Advertisement

ಹೋ ಮಿಯೋಪತಿ : ಸುರಕ್ಷಿತ, ಪರಿಣಾಮಕಾರಿ ಪರ್ಯಾಯ ವೈದ್ಯಕೀಯ ಪದ್ಧತಿ

11:33 PM Apr 09, 2021 | Team Udayavani |

ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಸ್ಥಾಪಕ ಜರ್ಮನ್‌ ತಜ್ಞ ಡಾ| ಕ್ರಿಶ್ಚಿಯನ್‌ ಫ್ರೆಡ್ರಿಚ್‌ ಸ್ಯಾಮುವೆಲ್‌
ಹೆನ್‌ಮೆನ್‌ 1755ರ ಎಪ್ರಿಲ್‌ 10ರಂದು ಜನಿಸಿದರು. ಇವರ ಸವಿನೆನಪಿನಲ್ಲಿ ವೈದ್ಯಕೀಯ ಜಗತ್ತಿಗೆ ಹೋಮಿಯೋಪತಿ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಲು ಹಾಗೂ ಹೋಮಿಯೋಪತಿಯ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಪ್ರತೀ ವರ್ಷ
ಹೆನ್‌ಮೆನ್‌ ಅವರ ಜನ್ಮದಿನವನ್ನು ವಿಶ್ವ ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುತ್ತದೆ.

Advertisement

ಜರ್ಮನಿಯ ಚಿಕಿತ್ಸಾ ವಿಧಾನವಾಗಿರುವ ಹೋಮಿಯೋಪತಿಯು ಇಂದು ವಿಶ್ವದೆಲ್ಲೆಡೆಯಲ್ಲಿ ಅತೀ ವೇಗವಾಗಿ ಜನಪ್ರಿಯವಾಗುತ್ತಿರುವ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಹೋಮಿಯೋಪತಿ ಪದ್ಧತಿಯ ಬಳಕೆಯು ಎರಡನೇ ಸ್ಥಾನದಲ್ಲಿದೆ. ಈ ವೈದ್ಯಕೀಯ ಚಿಕಿತ್ಸಾ ಪದ್ಧತಿಯು ಇಂದು ಭಾರತದಲ್ಲಿ ಜನಪ್ರಿಯವಾಗಿದೆ.

ವ್ಯಕ್ತಿಕೇಂದ್ರಿತ ಚಿಕಿತ್ಸೆ
ಈ ಚಿಕಿತ್ಸೆಯಲ್ಲಿ ರೋಗಿಯ ಒಟ್ಟಾರೆ ಆರೋಗ್ಯವನ್ನು ಪರಿಶೀಲಿಸಿದ ಬಳಿಕ ಚಿಕಿತ್ಸೆಯನ್ನು ವೈದ್ಯರು ಸೂಚಿಸುತ್ತಾರೆ. ಹವಾಮಾನ ಪರಿಸ್ಥಿತಿ, ರೋಗಿಯನ್ನು ಬಾಧಿಸುತ್ತಿರುವ ಅಲರ್ಜಿ, ಒತ್ತಡದ ಅಂಶಗಳು, ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಔಷಧವನ್ನು ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ.

ಅಡ್ಡ ಪರಿಣಾಮಗಳಿಲ್ಲ
ಔಷಧಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುವುದರಿಂದ ಇವು ಅಡ್ಡಪರಿಣಾಮಗಳಿಂದ ಮುಕ್ತವಾಗಿವೆ. ಈ ಔಷಧಗಳನ್ನು ಚಿಕ್ಕ ಪ್ರಮಾಣದಿಂದ ಆರಂಭಿಸಿ ಬಳಿಕ ಅಗತ್ಯವಿದ್ದಲ್ಲಿ ಮಾತ್ರವೇ ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಇದರಿಂದಾಗಿ ಚಿಕಿತ್ಸೆಯು ನಿಧಾನವಾಗಿ ಫ‌ಲ ನೀಡುತ್ತದೆ. ಈ ಚಿಕಿತ್ಸೆಯನ್ನು ಯಾವುದೇ ವಯಸ್ಸಿನ ವ್ಯಕ್ತಿಗಳು, ಗರ್ಭಾವಸ್ಥೆ, ದೀರ್ಘ‌ಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಪಡೆಯಬಹುದು. ಈ ಔಷಧವು ಬೇರೆ ಔಷಧಗಳ ಜತೆಗೆ ಬೆರೆಯುವುದಿಲ್ಲ. ಇದರಿಂದಾಗಿ ನೀವು ಬೇರೆ ಔಷಧಗಳನ್ನು ಸೇವಿಸುತ್ತಿದ್ದರೂ ಹೋಮಿಯೋಪತಿ ಔಷಧಗಳನ್ನು ಸೇವಿಸಲು ಯಾವುದೇ ಅಡ್ಡಿಯಿಲ್ಲ.

ಏನಿದು ಹೋಮಿಯೋಪತಿ ಚಿಕಿತ್ಸಾ ಪದ್ಧತಿ?
ಮಾನವ ದೇಹ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ದೇಹದಲ್ಲಿನ ಈ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೇ ಬಳಸಿಕೊಂಡು ಚಿಕಿತ್ಸೆ ನೀಡುವ ಪದ್ದತಿಯೇ ಹೋಮಿಯೋಪತಿ. ಈ ಚಿಕಿತ್ಸಾ ಪದ್ಧತಿ ತುಂಬಾ ಸರಳ, ಕಡಿಮೆ ವೆಚ್ಚ, ಸುರಕ್ಷಿತ ಹಾಗೂ ಪರಿಣಾಮಕಾರಿಯಾದುದಾಗಿದೆ. ಯಾವುದೇ ತೆರನಾದ ರೋಗಗಳಿಗೆ ಈ ಪದ್ಧತಿಯಲ್ಲಿ ಚಿಕಿತ್ಸೆ ನೀಡುವಾಗ ಕೃತಕ ರಾಸಾಯನಿಕಗಳನು ಬಳಸಲಾಗುವುದಿಲ್ಲ.

Advertisement

ಸುಲಭಸಾಧ್ಯ ಔಷಧಗಳು
ಹೋಮಿಯೋಪತಿ ಔಷಧಗಳಲ್ಲಿ ಬಳಸಲಾಗುವ ಬಹುತೇಕ ಸಾಮಗ್ರಿಗಳು ಸುಲಭವಾಗಿ ಲಭ್ಯವಿರುವು ದರಿಂದ ಇವುಗಳ ತಯಾರಿಕೆ ಸುಲಭ. ಕೆಲವು ಗಿಡಮೂಲಿಕೆ, ಬೇರು, ಸಸ್ಯ, ಪ್ರಾಣಿ, ಕೀಟ ಇತ್ಯಾದಿಗಳಿಂದ ಔಷಧಗಳನ್ನು ತಯಾರಿಸಲಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ಈ ಔಷಧಗಳ ಬಳಕೆಗೆ ಕಾಲಾವಧಿಯ ಮಿತಿ ಇಲ್ಲದಿರುವುದರಿಂದ ಅವುಗಳನ್ನು ದೀರ್ಘ‌ಕಾಲದವರೆಗೂ ಸಂರಕ್ಷಿಸಿಡಬಹುದು.

ಚಟವಾಗದು
ಹೋಮಿಯೋಪತಿ ಪದ್ಧತಿಯಲ್ಲಿ ಔಷಧ ಸೇವನೆ ಒಂದು ಚಟವಾಗಿ ಮಾರ್ಪಡುವ ಯಾವುದೇ ಸಾಧ್ಯತೆ ಇಲ್ಲದಿರುವುದರಿಂದಾಗಿ ಕಾಯಿಲೆ ಶಮನದ ಬಳಿಕ ಆ ವ್ಯಕ್ತಿಯು ಸುರಕ್ಷಿತವಾಗಿ ಈ ಔಷಧಗಳ ಬಳಕೆಯನ್ನು ನಿಲ್ಲಿಸಬಹುದು. ಈ ಔಷಧಗಳು ಶಿಶು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವಯಸ್ಸಾದ ವ್ಯಕ್ತಿಗಳು ಮತ್ತು ಯಾವುದೇ ವ್ಯಸನದ ಚಟವುಳ್ಳವರಿಗೂ ಸುರಕ್ಷಿತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next