Advertisement

ಕ್ಷಯರೋಗ ಪತ್ತೆಗೆ ಮನೆ ಮನೆಗೆ ಭೇಟಿ: ಲೀಲಾವತಿ

02:25 PM Jul 17, 2019 | Team Udayavani |

ಹಾವೇರಿ: ಕ್ಷಯರೋಗ ಪತ್ತೆ ಹಚ್ಚಲು ಮನೆ ಮನೆಗೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಹೇಳಿದರು.

Advertisement

ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ನಾಗೇಂದ್ರನಮಟ್ಟಿಯ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಜು. 15ರಿಂದ 27ರ ವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ ಸಂಭಾವ್ಯ ಕ್ಷಯ ಪ್ರಕರಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಿಸುವುದು, ಕ್ಷಯರೋಗವೆಂದು ದೃಢಪಟ್ಟಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ಸಾರ್ವಜನಿಕರು ತಪಾಸಣೆಗೆ ಮುಂದಾಗುವಂತೆ ಕರೆ ನೀಡಿದರು.

ಈಗಾಗಲೇ ಕ್ಷಯರೋಗಕ್ಕೆ ಸರ್ಕಾರಿ ಅಥವಾ ಖಾಸಗಿಯಲ್ಲಿ ಚಿಕಿತ್ಸೆ ಪಡೆದವರು ಪರೀಕ್ಷೆಗೆ ಒಳಪಟ್ಟು ಕ್ಷಯ ಮರುಕಳಿಸಿದೆಯೇ ಎಂಬುದನ್ನು ಪತ್ತೆ ಮಾಡಿಸಿಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಕ್ಷಯರೋಗದ ಪತ್ತೆ ಚಿಕಿತ್ಸೆ ಉಚಿತವಾಗಿದ್ದು, ಚಿಕಿತ್ಸಾ ಅವಧಿಯಲ್ಲಿ ಮಾಸಿಕ 500 ರೂ.ಗಳ ಸಹಾಯಧನವನ್ನು ಪೌಷ್ಟಿಕ ಆಹಾರಕ್ಕಾಗಿ ನೇರವಾಗಿ ರೋಗಿಯ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿ ಡಾ| ಜಯಾನಂದ ಮಾತನಾಡಿ, ಜಿಲ್ಲೆಯನ್ನು ಸಂಪೂರ್ಣವಾಗಿ ಕ್ಷಯಮುಕ್ತ ಮಾಡುವ ನಿಟ್ಟಿನಲ್ಲಿ ಎಲ್ಲ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

Advertisement

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ| ನೀಲೇಶ ಎಂ.ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಸರಿಯಾದ ವೇಳೆಯಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡರೆ ಸಂಪೂರ್ಣವಾಗಿ ಕ್ಷಯರೋಗ ಗುಣವಾಗುತ್ತದೆ. ಈ ಕಾರ್ಯಕ್ರಮವನ್ನು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 2,56,067 ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರಭಾಕರ ಕುಂದೂರ, ಶ್ರೀಶಕ್ತಿ ವೃದ್ಧಾಶ್ರಮ ಅಧಿಧೀಕ್ಷಕ ಕಾಳಪ್ಪ ಚಲವಾದಿ, ಉಮಾಪತಿ ಬಿ.ಎಸ್‌., ಲಿಂಗರಾಜ ಸಣ್ಣಕೂಡಲ, ವಿನಾಯಕ ಜೆ.ಪಿ, ಪಿ.ಎನ್‌. ಪಾಟೀಲ್, ರಾಜು ಎಸ್‌. ಸಬಳದ, ಚನ್ನಪ್ಪ ಲಮಾಣಿ, ವಸಂತಕುಮಾರಿ ಹಾಗೂ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next