“ಹೊಂದಿಸಿ ಬರೆಯಿರಿ’ ಚಿತ್ರ ತನ್ನ ವಿಭಿನ್ನ ಶೀರ್ಷಿಕೆ, ಹಾಡು, ಟೀಸರ್ ಜೊತೆಯಲ್ಲಿ ಭಿನ್ನ ಪ್ರಚಾರದ ಮೂಲಕ ಎಲ್ಲಡೆ ಮನೆಮಾತಾಗಿರುವ ಚಿತ್ರ. ಚಿತ್ರ ಬಿಡುಗೆಡೆ ಸನಿಹದಲ್ಲಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ “ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, “ಹೊಂದಿಸಿ ಬರೆಯಿರಿ ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬಾಲ್ಯ. ಆದರೆ, ನಮ್ಮ ಚಿತ್ರ ಪರಿಸ್ಥಿತಿ ಬಂದಂತೆ ಜೀವನವನ್ನು ಸ್ವೀಕರಿಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸುತ್ತದೆ. ಅದಕ್ಕೆ ಬದುಕು ಬಂದಂತೆ ಸ್ವೀಕರಿಸಿ ಎನ್ನುವ ಟ್ಯಾಗ್ ಲೈನ್ ನೀಡಿದ್ದೇವೆ. ಇದು ಐದು ಜನ ಸ್ನೇಹಿತರ 12 ವರ್ಷದ ಜರ್ನಿ. ಕಾಲೇಜು, ಕಾಲೇಜು ನಂತರದ ದಿನಗಳು, ಮದುವೆ ಕಥೆಯಲ್ಲಿ ಚಿತ್ರ ಸಾಗಲಿದೆ’ ಎಂದರು.
ನಟ ಪ್ರವೀಣ್ ಮಾತನಾಡಿ,”ಈ ಸಿನಿಮಾದ ನಿಜವಾದ ನಾಯಕ ನಿರ್ದೇಶಕ ಜಗನ್ನಾಥ್ ಅಂದರೆ ತಪ್ಪಾಗಲಾರದು. ಚಿತ್ರ ತುಂಬ ಸುಂದರವಾಗಿ ಮೂಡಿ ಬಂದಿದೆ. ಬಹುತಾರಾಗಣದ ಈ ಚಿತ್ರದಲ್ಲಿ ಅಭಿನಯಿಸಿದ್ದು ಒಂದು ಉತ್ತಮ ಅನುಭವ. ಫೆ 10 ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರ ಸಹಕಾರ ಇರಲಿ’ ಅಂದರು.
ನಟ ನವೀನ್ ಮಾತನಾಡಿ, “ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಚಿತ್ರದ ಆಶಯ. ಹೊಂದಿಸಿ ಬರೆಯಿರಿ ಸ್ನೇಹದ ಸುತ್ತ, ಸಂಬಂಧಗಳ, ಬಾಂಧ್ಯವಗಳ ಸುತ್ತ ಸಾಗುತ್ತದೆ. ಇನ್ನು ಈ ಚಿತ್ರ ಕೇವಲ ಒಂದು ವರ್ಗಕ್ಕೆ ಸಲ್ಲುತ್ತದೆ ಎಂದು ಹೆಸರಿಸಲು ಸಾಧ್ಯವಿಲ್ಲ. ಎಲ್ಲಾ ವಯೋಮಾನದವರೂ ನೋಡಬಹುದಾದ ಲೈಟ್ ಹಾರ್ಟೆಡ್ ಚಿತ್ರ ಎನ್ನಬಹುದು’ ಎಂದರು.
ನಟಿ ಐಶಾನಿ ಶೆಟ್ಟಿ ಮಾತನಾಡಿ, “ಚಿತ್ರದಲ್ಲಿ ಸನಿಹಾ ಎಂಬ ಪಾತ್ರ ಮಾಡಿದ್ದೇನೆ. ಕಥೆ ಸುಂದರವಾಗಿದೆ, ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ನಾವು ಕಾಣೋಲ್ಲ, ಬದಲಾಗಿ ಪಾತ್ರಗಳು ಕಾಣುತ್ತದೆ. ಎದೆ ತುಂಬಿ ಬರುತ್ತದೆ. ಎಲ್ಲ ಭಾವನೆಗಳು ಅನುಭವಕ್ಕೆ ಬರುತ್ತದೆ. ಹೊಂದಿಸಿ ಬರೆಯಿರಿ ಚಿತ್ರ ಫೀಲ್‌ಗುಡ್ ಸಿನಿಮಾವಾಗಿ ಮನಸ್ಸಿಗೆ ಹತ್ತಿರವಾಗುತ್ತದೆ’ ಎಂದರು,
ಚಿತ್ರದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹಾದೇವ್, ಅನಿರುದ್ಧ ಆಚಾರ್ಯ ನಾಯಕಿಯ ರಾದ ಐಶಾನಿ ಶೆಟ್ಟಿ, ಸಂಯುಕ್ತಾ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್, ಅರ್ಚನಾ ಕೊಟ್ಟಿಗೆ ಸೇರಿದಂತೆ ಅನೇಕರು ನಟಿಸಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಜಗನ್ನಾಥ್ ಹಾಗೂ ಅವರ ಸ್ನೇಹಿತರ ಬಳಗದ “ಸಂಡೇ ಸಿನಿಮಾಸ್’ ಬ್ಯಾನರ್‌ನ ನಿರ್ಮಾಣವಿದೆ.
ವಾಣಿ ಭಟ್ಟ