ಬೆಳ್ಮಣ್: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾ.ಪಂ. ವ್ಯಾಪ್ತಿಯ ಕೆದಿಂಜೆಯಿಂದ ಉರ್ಕಿದೊಟ್ಟು ಶ್ರೀ ಅಬ್ಬಗ ದಾರಗ ದೇವಸ್ಥಾನವನ್ನು ಸಂಪರ್ಕಿಸುವ ಈ ರಸ್ತೆ ತೀರ ಹದಗೆಟ್ಟಿದ್ದು ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡು ಜಲ್ಲಿ ಟಾರು ಎದ್ದು ಹೋಗಿ ವಾಹನ ಸಂಚಾರದ ಜತೆ ನಡೆದಾಡಲೂ ಅಸಾಧ್ಯವಾಗಿದೆ.
ದೇಗುಲದ ಪ್ರಮುಖ ರಸ್ತೆ
ಸುಮಾರು 2 ಕಿ.ಮೀ. ಉದ್ದದ ಈ ರಸ್ತೆಯನ್ನು ಪ್ರಮುಖವಾಗಿ ದೇಗುಲಕ್ಕೆ ಬರುವ ಭಕ್ತರ ಉಪಯೋಗಕ್ಕಾಗಿ ನಿರ್ಮಿಸಲಾಗಿತ್ತು. ಇದೀಗ ಈ ರಸ್ತೆ ಬರುವ ಭಕ್ತರಿಗೆ ಸಮಸ್ಯೆಯುಂಟು ಮಾಡಿದೆ. ಈ ರಸ್ತೆಯನ್ನು ಸಂಪರ್ಕಿಸುವ ಎರಡು ಪುಣ್ಯ ಕ್ಷೇತ್ರಗಳು ಮುಜಲೊಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇಗುಲ ಹಾಗೂ ಉರ್ಕಿದೊಟ್ಟು ಅಬ್ಬಗ ದಾರಗ ದೇಗುಲ. ಆದರೆ ಈ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸಂಪೂರ್ಣ ಹದಗೆಟ್ಟ ಪರಿಣಾಮ ಭಕ್ತರ ಸಹಿತ ಇತರರೂ ಸಂಕಟ ಅನುಭವಿಸುವಂತಾಗಿದೆ ಹಾಗೂ ಈ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು ಇಲ್ಲಿನ ಗ್ರಾಮಸ್ಥರು ನಿತ್ಯ ನರಕ ಯಾತನೆ ಪಡುವಂತಾಗಿದೆ.
ಘನವಾಹನದ ಸಂಚಾರ ರಸ್ತೆ ಹದಗೆಡಲು ಕಾರಣ
Advertisement
ಈ ರಸ್ತೆಗೆ ಡಾಮರುಗೊಂಡು ಹಲವು ವರ್ಷಗಳು ಕಳೆದರೂ ನಿರ್ವಹಣೆಯ ಕೊರತೆಯಿಂದಾಗಿ ದುರಸ್ತಿಯಾಗಿಲ್ಲ. ಇದರ ಪರಿಣಾಮ ಇದೀಗ ಈ ರಸ್ತೆಯಲ್ಲಿ ಸಣ್ಣ ಪುಟ್ಟ ವಾಹನಗಳು ಕೂಡ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.
Related Articles
Advertisement
ಈ ಭಾಗದಲ್ಲಿ ಕಲ್ಲು ಕೋರೆ ಕಾರ್ಯಾಚರಿಸುತ್ತಿದ್ದು ಅಲ್ಲಿಗೆ ಬರುವ ಭಾರೀ ಘನ ವಾಹನಗಳ ಆರ್ಭಟಕ್ಕೆ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ ಮತ್ತು ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಸ್ ಸಂಚಾರವೇ ಇಲ್ಲ
ಈ ಭಾಗದಲ್ಲಿ ಬಸ್ ಸಂಚಾರವಿಲ್ಲದ ಕಾರಣ ಈ ಭಾಗದ ಗ್ರಾಮಸ್ಥರು ತಮ್ಮ ಸ್ವಂತ ವಾಹನ ಅಥವಾ ಬಾಡಿಗೆ ವಾಹನವನ್ನೇ ನಂಬಿ ಸಾಗಬೇಕಾಗುತ್ತದೆ. ಅದರಲ್ಲೂ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಾರೆ ಎನ್ನುವುದು ಬಹುತೇಕ ಗ್ರಾಮಸ್ಥರ ಆರೋಪ. ತೀರ ಹದಗೆಟ್ಟ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲು ಎದ್ದು ಬೃಹತ್ ಗಾತ್ರದ ಹೊಂಡಗಳೂ ನಿರ್ಮಾಣಗೊಂಡಿದ್ದು ಇನ್ನೇನು ಮಳೆಗಾಲ ಆರಂಭಗೊಂಡರೆ ಶಾಲಾ ಮಕ್ಕಳು, ದಾರಿಹೋಕರು ಕೆಸರು ನೀರನ್ನೇ ತಮ್ಮ ಮೈಮೇಲೆ ಎರಚಿಕೊಳ್ಳುವ ಸಾಧ್ಯತೆ ಹೆಚ್ಚಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಈ ಭಾಗದ ಶಾಸಕರು, ಜನಪ್ರತಿನಿಧಿಗಳು ಈ ರಸ್ತೆಗೆ ಕಾಯಕಲ್ಪ ನೀಡಬೇಕಾಗಿದೆ.
ಡಾಮರು, ಕಾಂಕ್ರೀಟ್ ಕಾಮಗಾರಿ ಅಗತ್ಯ
2004ರಲ್ಲಿ ಡಾಮರು ನಡೆದಿದ್ದು ಆ ಬಳಿಕ ಮತ್ತೆ ತೇಪೆ ಕಾರ್ಯಮಾತ್ರ ನಡೆದಿದೆ, ಭಕ್ತರ ಅನುಕೂಲಕ್ಕಾಗಿ ಈ ರಸ್ತೆಗೆ ಸಂಪೂರ್ಣ ಡಾಮರು ಅಥವಾ ಕಾಂಕ್ರೀಟ್ ಅಗತ್ಯವಿದೆ.
-ಕೆದಿಂಜೆ ಸುಪ್ರೀತ್ ಶೆಟ್ಟಿ,, ಜಿಲ್ಲಾ ಪಂ. ಮಾಜಿ ಸದಸ್ಯ
– ಶರತ್ ಶೆಟ್ಟಿ ಮುಂಡ್ಕೂರು