ಬೆಂಗಳೂರು: ನಗರದ ವೈಟ್‌ಫೀಲ್ಡ್‌ನ ಕೋನಪ್ಪನ ಆಗ್ರಹಾರ ಬಳಿ ಮೆಟ್ರೋ ಸ್ಟೇಷನ್ ನಿರ್ಮಿಸಲು ಆರ್ಥಿಕ ನೆರವು ನೀಡಲು ಮುಂದಾಗಿರುವ ಇನ್ಫೋಸಿಸ್ ಫೌಂಡೇಶನ್, ಪೊಲೀಸರಿಗೆ ವಸತಿ ಕಟ್ಟಡ ನಿರ್ಮಿಸಿಕೊಡಲು ಸಹ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು, ಈ ಕುರಿತು ಮಾತುಕತೆ ನಡೆಸಿದರು. ರಾಜ್ಯದಲ್ಲಿ ಪೊಲೀಸರಿಗೆ ಮನೆಗಳು ಹಾಗೂ ಪೊಲೀಸ್ ಠಾಣೆಗಳ ಅಗತ್ಯವಿರುವ ಬಗ್ಗೆ ಡಾ.ಪರಮೇಶ್ವರ್ ತಿಳಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸುಧಾ ಮೂರ್ತಿ ಅವರು, ರಾಜ್ಯ ಸರ್ಕಾರ ಜಮೀನು ನೀಡಿದರೆ ಇನ್ಫೋಸಿಸ್ ವತಿಯಿಂದ ಪೊಲೀಸರಿಗೆ ಉಚಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಬೆಂಗಳೂರಿನ ವೈಟ್‌ಫೀಲ್ಡ್ ಹಾಗೂ ಮೈಸೂರಿನಲ್ಲಿ ಸರ್ಕಾರ ಜಮೀನು ನೀಡಿದರೆ, ಪೊಲೀಸ್ ಕ್ವಾಟ್ರಸ್‌ಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
19ರಂದು ಒಪ್ಪಂದ: ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಸುಧಾ ಮೂರ್ತಿ, ವೈಟ್‌ಫೀಲ್ಡ್‌ನ ಕೋನಪ್ಪನ ಅಗ್ರಹಾರ ಬಳಿ ಮೆಟ್ರೋ ನಿಲ್ದಾಣ ನಿರ್ಮಿಸಲು ಇನ್ಫೋಸಿಸ್ 150 ಕೋಟಿ ರೂ. ದೇಣಿಗೆ ನೀಡಿದೆ. ಈ ಕುರಿತು ಬಿಎಂಆರ್ ಸಿಎಲ್ ಮತ್ತು ಇನ್ಫೋಸಿಸ್ ನಡುವೆ ಜು.19ರಂದು ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಮೆಟ್ರೊ ನಿಲ್ದಾಣ ನಿರ್ಮಿಸುವ ಕುರಿತ ಒಪ್ಪಂದದ ಜತೆಗೆ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಸುಧಾ ಮೂರ್ತಿಯವರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಸಿಎಂ ಗೃಹ ಕಚೇರಿಗೆ ಗಾಲ್ಫ್ ಚೆಂಡು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪರಮೇಶ್ವರ್, ಗಾಲ್ಫಕ್ಲಬ್ ನ ಕ್ಯಾಪ್ಟನ್ ಪ್ರದೀಪ್ ಅವರು ಗಾಲ್ಫ್ ಮೆಶ್ ಎತ್ತರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ರೀತಿ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.