ಬೆಂಗಳೂರು: ಭಾರತೀಯ ನಿರ್ಮಿತ ಮಿತ್ರೋನ್ ಎನ್ನುವ ಆ್ಯಪ್ 50 ಲಕ್ಷ ಬಾರಿ ಡೌನ್‌ಲೋಡ್ ಆಗಿ, ಚೀನಾದ ಟಿಕ್‌ಟಾಕ್‌ಗೆ ನಡುಕ ಹುಟ್ಟಿಸಿದ್ದು ನೆನಪಿರಬಹುದು. ಇದೀಗ ಅದೇ ರೀತಿಯ ಚಿಂಗಾರಿ ಎನ್ನುವ ಇನ್ನೊಂದು ಆ್ಯಪ್ ಹುಟ್ಟಿ ಕೊಂಡಿದೆ. ಅದು ಈಗಾಗಲೇ 1 ಲಕ್ಷ ಬಾರಿ ಡೌನ್‌ಲೋಡ್ ಆಗಿದೆ. ಇದನ್ನು ತಯಾರಿಸಿರುವುದು ಬೆಂಗಳೂರಿನವರಾದ ಬಿಶ್ವಾತ್ಮ ನಾಯಕ್ ಹಾಗೂ ಸಿದ್ಧಾರ್ಥ್ ಗೌತಮಿನ್ ಎನ್ನುವುದು ವಿಶೇಷ. ಇದು ಟಿಕ್‌ಟಾಕ್‌ಗೆ ಶುದ್ಧ ಭಾರತೀಯ ಎದುರಾಳಿ ಎಂದು ಪರಿಗಣಿತವಾಗಿದೆ. ಇತ್ತೀಚೆಗೆ ಇಡೀ ದೇಶದಲ್ಲಿ ಚೀನಾ ವಿರೋಧಿ ಅಲೆ ಜೋರಾಗಿದೆ. ಅದರ ಬೆನ್ನಲ್ಲೇ ಕಂಪನಿಗಳು ಭಾರತೀಯವಾಗಿಯೇ ಎಲ್ಲವನ್ನು ತಯಾರು ಮಾಡುತ್ತಿವೆ. ಈ ಆ್ಯಪ್‌ನಲ್ಲಿ ಜನ ವಿಡಿಯೊ ಅಪ್ಲೋಡ್ ಮಾಡುವುದು, ಡೌನ್ ಲೋಡ್ ಮಾಡುವುದು ಮಾತ್ರವಲ್ಲ, ಗೆಳೆಯರೊಂದಿಗೆ, ಹೊಸಬರೊಂದಿಗೆ ಮಾತುಕತೆ ನಡೆಸಬಹುದು, ಮಾಹಿತಿಗಳನ್ನು ಹಂಚಿಕೊಳ್ಳಬಹುದು, ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲೂ ಆಕರ್ಷಕವಾದ ವಿಡಿಯೊ, ಆಡಿಯೊ ಗಳನ್ನು ಹಂಚಿಕೊಳ್ಳಬಹುದು. ಒಂದೇ ಒಂದು ವ್ಯತ್ಯಾಸವೆಂದರೆ, ಈ ಆ್ಯಪ್ ಜನರಿಗೆ ಹಣ ಪಾವತಿಸುವುದು, ಅವರು ಅಪ್ಲೋಡ್ ಮಾಡಿದ ವಿಡಿಯೊ ಎಷ್ಟು ವೈರಲ್ ಆಗಿದೆ ಎಂಬ ಆಧಾರದಲ್ಲಿ.