ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ನಗದು ಹಣ ಮತ್ತು ಇತರ ಹಲವು ದಾಖಲೆಗಳನ್ನು ಒಳಗೊಂಡ ಪರ್ಸ್‌ನ್ನು ರೈಲ್ವೇ ಪೊಲೀಸರಿಗೆ ಒಪ್ಪಿಸಿ ಅದು ವಾರಸು ದಾರರಿಗೆ ತಲುಪುವಂತೆ ವ್ಯವಸ್ಥೆ ಮಾಡುವ ಮೂಲಕ ಹಿರಿಯ ನಾಗರಿಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕಾಸರಗೋಡಿನ ಅಶ್ವಿನಿ ನಗರದ ಜಯಪ್ರಕಾಶ್ ಶೆಣೈ (64) ಪ್ರಾಮಾಣಿಕತೆ ಮೆರೆದವರು. ಮಂಗಳೂರು ತಾಲೂಕು ಹರೇಕಳ ಪಂಜಿಮಾಡಿಯ ಮಹಮದ್ ಸಕೀರ್ (28) ಕಳೆದುಕೊಂಡ ಪರ್ಸ್ ಮರಳಿ ಪಡೆದವರು.
ಅ. 4ರಂದು ಬೆಳಗ್ಗೆ 8.45ಕ್ಕೆ ಜಯಪ್ರಕಾಶ್ ಅವರಿಗೆ ಪರ್ಸ್ ಸಿಕ್ಕಿದ್ದು, ಅದರಲ್ಲಿ 67,685 ರೂ. ನಗದು, 4 ಎಟಿಎಂ ಕಾರ್ಡ್‌ಗಳು, ಎರಡು ಡ್ರೈವಿಂಗ್ ಲೈಸನ್ಸ್‌ಗಳಿದ್ದವು.
ಅದನ್ನು ರೈಲ್ವೇ ಸುರಕ್ಷತಾ ಪಡೆಯ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಇನ್‌ಸ್ಪೆಕ್ಟರ್ ಪರ್ಸ್‌ನಲ್ಲಿದ್ದ ವಿಳಾಸದ ಮೂಲಕ ವಾರಸುದಾರರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. 11 ಗಂಟೆ ವೇಳೆಗೆ ಮಹಮದ್ ಸಕೀರ್ ಆರ್‌ಪಿಎಫ್ ಕಚೇರಿಗೆ ಭೇಟಿ ನೀಡಿ ಪರ್ಸ್‌ನ ಗುರುತು ಹೇಳಿದರು. ಪಾರ್ಸೆಲ್ ಬುಕಿಂಗ್‌ಗೆಂದು ರೈಲು ನಿಲ್ದಾಣಕ್ಕೆ ಬರುತ್ತಿದ್ದಾಗ ಪ್ಯಾಂಟ್ ಕಿಸೆಯಿಂದ ಪರ್ಸ್ ಬಿದ್ದು ಹೋಗಿತ್ತು ಎಂದು ತಿಳಿಸಿದರು.
ರೈಲು ನಿಲ್ದಾಣದ ಡೆಪ್ಯೂಟಿ ಸ್ಟೇಶನ್ ಮ್ಯಾನೇಜರ್ ಕಿಶನ್ ಸಮಕ್ಷಮ ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಜಯಪ್ರಕಾಶ್ ಶೆಣೈ ಅವರನ್ನು ಅಭಿನಂದಿಸಿ ಸಮ್ಮಾನಿಸಿದರು. ರೈಲು ನಿಲ್ದಾಣದಲ್ಲಿ ಅಥವಾ ಆವರಣದಲ್ಲಿ ಸೊತ್ತುಗಳನ್ನು ಕಳೆದುಕೊಂಡರೆ ಅಥವಾ ಯಾವುದೇ ಸಮಸ್ಯೆಗಳಿದ್ದರೆ ಆರ್‌ಪಿಎಫ್ ಹೆಲ್ಪ್ಲೈನ್ (ಉಚಿತ) ನಂ. 182 ಸಂಪರ್ಕಿಸಬಹುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.