ಕಲಬುರಗಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯೋಜನೆಗಳ ಫಲಾನುಭವಿಗಳ ಸಂವಾದ ಕಾರ್ಯಕ್ರಮ ಆಯೋಜಿಸಿ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ನಗರದ ಅಂಧ ಬಾಲಕರ ಶಾಲೆಯಲ್ಲಿ ಶುಕ್ರವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಲಿಂಗತ್ವ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆಯಡಿ ಆಯ್ಕೆಯಾದ 21 ಫಲಾನುಭವಿಗಳಿಗೆ ಸಾಲ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಬ್ಯಾಂಕ್‌ನ ಜತೆ ವ್ಯವಹರಿಸುವ ಘಟಕ ಸ್ಥಾಪನೆ ಅಗತ್ಯ ಮಾಹಿತಿ ಒದಗಿಸುವ ಅರಿವು ಕಾರ್ಯಾಗಾರ ಜರುಗಿತು.
ಕಾರ್ಯಾಗಾರ ಉದ್ಘಾಟಿಸಿದ ಮಾತನಾಡಿದ ಅವರು, ಮಹಿಳಾ ಅಭಿವೃದ್ಧಿ ನಿಗಮವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಮಾಜದ ತಳಮಟ್ಟದಲ್ಲಿರುವ ವಿಮುಕ್ತ ದೇವದಾಸಿ ಮಹಿಳೆಯರು, ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು. ಎಚ್‌ಐವಿ ಸೋಂಕಿತ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಯೋಜನೆಗಳು ಸಮಾಜದ ಕಟ್ಟ ಕಡೆಯ ಮಹಿಳೆಯರಿಗೆ ಸಮಾನವಾಗಿ ತಲುಪಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ನಿಗಮದ ಯೋಜನೆಗಳ ಅನುಷ್ಠಾನದಲ್ಲಿನ ತೊಡಕು ನಿವಾರಿಸಲು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯೋಜನೆಗಳ ಫಲಾನುಭವಿಗಳ ಸಂವಾದ ಕಾರ್ಯಕ್ರಮ ಆಯೋಜಿಸಿ ಸಮಸ್ಯೆ ಆಲಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಿ.ಎಸ್. ಗುಣಾರಿ ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಿರುವ ಕಾರಣ ಸಾಲದ ಹಣವನ್ನು ಸದುಪಯೋಗ ಪಡೆದು ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದರು. ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎ.ವಿ. ಪಾಟೀಲ, ಸಾಲ ನಿರ್ವಹಣೆ, ಘಟಕ ಸ್ಥಾಪನೆ, ಮರುಪಾವತಿ, ಕೇಂದ್ರ ಸರ್ಕಾರದ ಯೋಜನೆಗಳು, ಕ್ರೆಡಿಟ್ ಕಾರ್ಡ್, ಪೋನ್ ಪೇ, ಗೂಗಲ್ ಪೇ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.