ಮುದ್ದೇಬಿಹಾಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್. ಪತ್ತೇಪೂರ ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದ ಬ್ಯಾಗ್ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮುದ್ದೇಬಿಹಾಳ-ನಾಲತವಾಡ-ನಾರಾಯಣಪುರ ತಡೆ ರಹಿತ ಬಸ್‍ಗೆ ಪತ್ತೇಪೂರ ಚಾಲಕ ಕಂ ನಿರ್ವಾಹಕರಾಗಿದ್ದರು. ಕರ್ತವ್ಯದಲ್ಲಿದ್ದರು. ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಕಿವಿಯೋಲೆ, ಉಂಗುರ, ಬೋರಮಾಳ, ಚೈನ್ ಮುಂತಾದ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗನ್ನು ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು.
ವಾರಸುದಾರರಿಲ್ಲದ ಬ್ಯಾಗ್ ಗಮನಿಸಿದ ನಿರ್ವಾಹಕ ಅದನ್ನು ಜೋಪಾನವಾಗಿ ತೆಗೆದಿರಿಸಿ ಘಟಕದ ಭದ್ರತಾ ಸಿಬ್ಬಂದಿ ಮತ್ತು ಸಾರಿಗೆ ನಿರೀಕ್ಷಕರ ಸುಪರ್ದಿಗೆ ಒಪ್ಪಿಸಿದ್ದರು. ಬಸ್ ಮರಳಿ ಮುದ್ದೇಬಿಹಾಳದತ್ತ ಬಂದಾಗ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆ ತನ್ನ ಪತಿಯ ಸಮೇತ ಸಾರಿಗೆ ಘಟಕಕ್ಕೆ ಧಾವಿಸಿ ಇಂಥ ಬಸ್‍ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದು ಸಿಕ್ಕಿದೆಯೇ ಎಂದು ವಿಚಾರಿಸತೊಡಗಿದ್ದರು. ವಿಷಯ ತಿಳಿದ ಪತ್ತೇಪೂರ ಮಹಿಳೆ ಮತ್ತು ಆಕೆಯ ಪತಿಯನ್ನು ಘಟಕದ ಭದ್ರತಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದು ಬ್ಯಾಗ್‍ನೊಳಗೆ ಏನೇನು ಇದ್ದವು ಎಂದು ಕೇಳಿ ತಿಳಿದು, ನಂತರ ಎಲ್ಲರ ಸಮ್ಮುಖದಲ್ಲೇ ಮಹಿಳೆಗೆ ಬ್ಯಾಗ್ ನೀಡಿ ಅದರಲ್ಲಿರುವ ಚಿನ್ನಾಭರಣಗಳು ಜೋಪಾನವಾಗಿರುವುದನ್ನು ಪರಿಶೀಲಿಸಲು ತಿಳಿಸಿದರು.
ದುಗುಡ, ಗಾಬರಿಯಿಂದಲೇ ಬ್ಯಾಗ್‍ನಲ್ಲಿದ್ದ ಕೆಲ ಸಣ್ಣಪುಟ್ಟ ಬ್ಯಾಗ್ ಪರಿಶೀಲಿಸಿ ಚಿನ್ನಾಭರಣಗಳನ್ನು ತೆಗೆದು ನೋಡಿ ಎಲ್ಲವೂ ಜೋಪಾನವಾಗಿವೆ ಎಂದು ಆಫ್ರೀನ್ ತಿಳಿಸಿ ಪತ್ತೇಪೂರ ಅವರಿಗೆ ಕೃತಜ್ಞತೆ ತಿಳಿಸಿದರು.
ಘಟಕದ ಸಹಾಯಕ ನಿಯಂತ್ರಕ ವಿಠ್ಠಲ ಲಮಾಣಿ, ಸಾರಿಗೆ ನೌಕರರ ಸಂಘಟನೆಯ ಮುಖಂಡ ಯಮನಪ್ಪ ಹಂಗರಗಿ, ಮಹಿಬೂಬ ನಾಯ್ಕೋಡಿ, ಘಟಕದ ಭದ್ರತಾ ಸಿಬ್ಬಂದಿ, ಸಾರಿಗೆ ಸಿಬ್ಬಂದಿ ಇದ್ದು ಕಂಡಕ್ಟರ್ ಪತ್ತೇಪೂರ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು.