ಬೆಂಗಳೂರು: ಮತದಾನದ ಸಮಯದಲ್ಲಿ ಒತ್ತಡ ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಹಾಗೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ. ಪಿ. ಸಂಜೀವ್‌ಕುಮಾರ್ ಹೇಳಿದ್ದಾರೆ.
ಯಲಹಂಕ ಬಳಿಯ ರೇವಾ ವಿಶ್ವವಿದ್ಯಾಲಯದಲ್ಲಿ ರೇವಾ ಎಲೆಕ್ಟೋಲ್ ಮತದಾನ ಸಾಕ್ಷರತಾ ಸಂಘಟನೆ ಆಯೋಜಿಸಿದ್ದ ಮತ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸುಮಾರು 200 ಕೋಟಿ ರೂ. ಮೌಲ್ಯದ ಸೀರೆ, ಮದ್ಯ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಧುನಿಕತೆಯತ್ತೆ ಮುಖ ಮಾಡಿರುವ ರಾಷ್ಟ್ರದಲ್ಲಿ ಇಂತಹ ಆಮಿಷಗಳಿಗೆ ಯಾರೂ ಒಳಗಾಗಬಾರದು ಎಂದು ಸಲಹೆ ನೀಡಿದರು.
ಸಾರ್ವಜನಿಕರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು ಹಾಗೂ ಪ್ರತಿ ಚುನಾವಣೆಯಲ್ಲಿ ನೈತಿಕವಾಗಿ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ರೇವಾ ವಿವಿ ಮಾಡುತ್ತಿದೆ. ದೇಶದಲ್ಲಿ ಸುಮಾರು 75 ಸಾವಿರ ಕೋಟಿಗೂ ಅಧಿಕ ಮತದಾರರಿದ್ದು, ನಗರ ಪ್ರದೇಶದಲ್ಲಿ ಶೇ.50, ಗ್ರಾಮೀಣ ಪ್ರದೇಶದಲ್ಲಿ ಶೇ.85 ರಷ್ಟು ಮತದಾನದ ನಡೆಯುತ್ತಿದೆ.
ಇದರ ಪ್ರಮಾಣ ಹೆಚ್ಚಾಗಬೇಕಿದೆ. ಇಂದು ನಗರ ಪ್ರದೇಶದ ವಿದ್ಯಾವಂತರು ಮತದಾನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಿವೃತ್ತ ಮುಖ್ಯ ಚುನಾವಣಾಧಿಕಾರಿ ಶ್ರೀನಿವಾಸಾಚಾರಿ, ರೇವಾ ವಿವಿ ಕುಲಪತಿ ಡಾ. ಎಸ್.ವೈ. ಕುಲಕರ್ಣಿ, ಕುಲಸಚಿವ ಡಾ. ಎಂ. ಧನಂಜಯ, ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಇತರರು ಭಾಗವಹಿಸಿದ್ದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 800 ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಮತದಾನ ಜಾಗೃತಿ ಆರಂಭಿಸಲಾಗಿದೆ. ಇಲ್ಲಿ ಶೇ.85 ರಷ್ಟು ಮತದಾನವಾಗುತ್ತಿದೆ. ಈ ಅಭಿಯಾನದಿಂದ ಶೇ.100 ರಷ್ಟು ಮತದಾನ ಆಗುವಂತೆ ಮಾಡುವುದು ನಮ್ಮ ಗುರಿ. ಇದಕ್ಕಾಗಿ 15 ದಿನಗಳವರೆಗೆ ಕ್ಷೇತ್ರದ ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮತ ಪಟ್ಟಿಗೆ ಹೆಸರು ಸೇರಿಸುವಂತೆ ಮನವಿ ಮಾಡಲಾಗುವುದು.
-ಡಾ. ಪಿ. ಶ್ಯಾಮರಾಜು, ರೇವಾ ವಿವಿ ಕುಲಾಧಿಪತಿ