Advertisement

ಕಾರವಾರದಲ್ಲಿ ಹೋವರ್‌ ಕ್ರಾಫ್ಟ್‌ಗೆ ನೆಲೆ

04:12 PM Oct 21, 2019 | Suhan S |

ಕಾರವಾರ: ದೇಶ ಹಾಗೂ ಕಾರವಾರದ ಹಿತದೃಷ್ಟಿಯಿಂದ ನೀರು ಮತ್ತು ನೆಲದ ಮೇಲೆ ಅತ್ಯಂತ ವೇಗವಾಗಿ ಚಲಿಸುವ ಹೋವರ್‌ ಕ್ರಾಫ್ಟ್‌ಗೆ ಕಾರವಾರದಲ್ಲಿ ನಿಲ್ದಾಣ ಹಾಗೂ ನೆಲೆ ಕಲ್ಪಿಸಲು ಜಿಲ್ಲಾಡಳಿತ ಸೂಕ್ತಕ್ರಮ ತೆಗೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹರೀಶಕುಮಾರ ಹೇಳಿದರು.

Advertisement

ಹೋವರ್‌ ಕ್ರಾಫ್ಟ್‌ನಲ್ಲಿ ಸುದ್ದಿಗಾರರು, ಸಹಾಯಕ ಕಮಿಷನರ್‌ ಹಾಗೂ ಕೋಸ್ಟ್‌ಗಾರ್ಡ್‌ ಕಮಾಡೆಂಟ್‌ ಜೊತೆ ಸಮುದ್ರದಲ್ಲಿ ಪಯಣಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಸಮುದ್ರದಲ್ಲಿ ಅವಘಡಗಳಾದಾಗ ಮೀನುಗಾರರನ್ನು ರಕ್ಷಿಸಲು ಹಾಗೂ ಪ್ರಕೃತಿ ವಿಕೋಪದ ವೇಳೆ ಜಿಲ್ಲಾಡಳಿತಕ್ಕೆ ನೆರವು ನೀಡಲು ಕಾರವಾರದಲ್ಲಿ ಭಾರತೀಯ ಕೋಸ್ಟ್‌ಗಾರ್ಡ್‌ನ ಹೋವರ್‌ಕ್ರಾಫ್ಟ್‌ ನಿಲ್ಲಲು ಭೂಮಿ ನೀಡಲಾಗುವುದು ಎಂದರು.

ದೇಶದಲ್ಲಿಯೇ ಕಾರವಾರ ಈಗ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ನೌಕಾನೆಲೆ ಹಾಗೂ ಕೈಗಾ ಬಳಿ ಅಣುವಿದ್ಯುತ್‌ ಕೇಂದ್ರ ಹಾಗೂ ಕಾರವಾರ, ಜೋಯಿಡಾ ತಾಲೂಕಿನಲ್ಲಿ ಅಣೆಕಟ್ಟುಗಳನ್ನು ಹೊಂದಿದೆ. ದೇಶದಲ್ಲಿ ರೆಡ್‌ ಅಲರ್ಟ್‌ ಘೋಷಿಸಿದಾಗಲೆಲ್ಲ ಕಾರವಾರದಲ್ಲಿ ಕಟ್ಟೆಚ್ಚರ ಘೋಷಿಸಲಾಗುತ್ತಿದೆ. ಸಾಗರ ಮಾರ್ಗವಾಗಿ ಆಗಬಹುದಾದ ಸಂಭಾವ್ಯ ದಾಳಿಗಳನ್ನು ತಡೆಗಟ್ಟಲು ಭಾರತೀಯ ಕೋಸ್ಟ್‌ಗಾರ್ಡ್‌ಗೆ ಹೋವರ್‌ಕ್ರಾಫ್ಟ್‌ ಹಾಗೂ ಹೆಲಿಕಾಪ್ಟರ್‌ಗಳ ಅವಶ್ಯಕತೆ ಇದ್ದು, ಅವುಗಳ ನಿಲುಗಡೆಗಾಗಿ ಸೂಕ್ತ ಸ್ಥಳವನ್ನು ಹುಡುಕಲಾಗುತ್ತಿದೆ. ಹಿಂದೆ ಕೋಸ್ಟ್‌ಗಾಡ್‌ ಗೆ ಭೂಮಿ ನೀಡಲಾಗಿತ್ತು. ಹಾಗಾಗಿ ಅವರಿಗೆ ಹೊಸದಾಗಿ ಭೂಮಿ ಹುಡುಕುವ ಪ್ರಶ್ನೆಯಿಲ್ಲ. ಕೆಲವರಲ್ಲಿ ಅನವಶ್ಯಕ ಗೊಂದಲ, ಅನುಮಾನಗಳಿವೆ. ಅವುಗಳನ್ನು ತಿಳಿಗೊಳಿಸಲಾಗುವುದು ಎಂದರು.

ಕಾರವಾರ ತಾಲೂಕಿನ ಯಾವುದಾದರೂ ಬೀಚ್‌ನಲ್ಲಿ ಸ್ಥಳಕ್ಕಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಕಾರವಾರದ ಬೀಚ್‌ನಲ್ಲಿ ಈಗಾಗಲೇ ಒಂದೂವರೆ ಎಕರೆ ಜಮೀನನ್ನು ಕೋಸ್ಟ್‌ಗಾರ್ಡ್‌ಗಾಗಿ ನೀಡಲಾಗಿದ್ದು, ಹೋವರ್‌ಕ್ರಾಫ್ಟ್‌ ಹಾಗೂ ಹೆಲಿಕಾಪ್ಟರ್‌ಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂಬುದನ್ನು ಕೋಸ್ಟ್‌ಗಾರ್ಡ್‌ ನಿರ್ಧರಿಸಬೇಕಿದೆ. ಆದರೆ ಈ ಸ್ಥಳವು ಕಾರ್ಯಾಚರಣೆಗೆ ಕ್ವಿಕ್‌ ರಿಸ್ಪಾನ್ಸ್‌ ಅಥವಾ ಶೀಘ್ರ ಸ್ಪಂದನೆಗೆ ತಕ್ಕದಾಗಿರಬೇಕು. ಎಲ್ಲ ಸ್ಥಳೀಯರ ಮನವೊಲಿಸಿಯೇ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜ್ಯದ ಬೇರೆ ಜಿಲ್ಲೆಯ ನದಿ ಅಥವಾ ಸಮುದ್ರದಲ್ಲಿ ಅವಘಡ ಸಂಭವಿಸಿದಾಗ ತಕ್ಷಣ ನೇವಿ ಡೈವರಸ್‌, ಈಜು ತಜ್ಞರು ಹಾಗೂ ಹೆಲಿಕಾಪ್ಟರ್‌ ಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುತ್ತಿದೆ. ಆದರೆ ನೌಕಾಪಡೆಯು ತನ್ನದೇ ಆದ ಕಾರ್ಯ ವಿಧಾನಗಳನ್ನು ಹೊಂದಿರುವ ಕಾರಣ ತಕ್ಷಣ ಅವರ ನೆರವನ್ನು ಪಡೆಯುವಲ್ಲಿ ವಿಳಂಬವಾಗುತ್ತದೆ.

Advertisement

ಆದರೆ ಅವಘಡಗಳ ಸಂದರ್ಭದಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾಗಿರುವ ಹಿನ್ನೆಲೆಯಲ್ಲಿ ಅಂತಹ ಕಾರ್ಯಾಚರಣೆಗೆ ಕೋಸ್ಟ್‌ಗಾರ್ಡ್‌ ಹೇಳಿ ಮಾಡಿಸಿದ್ದು. ಅಲ್ಲದೇ ಆಳ ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿದ್ದು, ಮೀನುಗಾರರ ರಕ್ಷಣೆಗೆ ತಕ್ಷಣ ಕೋಸ್ಟ್‌ಗಾರ್ಡ್‌ ಸ್ಪಂದಿಸುವ ಅವಶ್ಯಕತೆ ಇದೆ. ಹೀಗಾಗಿ ಕೋಸ್ಟ್‌ಗಾರ್ಡ್‌ಗಾಗಿ ಸ್ಥಳ ಗುರುತಿಸುವಂತೆ ಸರ್ಕಾರದ ಆದೇಶವಾಗಿದ್ದು, ವಿಳಂಬ ನೀತಿ ಅನುಸರಿಸುವಂತಿಲ್ಲ ಎಂದು ಹರೀಶಕುಮಾರ ವಿವರಿಸಿದರು.

ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಹಾಗೂ ನೆರೆಹಾವಳಿ ಉಂಟಾಗಿದ್ದ ವೇಳೆ ಹಲವು ಕಡೆಗಳಿಂದ ನೆರವಿಗಾಗಿ ಮನವಿಗಳು ಬರುತ್ತಿದ್ದವು. ಆದರೆ ಕೋಸ್ಟ್‌ಗಾರ್ಡ್‌ಗೆ ಕಾರವಾರದಲ್ಲಿ ಹೋವರ್‌ ಕ್ರಾಫ್ಟ್‌ ಹಾಗೂ ಹೆಲಿಕಾಪ್ಟರ್‌ ಇಳಿಸಲು ಸ್ಥಳವೇ ಇಲ್ಲದ ಹಿನ್ನೆಲೆಯಲ್ಲಿ ಇಡೀ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು. ಒಬ್ಬೊಬ್ಬ ನಾಗರಿಕನ ಜೀವ ರಕ್ಷಣೆಯ ಹೊಣೆಯೂ ಜಿಲ್ಲಾಡಳಿತದ ಮೇಲಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಲು ಕೋಸ್ಟ್‌ಗಾರ್ಡ್‌ಗೆ ಮೂಲ ಸೌಕರ್ಯವನ್ನು ಜಿಲ್ಲಾಡಳಿತ ಕಲ್ಪಿಸಿಕೊಡಲಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next