ಮಂಗಳೂರು: ಕಳೆದುಹೋಗಿದ್ದ ವಜ್ರದ ಬಳೆ ಟ್ರಾಲಿ ರಿಟ್ರೀವರ್ ಸಿಬಂದಿಯ ಮೂಲಕ ವಾರಸುದಾರರಿಗೆ ದೊರಕಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಅಶ್ರಫ್ ಮೊಯ್ದಿನ್ ವಿಮಾನ ನಿಲ್ದಾಣದ ಭದ್ರತಾ ತಂಡದ ಮೂಲಕ ಬಳೆ ಮರಳಿಸಿದ ಸಿಬಂದಿ.
ಬೆಂಗಳೂರಿನಿಂದ ಬಂದಿದ್ದ ಸಂಬಂಧಿ ಯನ್ನು ಕರೆದೊಯ್ಯಲು ಬಂದಿದ್ದ ಮಹಿಳೆ ಬಳೆಯನ್ನು ಕಳೆದುಕೊಂಡಿದ್ದರು. ವಿಮಾನ ನಿಲ್ದಾಣದಿಂದ ತೆರಳಿದ ಬಳಿಕ ಬಳೆ ಕಳೆದು ಹೋಗಿರುವುದು ಅರಿವಿಗೆ ಬಂದಿದ್ದು ಬೆಂಗಳೂರಿನಿಂದ ಆಗಮಿಸಿದ್ದ ಪ್ರಯಾಣಿಕರ ಬಳಿ ವಿಷಯ ತಿಳಿಸಿದ್ದರು. ಅವರು ತತ್‌ಕ್ಷಣ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್‌ಗೆ ಮಾಹಿತಿ ನೀಡಿ ಪತ್ತೆಹಚ್ಚುವಂತೆ ಕೋರಿದ್ದರು.
ನಿಲ್ದಾಣದಲ್ಲಿ ಟ್ರಾಲಿ ರಿಟ್ರೀವರ್ ಸಿಬಂದಿ ಅಶ್ರಫ್ ಮೊಯ್ದಿàನ್ ಅವರಿಗೆ ಟರ್ಮಿನಲ್ ಕೆಳ ಮಹಡಿಯ ನಿರ್ಗಮನ ಭಾಗದಲ್ಲಿ ಈ ಬಳೆ ದೊರಕಿದ್ದು, ಅದನ್ನು ಭದ್ರತಾ ತಂಡಕ್ಕೆ ಹಸ್ತಾಂತರಿಸಿದ್ದರು. ಪ್ರಯಾಣಿಕರ ಕೋರಿಕೆಯಂತೆ ಕಾರ್ಯಪ್ರವೃತ್ತರಾದ ಟರ್ಮಿನಲ್ ಮ್ಯಾನೇಜರ್‌ಗೆ ಭದ್ರತಾ ತಂಡಕ್ಕೆ ಅದಾಗಲೇ ಅಶ್ರಫ್ ಹಸ್ತಾಂತರಿಸಿದ್ದ ಬಳೆಯೇ ಅದು ಎಂಬುದು ಖಚಿತಗೊಂಡಿತ್ತು.
ಇದನ್ನೂ ಓದಿ:ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್
ಅಶ್ರಫ್ ಅವರು ಪ್ರಯಾಣಿಕರಿಗೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಸಂಬಂಧಪಟ್ಟ ಅಧಿಕಾರಿಗೆ ಹಸ್ತಾಂತರಿಸಿದ ಎರಡನೇ ಉದಾಹರಣೆ ಇದಾಗಿದ್ದು ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಮೂಲ್ಯವಾದ ಬಳೆಯನ್ನು ಮರಳಿ ಪಡೆದ ಮಹಿಳೆಯ ಮುಖದಲ್ಲಿನ ಸಂತೋಷವೇ ನನ್ನಲ್ಲಿ ಅತ್ಯಂತ ಧನ್ಯತಾ ಭಾವ ಮೂಡಿಸಿತು ಎಂದು ಅಶ್ರಫ್ ಹೇಳಿದ್ದಾರೆ. ಮಹಿಳೆಯು ಅಶ್ರಫ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.