿಯಾಗಿ ಗುಣಾತ್ಮಕವಾಗಿ ಮಾರ್ಪಾಡಾಗುವ ಹಲವು ಉದಾ ಹರಣೆಗಳು ನಮಗೆ ಕಾಣಸಿಗುತ್ತವೆ. ಬಾಳಿಗೆ ಬೆಳಕಾಗಿ ಬಾಳು ನವರೂಪ ತಾಳುವ ಪ್ರಕ್ರಿಯೆಯೇ ವೃತ್ತಿ-ಪ್ರವೃತ್ತಿ.
ನಾವು ನೋಡುವ ದೃಷ್ಟಿಕೋನ ದಿಂದಾಗಿ ವೃತ್ತಿ -ಪ್ರವೃತ್ತಿಗಳಲ್ಲಿ ಮೇಲು- ಕೀಳು ಎಂಬ ಭಾವನೆ ಮೂಡಿವೆಯೇ ಹೊರತು ನಿಜಕ್ಕಾದರೂ ಅಂಥ ತಾರತ ಮ್ಯವೇ ಇಲ್ಲ. ವೃತ್ತಿ-ಪ್ರವೃತ್ತಿಗಳ ಧ್ಯೇಯೋದ್ದೇಶವೇ ಸಮಾಜಮುಖೀ, ಪ್ರಗತಿ ಪರ ಮತ್ತು ಜನಪರ. ಇವೆರಡೂ ಸಮಾಜಸೇವೆಗೆ ಉಜ್ವಲ ಅವಕಾಶ ನೀಡುವ ವಾಹಕಗಳು.
ನಾವು ಯಾವುದೇ ವೃತ್ತಿ-ಪ್ರವೃತ್ತಿ ಯನ್ನು ನಿರ್ವಹಿಸುತ್ತಿರುವಾಗ “ಸೇವಾಹೀ ಪರಮೋ ಧರ್ಮಃ’ ಎಂಬ ಧರ್ಮೋಕ್ತಿಯನ್ನು ಅನುಸರಿ ಸುವುದು ಮುಖ್ಯ. ನಮ್ಮ ವೃತ್ತಿ- ಪ್ರವೃತ್ತಿಯ ನೈಜಮುಖ ಕೆಲವೊಂದು ಸಂದರ್ಭಗಳಲ್ಲಿ ಗೋಚರವಾಗುತ್ತದೆ. ಉದಾ: ಪ್ರಾಕೃತಿಕ ಸಂಕ್ಷೋಭೆ, ಯುದ್ಧ ದಂತಹ ಸಂದರ್ಭಗಳಲ್ಲಿ ಹಲವು ವೃತ್ತಿ- ಪ್ರವೃತ್ತಿಗಳ ಮಹತ್ವ ಬೆಳಕಿಗೆ ಬರುತ್ತವೆ. ಇದೇ ವೇಳೆ ಇಲ್ಲಿ ಅನೆೃತಿಕತೆ ನುಸುಳಿದರೆ ಇವುಗಳು ದಂಧೆಗಳಾಗಿ ಮಾರ್ಪಟ್ಟು ಸಮಾಜದ ಅಗೌರವ, ತಿರಸ್ಕಾರಕ್ಕೆ ಪಾತ್ರರಾಗಬೇಕಾದೀತು.
ಬದುಕಿನ ವೃತ್ತಿಗಳ ನಿರ್ಧರಿಸುವಿಕೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಿಧಿಯದ್ದೇ. ಇಲ್ಲಿ ವಿಧಿಯ ನಿರ್ಧಾರವೇ ಅಂತಿಮ. ಹಾಗಿರುವಾಗ ಬಸವಣ್ಣನವರ “ಕಾಯಕವೇ ಕೆೃಲಾಸ’ ತಣ್ತೀವನ್ನು ನಂಬಿ, ಅಳವಡಿಸಿ ವಿಧಿ ನಮಗೆ ದಯಪಾಲಿಸಿದ ವೃತ್ತಿ -ಪ್ರವೃತ್ತಿಯನ್ನು ನಾವು ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆ, ಧೀಮಂತಿಕೆ, ಸ್ವಂತಿಕೆ, ಪ್ರಬುದ್ಧತೆಗಳಿಂದ ನಿರ್ವಹಿಸಬೇಕು. ನಮ್ಮ ವೃತ್ತಿ-ಪ್ರವೃತ್ತಿಗಳು ಈ ಗುಣಗಳ ಮೇಲೆ ನೆಲೆ ನಿಂತರೆ ಚಂದ. ಈ ಎಲ್ಲ ಗುಣಗಳು ಸಂಸ್ಕಾರ, ಸುಸಂಸ್ಕೃತಿಯ ಬಗೆಬಗೆಯ ಚಹರೆಗಳೂ ಹೌದು. ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಹೃದಯ ಸಿರಿವಂತಿಕೆ ಬೇಕು ಮತ್ತು ಸಮಾಜ ಮುನ್ನಡೆಯಲು ಎಲ್ಲ ವೃತ್ತಿಗಳ ಕೊಡುಗೆ ಅತ್ಯಗತ್ಯ. ಆದ ಕಾರಣ ಆಯಾಯ ರಂಗದ ವೃತ್ತಿಪರರು ತಮ್ಮ ತಮ್ಮ ರಂಗದಲ್ಲಿ ಪ್ರಬುದ್ಧತೆ ಮೆರೆದು ನೆೃತಿಕತೆಯಿಂದ ಕಾರ್ಯಾ ಚರಿಸಿದರೆ ಸಮಷ್ಟಿಗೂ ಶುಭಕರ, ವೆೃಯಕ್ತಿಕವಾಗಿಯೂ ಶ್ರೇಯಸ್ಕರ.
ವೃತ್ತಿ ಕ್ಷೇತ್ರ ಯಾವುದಾದರೇನಂತೆ ಮಹಾನ್ ಸಾಧನೆಗೆೃದು ಸಮಾಜದಲ್ಲಿ ತಮ್ಮ ತಮ್ಮ ವೃತ್ತಿಗಳಿಗೂ ಮತ್ತು ವ್ಯಕ್ತಿಗತವಾಗಿ ಗೌರವ ಕೊಟ್ಟು ಯಶಸ್ಸನ್ನು ಕಂಡ ಸಾಧಕರ ಹಲವು ಉದಾಹರಣೆ ಗಳು ನಮ್ಮಲ್ಲಿವೆ. ತೆರೆಮರೆಯ ಕಾಯಿ ಯಂತೆ ಕಾರ್ಯಾಚರಿಸುವ ಇಂತಹ ಸಾಧಕರು ಇನ್ನೂ ಅದೆಷ್ಟೋ ಸಂಖ್ಯೆಯಲ್ಲಿದ್ದಾರೆ. ಸಣ್ಣ- ಪುಟ್ಟ ಕುಲಕಸುಬುಗಳಲ್ಲಿ ನೂತನ ಆವಿಷ್ಕಾರ/ಇನ್ನಿತರ ವಿಧಾನಗಳ ಮುಖೇನ ರಾಷ್ಟ್ರಸೇವೆಗೈಯುವ ಅನೇಕಾ ನೇಕ ಸಾಧಕರು ನಮ್ಮ ನಡುವಿದ್ದಾರೆ. ಇವರೆಲ್ಲರೂ ವೃತ್ತಿ- ಪ್ರವೃತ್ತಿಯ ಕಡೆ ನೋಡದೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ನಿಷ್ಕಾಮ ಮನೋಭಾವ ದಿಂದ ದುಡಿದು ಸಮಾಜದ ಅಭ್ಯುದಯದ ಕಡೆಗೆ ದೃಷ್ಟಿ ಹರಿಸುವ ವರ್ಗದವರು. ಇವರನ್ನೆಲ್ಲ ಸಮಾಜ ತನ್ನ ಆದರ್ಶವನ್ನಾಗಿಸಿಕೊಳ್ಳಬೇಕು ಮತ್ತು ಅನುಸರಿಸಬೇಕು.
“ಸತ್ ಸಂಕಲ್ಪದಿಂದ ಸಂಕಲ್ಪ ಸಿದ್ಧಿ’ ಎಂಬ ಮಂತ್ರದಂತೆ ವೃತ್ತಿ- ಪ್ರವೃತ್ತಿಯನ್ನು ಸಿದ್ಧಿಸಿ ಸ್ವಾಮಿ ವಿವೇಕಾನಂದರ “ಸರಳ ಜೀವನ ಉನ್ನತ ಚಿಂತನೆ’ ಎಂಬ ನುಡಿಯಂತೆ ಇವೆರಡನ್ನು ಸಾಕ್ಷಾತ್ಕರಿಸಬೇಕು. ಆಗ ಜೀವನವು ಆತಂಕ- ಖನ್ನತೆ ಮುಕ್ತ ವಾಗಿ, ಸುಂದರವಾಗಿ ಅರಳಿ ಸಮಾಜ ದೊಂದಿಗೆ ರಾಷ್ಟ್ರವೂ ಆರೋಗ್ಯಪೂರ್ಣ ವಾಗುವುದು ಮತ್ತು ನವ ಅರುಣೋದ ಯತ್ತ ಸಾಗುವುದು. ಆದ ಕಾರಣ ನಮ್ಮ ವೃತ್ತಿ-ಪ್ರವೃತ್ತಿಗಳೆರಡೂ ಪ್ರಾಮಾಣಿಕತೆ ಯಿಂದ ಆಪ್ಯಾಯಮಾನವಾಗಿರಲಿ.
- ಸಂದೀಪ್ ನಾಯಕ್ ಸುಜೀರ್, ಮಂಗಳೂರು