ಹುಬ್ಬಳ್ಳಿ: ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ಹೆಚ್ಚಿನ ಪ್ರಮಾಣದ ಸಂಶೋಧನೆಗಳ ಅಗತ್ಯವಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ವಿಶ್ವ ಹೋಮಿಯೋಪಥಿಕ್ ದಿನ ಹಾಗೂ ಡಾ| ಸ್ಯಾಮುವೆಲ್ ಹನ್ನೆಮನ್ 264ನೇ ಜನ್ಮ ದಿನಾಚರಣೆ ಪ್ರಯುಕ್ತ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಚಿಕಿತ್ಸಾ ವಿಧಾನ ಜರ್ಮನ್ ದೇಶದಲ್ಲಿ ಆವಿಷ್ಕಾರಗೊಂಡಿತಾದರೂ ಭಾರತದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದೆ. ಈ ಚಿಕಿತ್ಸಾ ವಿಧಾನ ಮತ್ತಷ್ಟು ಜನಪ್ರಿಯಗೊಳ್ಳಬೇಕಾದರೆ ಒಳ್ಳೆಯ ಸಂಶೋಧನೆಗಳ ಅಗತ್ಯವಿದೆ ಎಂದರು.
ಹೋಮಿಯೋಪಥಿ ಪದ್ಧತಿಯಲ್ಲಿ ಕೆಲ ದೀರ್ಘ ಕಾಯಿಲೆಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎನ್ನುವ ಭಾವನೆ ಜನರಲ್ಲಿದೆ. ಹೀಗಾಗಿ ಕೆಲವರು ಈ ಚಿಕಿತ್ಸಾ ವಿಧಾನ ಅನುಸರಿಸುತ್ತಿದ್ದಾರೆ. ಆದರೆ ಈ ಚಿಕಿತ್ಸಾ ವಿಧಾನದ ಕುರಿತು ಜನರಲ್ಲಿ ಜಾಗೃತಿ ಇಲ್ಲದಂತಾಗಿದೆ. ಗುಣಪಡಿಸಿದ ಕಾಯಿಲೆಗಳ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಇಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಅಲೋಪಥಿಕ್ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳು ಹೆಚ್ಚು ಎನ್ನುವ ಕಾರಣಕ್ಕೆ ಪರ್ಯಾಯ ಚಿಕಿತ್ಸೆಗಳಾದ ಹೋಮಿಯೋಪಥಿ, ಆಯುರ್ವೇದದಂತಹ ಪದ್ಧತಿಗಳತ್ತ ಜನರು ವಾಲುತ್ತಿದ್ದಾರೆ. ತಕ್ಷಣ ಕಾಯಿಲೆ ನಿವಾರಣೆಯಾಗಬೇಕು ಎನ್ನುವ ಮನಸ್ಥಿತಿಯಿಂದ ಜನರು ಹೊರಬರಬೇಕು. ಈ ಚಿಕಿತ್ಸಾ ವಿಧಾನಕ್ಕೆ ಹೆಚ್ಚು ಮಹತ್ವ ಬರುವ ನಿಟ್ಟಿನಲ್ಲಿ ಈ ಭಾಗದಲ್ಲಿ ಕಾಲೇಜು ಹಾಗೂ ಸರಕಾರಿ ಆಸ್ಪತ್ರೆ ಆರಂಭಿಸುವ ಕುರಿತು ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಮಾತನಾಡಿ, ಪ್ರತಿಯೊಂದು ಚಿಕಿತ್ಸಾ ವಿಧಾನದಲ್ಲಿ ಅನುಕೂಲ ಹಾಗೂ ಅನಾನುಕೂಲಗಳಿವೆ. ಆದರೆ ಅವುಗಳಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ರೋಗಿಗಳ ಕಾಯಿಲೆ ಗುಣಪಡಿಸುವ ಚಿಕಿತ್ಸಾ ಪದ್ಧತಿಗಳು ಯಾವುದೂ ಕನಿಷ್ಠವಲ್ಲ ಎಂದರು.
ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ವೀರಬ್ರಹ್ಮಚಾರ್ಯ, ಪಾಲಿಕೆ ವೈದ್ಯಾಧಿಕಾರಿ ಡಾ| ಪ್ರಭು ಬಿರಾದಾರ, ವೈದ್ಯರಾದ ಡಾ| ಸಂದೀಪ ಕುಲಕರ್ಣಿ, ಡಾ| ಸಮೀರ ಕುಮಾರ, ಡಾ| ರವೀಂದ್ರ ಇನ್ನಿತರರಿದ್ದರು.