ದೇಸೀ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯಬೇಕು, ಬಹುರಾಷ್ಟೀಯ ಕಂಪನಿಯ ಉತ್ಪನ್ನಕ್ಕೆ ಸರಿಸಮಾನ ಎಂಬಂಥ ವಸ್ತು- ಉತ್ಪನ್ನಗಳು ನಮ್ಮಲ್ಲಿಯೂ ತಯಾರಾಗಬೇಕು. ಆ ಮೂಲಕ, ಉದ್ಯೋಗ ಸೃಷ್ಟಿಗೆ ಕಾರಣ ಆಗಬೇಕು ಎಂಬ ಮಾತು, ಈಗ ಎಲ್ಲೆಡೆ ಕೇಳಿಬರುತ್ತಿದೆ. ಅಂಥ ಸಂದರ್ಭದಲ್ಲಿಯೇ, ಮಂಡ್ಯದ ಎಂ.ಟೆಕ್ ಪದವೀಧರ ಕಮಲೇಶ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಗಳಾದ ಶ್ರೀಕಾಂತ್, ಬಸವರಾಜು, ಸೌಮ್ಯ, ಮಹೇಶ್ ಕುಮಾರ್, ಮೇಘಶ್ರೀ ಮತ್ತು ದೀಪಕ್ ಎಂಬುವರು ಸೇರಿಕೊಂಡು, ಗ್ರಾಸ್ ರೂಟ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಗಾಣದಿಂದ ತೆಗೆದ ಅಡುಗೆ ಎಣ್ಣೆಯನ್ನು ಮನೆಮನೆಗೆ ತಲುಪಿಸಿ, ಆರಂಭಿಕ ಯಶಸ್ಸು ಕಂಡಿರುವುದು ಈ ಸಂಸ್ಥೆಯ ಹೆಚ್ಚುಗಾರಿಕೆ. ಈ ತಂಡದ ಮುಖ್ಯಸ್ಥರಾದ ಕಮಲೇಶ್ ಕೃಷಿ ಕುಟುಂಬದಿಂದ ಬಂದವರು. ಹಾಗಾಗಿ, ಕೃಷಿಕರು ಅನುಭವಿಸುವ ಕಷ್ಟ-ನಷ್ಟಗಳ ಅರಿವು ಸಾಕಷ್ಟು ಇತ್ತು. ಪದವಿಯ ನಂತರ, ಬೆಂಗಳೂರು ಸೇರಿದರೂ, ಊರಿಗೆ ವಾಪಸ್ಸಾಗಿ ಹತ್ತಿಪ್ಪತ್ತು ಜನರಿಗೆ ಕೆಲಸ ನೀಡುವಂಥ ಕೃಷಿ ಉದ್ಯಮ ಆರಂಭಿಸಬೇಕು ಎಂಬ ಆಸೆ ಜೊತೆಯ ಲ್ಲಿಯೇ ಇತ್ತು.
ತಾಜಾ, ಪರಿಶುದ್ಧ ಎಣ್ಣೆ: ನಾವೆಲ್ಲಾ ಒಟ್ಟಾಗಿ, ಹಳ್ಳಿಗಳಲ್ಲಿ ಕಾಣಸಿಗುವ ಕೌಶಲ್ಯವನ್ನೇ ಬಳಸಿ, ಗಾಣದಿಂದ ತೆಗೆದ ಅತ್ಯುತ್ತಮ ಗುಣಮಟ್ಟದ ಕಡಲೇಕಾಯಿ ಎಣ್ಣೆ, ಎಳ್ಳೆಣ್ಣೆ, ಕುಸುಬೆ ಎಣ್ಣೆ, ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ಉತ್ಪಾದಿಸಿ ದ್ದೇವೆ. ಇದು ರಾಸಾಯನಿಕ ರಹಿತ ಪರಿಶುದ್ಧ ಎಣ್ಣೆ. ಶ್ರೀರಂಗಪಟ್ಟಣ ಸಮೀಪದ ನೆಲಮನೆಯಲ್ಲಿದ್ದ ಹಳೆಯ ಆಲೆಮನೆಯನ್ನೇ ಎಣ್ಣೆ ಉತ್ಪಾದಿಸುವ ಸ್ಥಳವನ್ನಾಗಿ ಮಾಡಿಕೊಂಡಿದ್ದೇವೆ. ಸದ್ಯ ಮೈಸೂರು, ಬೆಂಗಳೂರು, ಮಂಡ್ಯ ನಗರಗಳಲ್ಲಿ, ಸುಮಾರು 800ಕ್ಕೂ ಹೆಚ್ಚು ಕುಟುಂಬ ಗಳಿಗೆ ಈ ಶುದ್ಧ, ತಾಜಾ, ರಾಸಾಯನಿಕ ಮುಕ್ತ ಎಣ್ಣೆಯನ್ನು ನೇರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದೆ ತಾಜಾ ಸಾವಯವ ಹಾಲು, ಕಲ್ಲಿನಿಂದ ಬೀಸಿ ತಯಾರಿಸಿದ ಹಿಟ್ಟುಗಳನ್ನು ಹೊರತರುವ ತಯಾರಿಯಲ್ಲಿದ್ದೇವೆ ಅನ್ನುತ್ತಾರೆ ಕಮಲೇಶ್.
ಸ್ಥಳೀಯರಿಗೆ ನೌಕರಿ: ಗ್ರಾಸ್ ರೂಟ್ ತಂಡದವರ ಒಡೆತನದಲ್ಲಿ ಸದ್ಯ ಎರಡು ಗಾಣಗಳಿದ್ದು, 10 ಜನಕ್ಕೆ ಕೆಲಸ ನೀಡಲಾಗಿದೆ. ತಾಜಾ ಎಣ್ಣೆಗೆ ಗ್ರಾಹಕರ ಕಡೆಯಿಂದ ಭರಪೂರ ಮೆಚ್ಚುಗೆ ಸಿಕ್ಕಿದೆ. ಇದರಿಂದ ಉತ್ತೇಜಿತರಾದ ತಂಡವು, 3 ಹೊಸ ಗಾಣಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದರಿಂದ ಒಟ್ಟು 25 ಜನರಿಗೆ ಸ್ಥಳೀಯವಾಗಿ ಕೆಲಸ ಸಿಗಲಿದೆ. ಇದಲ್ಲದೆ, ಸಾವಯವ ಹಾಲು ಹಾಗೂ ಹಿಟ್ಟು ತಯಾರಿಸುವ ಕೆಲಸಕ್ಕೆ 30 ಜನರ ಅವಶ್ಯವಿದೆ. ಗಾಣದಲ್ಲಿ ತೆಗೆದ ಎಣ್ಣೆಯನ್ನು, ಆರ್ಡರ್ ಬಂದ ಕೂಡಲೇ ಗ್ರಾಹಕರ ಮನೆಬಾಗಿಲಿಗೇ ತಲುಪಿಸಲಾಗುತ್ತದೆ.
ಡೆಡ್‌ಲೈನ್ ಭಯ ಇಲ್ಲ: “ನಾವೆಲ್ಲಾ ಸಾಫ್ಟ್ವೇರ್ ಕ್ಷೇತ್ರದಲ್ಲಿ ಇದ್ದವರು. ಇಷ್ಟು ದಿನ ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡಿ ದವರಿಗೆ, ಈಗ ಬಯಲಿನಲ್ಲಿ ನಿಂತು ಕೆಲಸ ಮಾಡಲು ಕಷ್ಟ ಆಗಲ್ಲವಾ? ಎಂಬುದು ಹಲವರ ಪ್ರಶ್ನೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದಿನವೂ ಡೆಡ್‌ಲೈನ್ ಕಣ್ಮುಂದೆ ಇರುತ್ತದೆ. ಇಲ್ಲಿ ಹಾಗಿಲ್ಲ. ಯಾವ ಒತ್ತಡವೂ ಇಲ್ಲ. ನಾಳೆಯೇ ದೊಡ್ಡ ಯಶಸ್ಸು ಪಡೆಯಬೇಕೆಂಬ ಅವಸರವೂ ಇಲ್ಲ. ಉತ್ತಮ ಗುಣಮಟ್ಟದ ಎಣ್ಣೆ ಉತ್ಪಾದಿಸಬೇಕು. ನಮ್ಮ ರೈತಾಪಿ ಜನರ ಬೆಳೆಗೆ ಮಾರುಕಟ್ಟೆ ಒದಗಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ‘ ಎಂಬುದು ಗ್ರಾಸ್ ರೂಟ್ ತಂಡದ ಎಲ್ಲರ ಮಾತು.
ಮಿತಿಗಳೂ ಇವೆ: ಯಂತ್ರದಲ್ಲಿ ದಿನಕ್ಕೆ ಸಾವಿರ ಲೀಟರ್ ಎಣ್ಣೆ ತೆಗೆಯಬಹುದು. ಗಾಣದಲ್ಲಿ ಎಣ್ಣೆ ಉತ್ಪಾ ದನೆ ಕಡಿಮೆ ಪ್ರಮಾಣದಲ್ಲಿ ನಡೆಯು ವು ದರಿಂದ, ಹೊರ ದೇಶಗಳಿಗೆ ರಫ್ತು ಮಾಡಲು ಕಷ್ಟ. ಚೊತೆಗೆ, ಗಾಣ ತಯಾರಿಸುವ ಕೌಶಲ್ಯ, ಇಂದಿನ ಮರಗೆಲಸದವರಿಗೆ ತಿಳಿದಿಲ್ಲ. ಸದ್ಯಕ್ಕೆ ಅದೂ ಒಂದು ಕೊರತೆ
ಲೀಟರ್‌ಗೆ ಎಷ್ಟು?: ಕಡಲೆಕಾಯಿ ಎಣ್ಣೆ- 360ರೂ., ಕುಸುಬೆ ಎಣ್ಣೆ-580 ರೂ , ಕೊಬ್ಬರಿ ಎಣ್ಣೆ-520 ರೂ , ಎಳ್ಳೆಣ್ಣೆ- 520ರೂ., ಹುಚ್ಚೆಳ್ಳು ಎಣ್ಣೆ- 680 ರೂ, ಹರಳೆಣ್ಣೆ -580 ರೂ.
ಮಾಹಿತಿಗೆ: 9844123344/ 9164468872