Advertisement

ಮಳೆಕೊಯ್ಲಿನಿಂದ ಬಾವಿಯ ಹಳದಿ ನೀರು ಸಮಸ್ಯೆ ನಿವಾರಣೆ!

12:34 AM Aug 04, 2019 | Sriram |

ಕುಂದಾಪುರ: ಮಳೆಕೊಯ್ಲು ಮಾಡಿದವರ ಅನುಭವಗಳನ್ನು ಇತರರಿಗೆ ಪ್ರೇರಣೆಯಾಗಲಿ ಉದಯವಾಣಿ ಪ್ರತಿದಿನ ಮಳೆಕೊಯ್ಲು ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಮಳೆಕೊಯ್ಲು ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಂಡೆವು ಎಂದು ಹೇಳುವ ಅನೇಕರು ಸಿಕ್ಕಿದ್ದಾರೆ. ಆದರೆ ಮಳೆಕೊಯ್ಲಿನಿಂದ ಬಾವಿಯಲ್ಲಿ ಶುದ್ಧ ನೀರು ದೊರೆಯುತ್ತಿದೆ, ಬಾವಿಯಲ್ಲಿ ಈವರೆಗೆ ಉಂಟಾಗುತ್ತಿದ್ದ ಹಳದಿ ನೀರು, ಕೆಂಪು ನೀರಿನ ಸಮಸ್ಯೆ ನಿವಾರಣೆಯಾಗಿದೆ ಎನ್ನುವವರು ಕೂಡ ಇದ್ದಾರೆ. ಕೋಣಿಯ ಶಶಿಕಾಂತ್‌ ಎಸ್‌.ಕೆ. ಅವರು ಕೆಂಪು ನೀರಿನ ಸಮಸ್ಯೆ ನಿವಾರಣೆಯಾದುದನ್ನು ಹೇಳಿದ್ದರು. ಈ ಬಾರಿ ಹಳದಿ ನೀರಿನ ಸಮಸ್ಯೆ ನಿವಾರಣೆಯಾದ ಉದಾಹರಣೆಯಿದೆ.ಇದರರ್ಥ ಮಳೆಕೊಯ್ಲು ಕೇವಲ ನೀರಿಂಗಿಸಲು ಅಷ್ಟೇ ಅಲ್ಲ, ಬಾವಿಯಲ್ಲಿ ನೀರು , ನೆರೆಹೊರೆಯ ಬಾವಿಯಲ್ಲೂ ಅಂತರ್ಜಲ ಹೆಚ್ಚುತ್ತದೆ. ಬೇಸಗೆಯಲ್ಲಿ ಉಂಟಾ ಗುವ ಹಳದಿ, ಕೆಂಪು ನೀರಿನ ಸಮಸ್ಯೆಯೂ ನಿವಾರಣೆ ಯಾಗುತ್ತದೆ, ಮಾತ್ರವಲ್ಲ ಖಾಯಿಲೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುವ ಧನಾತ್ಮಕ ಅಂಶಗಳಿವೆ.

Advertisement

ಹಳದಿ ನೀರಿನ ಸಮಸ್ಯೆ
ಕುಂದಾಪುರ ಪುರಸಭೆ ವ್ಯಾಪ್ತಿಯ ನಾವಡರ ಕೇರಿಯ ನಾಗೇಶ್‌ ನಾವಡ ಅವರು ಮೂರು ವರ್ಷಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ಅವರಿಗೆ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಮಳೆಕೊಯ್ಲು ಮೂಲಕ ಜನಸೇವೆ ಜತೆಗೆ ಜಲಸೇವೆಗೆ ಮುಂದಾದರು. ಎಲ್ಲರೂ ಅಳವಡಿಸುವಂತೆ ಡ್ರಮ್‌ ಪದ್ಧತಿಯಲ್ಲಿಯೇ ಮಳೆಕೊಯ್ಲುವಿಗೆ ಸಿದ್ಧತೆ ನಡೆಸಿದರು. ತಾರಸಿ ಮೇಲೆ ಬಿದ್ದ ಮಳೆನೀರು ಒಂದೇ ಕಡೆ ಪೈಪ್‌ಗೆ ಹೋಗುವಂತೆ ಮಾಡಲು 1,500 ಚ.ಅಡಿಯ ತಾರಸಿಗೆ ನೀಲಿ ಟರ್ಪಾಲು ಹಾಕಿದರು. ಅದರ ಮೂಲಕ ಒಂದೇ ಕಡೆ ಕಲೆತ ನೀರು ಒಂದೇ ಪೈಪ್‌ನಲ್ಲಿ ನೀರು ಶುದ್ಧ ಮಾಡುವ ಡ್ರಮ್‌ಗೆ ಬೀಳುವಂತೆ ಮಾಡಿದರು. ಆ ಡ್ರಮ್ಮಿನಲ್ಲಿ ನೀರು ಶುದ್ಧವಾಗಿ ಬಾವಿಗೆ ಹರಿಯಬಿಟ್ಟರು. ಇಲ್ಲೂ ಇನ್ನೊಂದು ಬುದ್ಧಿ ಮತ್ತೆ ಉಪಯೋಗಿಸಿದರು.

ಬಹುತೇಕ ಜನರು ಬಾವಿಗೆ ಮೇಲಿನಿಂದ ಪೈಪ್‌ ಬಿಟ್ಟು ಡ್ರಮ್‌ನ ನೀರು ಮೇಲಿಂದ ಬೀಳುವಂತೆ ಮಾಡುತ್ತಾರೆ. ಇದರಿಂದ ಬಾವಿಯಲ್ಲಿ ಕೆಸರಿನ ಅಂಶ ಇದ್ದರೆ ನೀರು ಬಿದ್ದು ಬಾವಿ ನೀರು ರಾಡಿಯಾಗುತ್ತದೆ ಎಂದು ಆರೋಪವಿದೆ. ಇದು ಮನೆ ಟ್ಯಾಂಕಿಗೆ ತುಂಬಿಸಿದಾಗ ಕೊಳೆನೀರಿನಂತೆ ನಳ್ಳಿ ಮೂಲಕ ಹರಿದು ಬರುತ್ತದೆ ಎನ್ನುವುದು ಸಾಮಾನ್ಯ ಆರೋಪ. ಇದಕ್ಕಾಗಿ ನಾಗೇಶ ನಾವಡರು ಮಾಡಿನ ನೀರು ನೆಲಕ್ಕೆ ಬೀಳಲು ಉಪಯೋಗಿಸುವ ಪೈಪ್‌ ಮಾದರಿಯ ತೆಳುವಾದ ಪ್ಲಾಸ್ಟಿಕ್‌ನ್ನು ಪೈಪ್‌ಗೆ ಕಟ್ಟಿ ಅದನ್ನು ಬಾವಿಗೆ ಇಳಿಬಿಟ್ಟರು. ಆಗ ನೀರು ಬಾವಿ ನೀರಿಗೆ ಮೆಲ್ಲನೆ ಇಳಿದು ಹರಿಯಿತು. ಇಷ್ಟಾದ ಬಳಿಕ ಈ ನೀರು ಟ್ಯಾಂಕ್‌ ಸೇರುವ ಮುನ್ನ ಇನ್ನೊಂದು ಫಿಲ್ಟರ್‌ ಅಳವಡಿಸಿದರು. ಎರಡು ಹಂತದಲ್ಲಿ ಶುದ್ಧಗೊಂಡ ನೀರು ಟ್ಯಾಂಕಿ ಸೇರಿದ ಕಾರಣ ಶುದ್ಧತೆಯ ಚಿಂತೆಯಿಲ್ಲ. ಇದೆಲ್ಲ ಮಾಡಿದ ಪರಿಣಾಮ ಸನಿಹದ ಮೂರ್ನಾಲ್ಕು ಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಮನೆಯಲ್ಲಿ ಅನಾರೋಗ್ಯ ಪೀಡಿತರಾಗುವ ಸಮಸ್ಯೆ ನಿವಾರಣೆಯಾಗಿದೆ ಎನ್ನುತ್ತಾರೆ ನಾಗೇಶ್‌ ನಾವಡ ಅವರು.

ಸಮಸ್ಯೆಯೇ ಇಲ್ಲ
ಬೇಸಗೆಯಲ್ಲಿ ನಮ್ಮನೆ ಬಾವಿಯಲ್ಲಿ ಸುಮಾರು 7 ಅಡಿ ಶುದ್ಧ ನೀರು ಇರುತ್ತದೆ. ಅಕ್ಕಪಕ್ಕದ ಬಾವಿಗಳಿಗೂ ಇಲ್ಲಿ ನೀರಿಂಗಿಸಿ ಪ್ರಯೋಜನವಾಗುತ್ತಿದೆ. ಬಣ್ಣದ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಉದಯವಾಣಿ ಕೈಗೊಂಡ ಮಳೆಕೊಯ್ಲು ಅಭಿಯಾನ ಎಲ್ಲರಿಗೂ ಪ್ರೇರಣೆಯಾಗಲಿ.
-ನಾಗೇಶ್‌ ನಾವಡ, ಕುಂದಾಪುರ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 7618774529

Advertisement
Advertisement

Udayavani is now on Telegram. Click here to join our channel and stay updated with the latest news.

Next