Advertisement

ಉಸ್ತುವಾರಿ ಸಚಿವರಿಗೆ ಸದ್ಬುದ್ಧಿ ಕೊಡಿ :ಡಾ|ಭಟ್‌ ಪ್ರಾರ್ಥನೆ

03:03 PM Jun 20, 2017 | Harsha Rao |

ಬಂಟ್ವಾಳ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಳ್ಳೆಯ ಬುದ್ಧಿಯನ್ನು ಕೊಡು ಎಂದು ಶ್ರೀರಾಮ, ಹನುಮಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಲ್ಲಡ್ಕದಲ್ಲಿ ಹಿಂದೂ, ಮುಸಲ್ಮಾನ ನಾಗರಿಕರೆಲ್ಲರೂ ಪರಸ್ಪರ ಸೌಹಾರ್ದದಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ಘರ್ಷಣೆ ಇಲ್ಲ. ಯಾರೋ ಕೆಲವರು ಸಮಸ್ಯೆಯನ್ನು ಸೃಷ್ಟಿಸಿದ್ದಾರೆ ಎಂದು ಡಾ| ಪ್ರಭಾಕರ ಭಟ್‌ ತಿಳಿಸಿದ್ದಾರೆ.

Advertisement

ಜಿಲ್ಲಾ ಉಸ್ತುವಾರಿ ಸಚಿವರ ವೈರಲ್‌ ವೀಡಿಯೊ ಹೇಳಿಕೆಯನ್ನು ಉದ್ಧರಿಸಿ ಮಾಧ್ಯಮ ಮಂದಿ ಸೋಮವಾರ ಕಲ್ಲಡ್ಕದಲ್ಲಿ ಡಾ| ಭಟ್‌ ಅವರನ್ನು ಸಂದರ್ಶಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.

ತುಳುನಾಡಿಗೆ ಒಂದು ವಿಶೇಷತೆ ಇದೆ. ಇಲ್ಲಿನ ಜನರು ಸುಸಂಸ್ಕೃತರು. ನಾವು ಯಾವತ್ತೂ ಇನ್ನೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದಿಲ್ಲ. ಸಚಿವರಾಗಿ ಇಂತಹ ಪದಬಳಕೆ ಮಾಡಿರುವುದು ಜಿಲ್ಲೆಯ ಜನತೆಗೆ, ನಾಡಿಗೆ ಮಾಡಿರುವ ಅವಮಾನ. ಪೊಲೀಸ್‌ ಅಧಿಕಾರಿಯನ್ನು ಎದುರಿಗೆ ಕೂರಿಸಿಕೊಂಡು ಅವರಿಗೆ ಆದೇಶ ಮಾಡುವಂತಿಲ್ಲ. ಅವರು ಅವರ ಕರ್ತವ್ಯ ಮಾಡಲು ಬಿಡಬೇಕು. ಅಧಿಕಾರಿಗಳನ್ನು ಬಳಸಿಕೊಂಡು ಮಾಡಿರುವ ಕೃತ್ಯ ಸರಿಯಲ್ಲ ಎಂದರು.

ಸಚಿವರು ದೊಡ್ಡ ಮನೆತನದವರು, ಅವರ ಕುಟುಂಬದಲ್ಲಿ ವೈದ್ಯರು, ಎಂಜಿನಿಯರ್‌ಗಳು ಇದ್ದಾರೆ. ಇವರೇಕೆ ಇಂತಹ ಸಣ್ಣತನ ತೋರುತ್ತಿದ್ದಾರೆ ಎಂದು ಅರ್ಥವಾಗುವುದಿಲ್ಲ. ನಾನು ಕೋಮು ಪ್ರಚೋದನೆ ಮಾಡಿರುವುದಕ್ಕೆ ದಾಖಲೆ ಇದ್ದರೆ ತೋರಿಸಲಿ. ಅವರದೇ ಸರಕಾರ ಇದೆ. ಕೇಸ್‌ ಮಾಡಿ ನನ್ನನ್ನು ಬಂಧಿಸಲಿ, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ಭಟ್‌ ಹೇಳಿದರು.

ದ್ವೇಷ ಸಾಧನೆ ಇಲ್ಲ
ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೀರಾ ಎಂದಾಗ ಅದೆಲ್ಲ ರಾಜಕೀಯಕ್ಕೆ ಸಂಬಂಧಿಸಿದ್ದು ನಮ್ಮ ಕ್ಷೇತ್ರವೇ ಬೇರೆ. ನಮಗೆ ದ್ವೇಷ ಸಾಧನೆ, ಪ್ರತೀಕಾರ ತೀರಿಸುವುದು, ಹಿಂಸೆ ಬೇಕಾಗಿಲ್ಲ. ನಾವು ರಾಜಕೀಯದವರಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

ದೇಶಭಕ್ತರ ಸಂಖ್ಯೆ ವೃದ್ಧಿಸಲಿ
ಪೊಲೀಸ್‌ ಇಲಾಖೆಯಲ್ಲಿ ಸಂಘದವರು ಸೇರಿಕೊಂಡಿದ್ದಾರೆ ಎಂದು ರೈಗಳು ಆರೋಪಿಸುತ್ತಾರಲ್ಲ ಎಂದಾಗ ಆರ್‌ಎಸ್‌ಎಸ್‌ ಎಂದರೆ ದೇಶಭಕ್ತಿಯ ಸಂಘಟನೆ, ದೇಶಭಕ್ತರು ಸೇವೆಯಲ್ಲಿ ಇರಬಾರದು ಎಂಬುದಾಗಿದೆಯೇ. ಇರುವುದಾದರೆ ಅದು ನನಗೆ ಸಂತೋಷ, ಪೊಲೀಸ್‌ ಇಲಾಖೆ ದೇಶಭಕ್ತರನ್ನು ಹೊಂದಿ ಸರಿಯಾಗಿದೆ ಎಂದರ್ಥ. ಅದು ಹೆಮ್ಮೆಯ ಸಂಗತಿ, ಪತ್ರಕರ್ತರಲ್ಲಿ ಆರ್‌ಎಸ್‌ಎಸ್‌ ಸದಸ್ಯರು ಇರುವುದಾದರೆ ಸಂತಸ ಪಡುವ ವಿಚಾರ. ಅಂಥವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಕಲ್ಲಡ್ಕ ಶ್ರೀರಾಮ ಮಂದಿರ ವಾಣಿಜ್ಯ ಸಂಕೀರ್ಣ ಅದು ರಾಮ ಮಂದಿರವಲ್ಲ ಎಂಬ ಸಚಿವರ ಹೇಳಿಕೆಯ ಬಗ್ಗೆ ನಿಮ್ಮ ವಿಚಾರವೇನು ಎಂದಾಗ ಕಲ್ಲಡ್ಕ ಶ್ರೀರಾಮ ಮಂದಿರವೇ ಬೇರೆ, ವಾಣಿಜ್ಯ ಸಂಕೀರ್ಣವೇ ಬೇರೆ. ಸಚಿವರಿಗೆ ವಾಸ್ತವ ವಿಚಾರ ತಿಳಿದಿಲ್ಲ  ಎಂದರು.

ಜೂ. 24: ಪ್ರತಿಭಟನೆ
ಒಮ್ಮೆಯಾದರೂ ಸಚಿವರಾಗಿ ಬಂದು ನೋಡಬೇಕಿತ್ತಲ್ಲ. ನಾವು ಯಾರನ್ನೂ ದ್ವೇಷ ಮಾಡುವ ಅಗತ್ಯವಿಲ್ಲ. ನಾವು ಒಟ್ಟಿಗೆ ಬದುಕಬೇಕಾದವರು. ಹಿಂದೂಗಳಿಗೆ ಅನ್ಯಾಯ ವಾದರೆ ಸಹಿಸುವುದಿಲ್ಲ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು. ಬಿ.ಸಿ.ರೋಡಿನಲ್ಲಿ ಜೂ. 24ರಂದು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಇಂತಹ ಷಡ್ಯಂತ್ರದ ವಿರುದ್ಧ ನಡೆಸುತ್ತೇವೆ ಎಂದರು.

ಕಲ್ಲಡ್ಕ ಗಲಾಟೆಗೆ ರಾಜಕೀಯ ಕಾರಣ
ಕಲ್ಲಡ್ಕದಲ್ಲಿ ಆಗುತ್ತಿರುವ ಗಲಭೆಗೆ ನೂರಕ್ಕೆ ನೂರು ರಾಜಕೀಯವೇ ಕಾರಣ. ಇವರು ಹೊರಗೆ ಹೋಗಲಿ ಎಲ್ಲವೂ ಸರಿಯಾಗುತ್ತದೆ. ಇಲ್ಲಿ ಘರ್ಷಣೆ ಆಗಲು ಸಾಧ್ಯವೇ ಇಲ್ಲ. ಆದರೂ ನಾವುನಾವೇ ಇತ್ಯರ್ಥ ಮಾಡಿಕೊಳ್ಳುತ್ತೇವೆ. ರಾಜಕೀಯದವರ ಮಧ್ಯಪ್ರವೇಶ ಅಗತ್ಯವಿಲ್ಲ. ಮಸೀದಿಯ ಆಡಳಿತ ಮಂಡಳಿಯವರು ಈ ಕಲ್ಲು ಎಸೆದ ಮಂದಿಗೆ ವಿರೋಧವಿದ್ದಾರೆ. ನಾವು ಒಟ್ಟಿಗೆ ಬದುಕಬೇಕಲ್ಲ. ರಾಷ್ಟ್ರವನ್ನು ಒಡೆಯುವ ಕೆಲಸವನ್ನು ಬ್ರಿಟಿಷರು ಮಾಡಿದ್ದಾರೆ. ಕಾಂಗ್ರೆಸ್‌ ಮಾಡಿದೆ. ಈಗಿನ ಕಾಂಗ್ರೆಸಿಗರು ಅದರಲ್ಲೂ ಉಸ್ತುವಾರಿ ಮಂತ್ರಿಗಳು ಅದನ್ನು ಮಾಡಲೇ ಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
–  ಡಾ| ಪ್ರಭಾಕರ ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next