Advertisement

ಊರುಗಳ ಹೆಸರು ಬದಲಿಸಿದ ಫಲಕಗಳು

01:28 AM Nov 26, 2019 | Sriram |

ಬೈಂದೂರು: ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ನಿರ್ವಹಣೆಯ ಮೂಲಕ ಸಮಸ್ಯೆಗಳಿಗೆ ಕಾರಣವಾಗಿದ್ದ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಸ್ತುತ ಊರಿನ ಹೆಸರುಗಳನ್ನು ತಪ್ಪಾಗಿ ಮುದ್ರಿಸಿದ ನಾಮಫಲಕಗಳನ್ನು ಅಳವಡಿಸಿ ಹೊಸ ದಿಕ್ಕಿಗೆ ಹೊರಳಿದೆ. ಊರುಗಳ ಹೆಸರು ಅಸಂಬದ್ಧವಾಗಿ ಮುದ್ರಣ ವಾಗಿದ್ದು, ಸಾರ್ವಜನಿಕರಿಂದ ಛೀಮಾರಿ ಕೇಳಿಬರುತ್ತಿದೆ.

Advertisement

ಕುಂದಾಪುರದಿಂದಾಚೆಗೆ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಪ್ರಸ್ತುತ ಶಿರೂರಿನಿಂದ ಕುಂದಾಪುರದ ವರೆಗೆ ಸೂಚನೆ ಮತ್ತು ಊರುಗಳ ನಾಮಫಲಕಗಳನ್ನು ಅಳವಡಿಸುತ್ತಿದೆ. ಇಲ್ಲೆಲ್ಲ ಊರುಗಳ ಹೆಸರುಗಳು ಅಪಭ್ರಂಶಗೊಂಡಿವೆಯಲ್ಲದೆ ಅಕ್ಷರ ತಪ್ಪುಗಳಿವೆ. ಅಡಿಬೇರು ಎನ್ನುವ ಕಡೆ ಅಡಿಬಾರು, ತೂದಳ್ಳಿ ಬದಲು ಮುರ್ಕೊಡಿ, ಮಾಕೋಡಿ ಬದಲು ಮಾರಕೋಡಿ … ಇವು ಕೆಲವು ಉದಾಹರಣೆಗಳು.

ಫ‌ಲಕಗಳ ಅಳವಡಿಕೆಯನ್ನು ಪ್ರತ್ಯೇಕ ಗುತ್ತಿಗೆದಾರ ರಿಗೆ ನೀಡಿದ್ದು, ದಿಲ್ಲಿಯಿಂದ ಮುದ್ರಣಗೊಂಡು ಬರುತ್ತಿವೆ. ಅಂತರ್ಜಾಲದ ಸಹಾಯ ಪಡೆದು ಕನ್ನಡೀಕರಣ ಗೊಳಿಸಿದ್ದರಿಂದ ಹೀಗಾಗಿದೆ ಎನ್ನಲಾಗಿದೆ.

ಟೋಲ್‌ ಆರಂಭಕ್ಕೆ ಕ್ಷಣಗಣನೆ
ಅವೈಜ್ಞಾನಿಕ ಹಂಪ್‌ಗ್ಳು
ಐಆರ್‌ಬಿ ಕಂಪೆನಿ ಪ್ರಸ್ತುತ ತರಾತುರಿಯಿಂದ ಕಾಮಗಾರಿ ನಡೆಸುತ್ತಿದ್ದು, ಡಿಸೆಂಬರ್‌ ಒಳಗೆ ಶಿರೂರು ಟೋಲ್‌ ಕೇಂದ್ರ ಆರಂಭಿಸುವ ಸಿದ್ಧತೆ ನಡೆಸುತ್ತಿದೆ. ಟೋಲ್‌ ಸ್ಥಳದಲ್ಲಿ ಅವೈಜ್ಞಾನಿಕ ಹಂಪ್‌ಗ್ಳನ್ನು ಅಳವಡಿಸಿದ್ದು, ಸ್ಥಳೀಯರು ವಿರೋಧಿಸಿದ ಬಳಿಕ ಕೆಲವು ಉಬ್ಬುಗಳಲ್ಲಿ ಸಿಮೆಂಟ್‌ ಅಳವಡಿಸಿದ್ದಾರೆ. ಕಾಮಗಾರಿ ಶೇ.75ರಷ್ಟು ಮುಗಿದ ಬಳಿಕ ಟೋಲ್‌ ಆರಂಭಿಸಬೇಕು ಎನ್ನುವ ನಿಯಮ ಇದೆ. ಆದರೆ ಉತ್ತರ ಕನ್ನಡದಲ್ಲಿ ಕಾಮಗಾರಿಯೇ ಆಗಿಲ್ಲ. ಕೆಲವು ಕಡೆ ಜಾಗ ಒತ್ತುವರಿ ಸಂಪೂರ್ಣವಾಗಿಲ್ಲ. ರಸ್ತೆ ವಿಭಾಜಕದ ನಡುವೆ ಗಿಡ ನೆಡುವ ಬದಲು ಕೆಂಪು ಮಣ್ಣು ಹರಡಲಾಗಿದೆ. ತಿರುವುಗಳಲ್ಲಿ ಬಳಿದ ಬಣ್ಣ ಮಾಸಿದೆ. ಹತ್ತಾರು ಪಂಚಾಯತ್‌ಗಳ ಕುಡಿಯುವ ನೀರಿನ ಸಂಪರ್ಕ ಕಡಿದ ಕಂಪೆನಿ ದುರಸ್ತಿ ಮಾಡಿಕೊಟ್ಟಿಲ್ಲ. ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸರ್ವೀಸ್‌ ರಸ್ತೆ, ಬಸ್‌ ನಿಲ್ದಾಣ ಕಾಮಗಾರಿ ಆರಂಭವಾಗಿಲ್ಲ. ಹೀಗಿರುವಾಗ ಟೋಲ್‌ಗೆ ಜಿಲ್ಲಾಡಳಿತ ಅನುಮತಿ ನೀಡಬಾರದೆನ್ನುವುದು ಸಾರ್ವಜನಿಕರ ಆಗ್ರಹ.

ಬೃಹತ್‌ ಹೋರಾಟಕ್ಕೆ ಸಿದ್ಧತೆ
ಹೆಚ್ಚಿನ ಕಡೆ ಟೋಲ್‌ ಆರಂಭಿಸಿ ಸಾರ್ವಜನಿಕರು, ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸದಿರುವ ನಿದರ್ಶನ ಇರುವ ಕಾರಣ ಶಿರೂರು ಟೋಲ್‌ಗೇಟ್‌ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ. ಡಿ. 1ರಿಂದ ಫಾಸ್ಟಾಗ್‌ ಕಡ್ಡಾಯವಾಗಿರುವ ಕಾರಣ ಸ್ಥಳೀಯರಿಗೆ ರಿಯಾಯಿತಿ ಸ್ಪಷ್ಟಪಡಿಸದೆ ಟೋಲ್‌ ಆರಂಭಿಸಲು ಬಿಡುವುದಿಲ್ಲ ಎನ್ನುವುದು ಹೆದ್ದಾರಿ ಹೋರಾಟ ಸಮಿತಿಯ ತೀರ್ಮಾನ. ಕಂಪೆನಿ ಅಸಮರ್ಪಕ ಕಾಮಗಾರಿ ನಡೆಸಿ ಕೈ ತೊಳೆದುಕೊಳ್ಳುವ ಸಿದ್ಧತೆಯಲ್ಲಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸ್ಥಳೀಯರ ಸಮಸ್ಯೆ ಇತ್ಯರ್ಥವಾದ ಬಳಿಕ ಟೋಲ್‌ಗೇಟ್‌ ಆರಂಭಿಸಬೇಕು ಎನ್ನುವುದು ಜನರ ವಾದ.

Advertisement

ನಾಮಫ‌ಲಕ ಅಳವಡಿಕೆಯನ್ನು ಪ್ರತ್ಯೇಕ ಗುತ್ತಿಗೆ ನೀಡಲಾಗಿದ್ದು, ಹಲವಾರು ಕಡೆ ಈ ರೀತಿ ತಪ್ಪು ನಡೆದಿದೆ. ದಿಲ್ಲಿಯಿಂದ ಈ ಫಲಕಗಳು ಮುದ್ರಿತವಾಗಿ ಬರುತ್ತಿವೆ. ಈ ಕುರಿತು ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಸಾರ್ವಜನಿಕರಿಂದಲೂ ಮನವಿ ಕಳುಹಿಸಬೇಕಾಗಿದೆ. ಅಸಂಬದ್ಧ ಹೆಸರು ಸರಿಪಡಿಸಲಾಗುತ್ತದೆ.
– ಯೋಗೇಂದ್ರಪ್ಪ
ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್‌

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next