Advertisement

ಮನೆಗಳು ಬಿರುಕು, ಆತಂಕದಲ್ಲಿ ಬದುಕು!

07:30 PM Aug 30, 2021 | Team Udayavani |

ಕಾರ್ಕಳ:  ನಾವಿಲ್ಲಿ  ಹೇಗೆ ಬದುಕುವುದು;  ಸ್ಫೋಟದ ಸದ್ದಿಗೆ ಮನೆಗಳ  ಗೋಡೆ ಬಿರುಕು ಬಿಟ್ಟಿದೆ. ಲಕ್ಷಾಂತರ ರೂ. ಹಣದಲ್ಲಿ  ಮನೆ ಕಟ್ಟಿ  ನಾವು  ಕಂಗಾಲಾಗಿದ್ದೇವೆ. ನಿತ್ಯವೂ ಜೀವ ಭಯದಲ್ಲೆ  ನಾವು ಜೀವನ ನಡೆಸುತ್ತಿದ್ದೇವೆ. ಕಾರ್ಕಳ ಗುಂಡ್ಯಡ್ಕದಲ್ಲಿ  ಕ್ರಶರ್‌ ನಡೆಯುವ  ಆಸುಪಾಸಿನ  ಜನವಸತಿ ಪ್ರದೇಶದ ನಿವಾಸಿಗಳು ತೋಡಿಕೊಂಡ ಅಳಲಿದು.

Advertisement

ಕಾರ್ಕಳದ ನಗರದ ಹೊರಭಾಗವಾದ ಗುಂಡ್ಯಡ್ಕ ಬಳಿಯ ಗುಡ್ಡ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆಸುಪಾಸಿನಲ್ಲಿ 3-4 ಕ್ರಶರ್‌ಗಳಿವೆ.  ಇದು ನಿಟ್ಟೆ  ಗ್ರಾ.ಪಂ. ವ್ಯಾಪ್ತಿಯಲ್ಲಿ  ಇದ್ದು  ತಾಲೂಕು ಕೇಂದ್ರದ ಪೇಟೆಯಿಂದ  6 ಕಿ.ಮೀ.ನಷ್ಟು  ದೂರದಲ್ಲಿದೆ. ಕ್ರಶರ್‌ ಇರುವ ಪ್ರದೇಶದ ಸುತ್ತಮುತ್ತಲ ಜನ  ಸ್ಫೋಟದ ಸದ್ದಿಗೆ  ಬೆಚ್ಚಿ  ಬೀಳುತ್ತಿದ್ದಾರೆ.  ಸ್ಫೋಟದ ತೀವ್ರತೆ  ಎಷ್ಟಿದೆಯಂದರೆ  ತಾಲೂಕು ಕೇಂದ್ರ ಕಚೇರಿಗೂ ಇದರ ಸದ್ದು  ಕೇಳಿ ಬರುತ್ತಿದೆ.

ಈ ಕುರಿತು ಗಣಿಗಾರಿಕೆ ನಡೆಸುವವರ ಗಮನಕ್ಕೂ  ತರಲಾಗಿದ್ದು,  ದೂರು ನೀಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ. ದೂರು ಬಂದಾಗ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಟಾಚಾರಕ್ಕೆ ಎಂಬಂತೆ ಪರಿಶೀಲನೆ ಮಾಡುತ್ತಾರೆ. ಒಂದಷ್ಟು ದಿನ  ಸ್ಥಗಿತಗೊಳ್ಳುತ್ತದೆ. ಮತ್ತೆ  ಪುನಾರಂಭವಾಗುತ್ತದೆ ಎಂದು ಅಲ್ಲಿಯ ನಿವಾಸಿಗಳು ತಿಳಿಸಿದ್ದಾರೆ.

ಸರಕಾರದ ಮಾನದಂಡ ಪಾಲಿಸುತ್ತಿಲ್ಲ :

ಕಲ್ಲು ಗಣಿಗಾರಿಕೆ ನಡೆಸುತ್ತಿರುವ  ಮಾಲಕರು ಸರಕಾರದ ಸೂಚನೆಯನ್ವಯ  ನಡೆಸುತ್ತಿರಬಹುದು. ಆದರೆ  ಇಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಕಲ್ಲುಗಣಿಗಾರಿಕೆ  ಮಾಡುವುದು ಕಾನೂನಿನ ಪ್ರಕಾರವಾಗಿ ದ್ದರೂ ಇಲ್ಲಿ  ಸರಕಾರದ  ಮಾನದಂಡಗಳನ್ನು  ಅನುಸರಿಸುತಿಲ್ಲ ಎನ್ನುವುದು ಸ್ಥಳಿಯರ ದೂರಾಗಿದೆ.

Advertisement

ಮನೆಗಳು ಕುಸಿಯುವ ಭೀತಿ :

ಈ ಕಲ್ಲು ಗಣಿಗಾರಿಕೆ ಜೀವ ಜಲಕ್ಕೂ ಕುಂದು ತರುತ್ತಿದೆ. ಇಲ್ಲಿ ಕೃಷಿಯೇತರ ಭೂಮಿ, ದೇವಸ್ಥಾನ, ಶಾಲೆಗಳು ಹತ್ತಿರದಲ್ಲಿವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಹ ತೊಡಕು ಉಂಟಾಗಿದೆ.

ಮನೆ ಪಕ್ಕದಲ್ಲಿಯೇ  ದೊಡ್ಡ ಶಬ್ಧ ಕೇಳಿ ಬರುವುದರಿಂದ ಭಯವಾಗುತ್ತದೆ. ಮೊದಲೇ  ಸಾಲಶೂಲ ಮಾಡಿ ಮನೆ  ನಿರ್ಮಿಸಿಕೊಂಡಿದ್ದೇವೆ. ಕಟ್ಟಿದ ಕೆಲವೇ ದಿನಗಳಲ್ಲಿ ಅಡುಗೆ ಕೊಠಡಿ ಸೋರುತ್ತಿದೆ. ಅದು ಯಾವಾಗ  ಬೀಳುತ್ತದೋ ಎನ್ನುವ ಆತಂಕದಲ್ಲಿ  ನಾವಿದ್ದೇವೆ  ಎಂದು ಸಮಸ್ಯೆಗೊಳಗಾದ ನಾಗರಿಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸದ್ದು ಆಗಾಗ ಕೇಳಿ ಬರುತ್ತಿರುತ್ತದೆ. ಒಮ್ಮೆಲೆ  ದೊಡ್ಡ ಶಬ್ದಕ್ಕೆ  ಎದೆ ಝಲ್‌ ಎನ್ನುತ್ತದೆ. ಇದರಿಂದ ಭಯವಾಗುತ್ತದೆ ಎಂದು ನಕ್ರೆ ಭಾಗದ  ವೃದ್ದೆ  ಗುಲಾಬಿ  ನ್ಪೋಟದಿಂದ ಅನುಭವಿಸುವ  ನೋವನ್ನು ಹಂಚಿಕೊಂಡರು.

ಸ್ಫೋಟದ ತೀವ್ರತೆ ಮಿತಿಮೀರಿದೆ :

ಬಂಡೆಗಳನ್ನು ಸಿಡಿಸಲು  ಮಿತಿ ಮೀರಿ ಸ್ಫೋಟಕ ಬಳಸುತ್ತಿರುವುದು,  ಒಂದೇ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಾರಿ ಏಕಕಾಲದಲ್ಲಿ ನ್ಪೋಟಿಸುವುದು,  ತೀರಾ ಆಳದವರೆಗೆ  ಹುಗಿದಿಟ್ಟು ನ್ಪೋಟಿಸುವುದು, ಇದರಿಂದ ತೀವ್ರತೆ ಹೆಚ್ಚುತ್ತಿದೆ ಎನ್ನುವ ಅನುಮಾನವನ್ನು

ಸ್ಥಳೀಯರು  ವ್ಯಕ್ತಪಡಿಸಿದ್ದಾರೆ.  ಇದು ಹಿಂದೆಯೂ ಇತ್ತು, ಆದರೆ ಇತ್ತೀಚಿನ ದಿನಗಳಿಂದ ಇದರ ತೀವ್ರತೆ ಹೆಚ್ಚಾಗಿದೆ. ಬಿರುಕು ಉಂಟಾದಾಗಲೆಲ್ಲ ಸ್ವತಃ ದುರಸ್ತಿ   ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗುಂಡ್ಯಡ್ಕ  ಸುತ್ತಮುತ್ತಲ ಪ್ರದೇಶಗಳಲ್ಲಿ 100ಕ್ಕೂ  ಮಿಕ್ಕಿದ  ಕುಟುಂಬಗಳಿವೆ. ಗುಂಡ್ಯಡ್ಕ  ಪರಪ್ಪು, ಜ್ಯೋತಿನಗರ, ಆನಂದಿ ಮೈದಾನ ಪ್ರದೇಶದ ನಿವಾಸಿಗಳು ನ್ಪೋಟಕ್ಕೆ  ಹೈರಾಣಾಗಿದ್ದರೆ, ಅದಕ್ಕೂ  ಆಚೆಗಿನ ಪ್ರದೇಶಗಳಿಗೆ ನ್ಪೋಟದ ತೀವ್ರತೆ ಬಾಧಿಸಿದೆ.  ಮನೆಗಳು ಅದುರಿ ಪಾತ್ರೆಗಳು ಬೀಳುತ್ತಿವೆ. ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿವೆ.

ಸ್ಫೋಟಕದಿಂದ ನಿವಾಸಿಗಳಿಗೆ  ಆಗುತ್ತಿರುವ ತೊಂದರೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಕ್ರಮಕ್ಕೆ ಸೂಚಿಸುವೆ. ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆಯೂ ಸೂಚಿಸುವೆ. ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

 

-ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next