Advertisement

ವಿಶೇಷ ವರ್ಗದವರಿಗೆ ಮನೆ: 10 ಜಿಲ್ಲೆಗಳಿಗೆ ಮಾತ್ರ ಮಣೆ!

01:51 AM Dec 14, 2021 | Team Udayavani |

ಮಂಗಳೂರು: ವಿಶೇಷ ವರ್ಗದವರ ವಸತಿ ಯೋಜನೆಯಡಿ ಮನೆಗಳನ್ನು ಪಡೆಯಲು ಈ ಬಾರಿ ರಾಜ್ಯದ 10 ಜಿಲ್ಲೆಗಳು ಮಾತ್ರ ಅರ್ಹವಾಗಿವೆ.

Advertisement

ಅಂಗವಿಕಲರು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಧವೆಯರು, ಕುಶಲಕರ್ಮಿಗಳು, ಬೀಡಿಕಾರ್ಮಿಕರು, ಅಲೆಮಾರಿ / ಅರೆ ಅಲೆಮಾರಿ ಸಮುದಾಯದವರು ಸೇರಿದಂತೆ 14 ವರ್ಗದವರಿಗೆ ವಿಶೇಷ ಆದ್ಯತೆಯಲ್ಲಿ ಮನೆಗಳನ್ನು ಒದಗಿಸಲಾಗುವ ಈ ಯೋಜನೆಯಡಿ ಈ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಸೇರಿದಂತೆ 21 ಜಿಲ್ಲೆಗಳು ಅವಕಾಶ ವಂಚಿತವಾಗಿವೆ.

ರಾಜ್ಯದಲ್ಲಿ 2020-21ನೇ ಸಾಲಿಗೆ ದೇವರಾಜ ಅರಸು ವಸತಿ ಯೋಜನೆಯಡಿ ವಿಶೇಷ ವರ್ಗದ ಒಟ್ಟು 43,342 ಫ‌ಲಾನುಭವಿಗಳ ಆಯ್ಕೆಗೆ ಗುರಿ ನಿಗದಿಯಾಗಿದ್ದು ಇದುವರೆಗೆ 21,890 ಮಂದಿಯನ್ನು ಆಯ್ಕೆ ಮಾಡಲಾಗಿದೆ. ತುಮಕೂರು ಜಿಲ್ಲೆಗೆ ಗರಿಷ್ಠ 15,788 ಹಾಗೂ ಚಿತ್ರದುರ್ಗ ಜಿಲ್ಲೆಗೆ 14,913 ವಸತಿಗಳ ಗುರಿ ನಿಗದಿಪಡಿಸಿದ್ದು ಫ‌ಲಾನುಭವಿಗಳ ಆಯ್ಕೆ ಪ್ರಗತಿಯಲ್ಲಿದೆ.

ಪ್ರಸ್ತಾವನೆ ವಿಳಂಬ ಕಾರಣ?
ಈ ಹಿಂದೆ ಕಳುಹಿಸಲಾದ ಪ್ರಸ್ತಾವನೆಗಳ ಆಧಾರದಲ್ಲಿ ಬೆಳಗಾವಿ, ಬೀದರ್‌, ಚಿತ್ರದುರ್ಗ, ದಾವಣಗೆರೆ, ಹಾಸನ, ಬಳ್ಳಾರಿ, ಮೈಸೂರು, ರಾಯಚೂರು, ತುಮಕೂರು, ವಿಜಯನಗರ ಈ 10 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ಉಳಿದ ಜಿಲ್ಲೆಗಳಿಂದ ಪ್ರಸ್ತಾವನೆ ಸಕಾಲಕ್ಕೆ ಬಾರದಿರುವ ಕಾರಣ ಗುರಿ ನಿಗದಿ ಮಾಡಿಲ್ಲ.

ವಿಶೇಷ ವರ್ಗದ ಫ‌ಲಾನುಭವಿ ಗಳನ್ನು ಗುರುತಿಸಲು ಅಂಗವಿಕಲರ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿತ್ತು ಎಂದು ವಸತಿ ನಿಗಮದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ಸಾಗುವಳಿ ಸಕ್ರಮ ಮಾಡಲು ಅವಕಾಶವಿಲ್ಲ: ಆರ್‌.ಅಶೋಕ್‌

ಈ ಯೋಜನೆಯಡಿ ವಸತಿ ಮಂಜೂರು ಮಾಡುವುದು ಮಾತ್ರವಲ್ಲದೆ ಫ‌ಲಾನುಭವಿಗಳು ವಸತಿಗೆ ಬೇಕಾದ ನಿವೇಶನ ಹೊಂದಿಲ್ಲ ದಿದ್ದರೆ ಜಮೀನು ಖರೀದಿಸಿ ನೀಡುವುದಕ್ಕೂ ಅವಕಾಶವಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶೇಷ ವರ್ಗದ ಯೋಜನೆಯಡಿ ಮನೆ ಪಡೆಯಲು ಅರ್ಹರಾಗಿರುವವರ ಸಮಗ್ರ ಮಾಹಿತಿ ಇಲಾಖೆಗಳ ಬಳಿ ಇಲ್ಲ. ಈ ಬಗ್ಗೆ ಇಲಾಖೆಗಳು, ಜನಪ್ರತಿನಿಧಿಗಳು ವಿಶೇಷ ಮುತುವರ್ಜಿ ವಹಿಸಿದರೆ ನೂರಾರು ಮಂದಿ ವಸತಿ ಆಕಾಂಕ್ಷಿ ಗಳಿಗೆ ಅನುಕೂಲವಾಗಲಿದೆ.

ಸಮೀಕ್ಷೆಗೆ ನಿರ್ದೇಶ
ವಿಶೇಷ ವರ್ಗದವರು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿರುವುದರಿಂದ ಅಲ್ಲಿಗೆ ಗುರಿ ನಿಗದಿಯಾಗಿರಬಹುದು. ನಮಗೆ ಗುರಿ ನಿಗದಿಯಾಗಿಲ್ಲ. ಆದಾಗ್ಯೂ ನಮ್ಮ ಜಿಲ್ಲೆಯಲ್ಲಿರುವ ವಿಶೇಷ ವರ್ಗದವರ ಸಮೀಕ್ಷೆ ನಡೆಸಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ನಿರ್ದೇಶ ನೀಡಲಾಗುವುದು.
– ಡಾ| ಕುಮಾರ್‌, ಸಿಇಒ, ದ.ಕ ಜಿ.ಪಂ.

ಗುರಿ ನಿಗದಿಪಡಿಸಿಲ್ಲ
ನಿಗಮದವರು ಗುರಿ ನಿಗದಿಗೊಳಿಸಿದರೆ ಜಿಲ್ಲೆಯ ವಿಶೇಷ ವರ್ಗದವರ ಆಯ್ಕೆ ಮಾಡಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯ ಗುರಿ ನಿಗದಿಯಾಗಿಲ್ಲ.
-ಡಾ| ನವೀನ್‌ ಭಟ್‌,
ಸಿಇಒ, ಉಡುಪಿ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next