Advertisement

ಕೋಟೆ: ಜಲಮರುಪೂರಣ ಅಳವಡಿಸಿದ ಗಣೇಶ್‌ ಸಾಲ್ಯಾನ್‌

10:02 PM Aug 04, 2019 | Team Udayavani |

ಕಟಪಾಡಿ: ಮಳೆ ಕೊಯ್ಲು ಜಲಸಾಕ್ಷರತೆಯ ಬಗ್ಗೆ ಉದಯವಾಣಿಯು ಹೆಚ್ಚಿನ ಮಾಹಿತಿ ನೀಡಿದ್ದರಿಂದ ನಾನೂ ಕೂಡಾ ಜಲಸಾಕ್ಷರನಾಗಲು ಬಯಸಿ ಸ್ವತಃ ನನ್ನ ಮನೆಯಲ್ಲಿ ಮಳೆಕೊಯ್ಲು ಅಳವಡಿಸುವಂತಾಗಿದೆ ಎಂದು ಕೋಟೆ ಗ್ರಾಮದ ಸೆಲೂನ್‌ ಮಾಲಕ ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು ಕಟಪಾಡಿ ಮಳೆಕೊಯ್ಲು ಘಟಕ ಅಳವಡಿಸಿದ ಬಗ್ಗೆ ತಿಳಿಸಿದರು.

Advertisement

ಉದಯವಾಣಿ ನೀರಿನ ಸುರಕ್ಷತೆಯ ಬಗ್ಗೆ ನಿರಂತರ ಪಾಠವನ್ನು ನೀಡಿದ್ದರಿಂದ ಪ್ರೇರೇಪಿತನಾಗಿ ಈಗ ಥಾರಸಿಯ ಮೇಲೆ ಬೀಳುವ ಮಳೆಯ ನೀರು ಹರಿದು ಪೋಲಾಗದಂತೆ ಎಲ್ಲ ನೀರು ಹರಿದು ಶುದ್ಧಗೊಂಡು ಬಾವಿಗೆ ಜಲ ಮರುಪೂರಣವನ್ನು ಮಾಡಲಾಗುತ್ತಿದೆ.

ಪ್ಲಂಬಿಂಗ್‌ ಬಗ್ಗೆ ಅನುಭವ ಇತ್ತು. ಉದಯ ವಾಣಿಯ ಸವಿವರವಾದ ಮಾಹಿತಿ ಆಧಾರದ ಮೇಲೆ ಸ್ವತಃ ಪೈಪುಗಳನ್ನು ಸುಲಭವಾಗಿ ಅಳವಡಿಸಿದ್ದೇನೆ. ಪ್ಲಾಸ್ಟಿಕ್‌ ಡ್ರಮ್‌ ಮಾದರಿಯೂ ಅಗ್ಗವಾಗಿದೆ. ಸುಮಾರು 1,300 ರೂ. ಗಳ ವೆಚ್ಚದಲ್ಲಿ ಘಟಕ ಸಿದ್ಧಪಡಿಸಿರುತ್ತೇನೆ.ಇದನ್ನು ಕಂಡ ಸಹೋದರಿ ಗೀತಾ ಡಿ.ಸುವರ್ಣ ಕುಚ್ಚಿಕಾಡು ಕಟಪಾಡಿ ಕೂಡಾ ಈಗ ಜಲದ ವಿಷಯದಲ್ಲಿ ಸಾಕ್ಷರಳಾಗಿದ್ದಾಳೆ. ಕಡಿಮೆ ವೆಚ್ಚದಲ್ಲಿ ಅಲ್ಲಿಯೂ ಅಳವಡಿಸಿದೆನು ಎಂದು ಮಳೆನೀರನ್ನು ಉಳಿಸಿದ ಹೆಮ್ಮೆ ವ್ಯಕ್ತಪಡಿಸುತ್ತಾರೆ ಗಣೇಶ್‌ ಸಾಲ್ಯಾನ್‌ ಅವರು.

ತನ್ನ ಸೆಲೂನ್‌ಗೆ ಬರುವ ಎಲ್ಲ ಗ್ರಾಹಕರಿಗೂ ಈ ಜಲಸಾಕ್ಷರತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ನೀಡುತ್ತಾ, ಅವರೂ ಅಳವಡಿಸುವಂತೆ ಪ್ರೇರೇಪಿಸುತ್ತಿದ್ದಾರೆ. ಪತ್ನಿ ಸಂಧ್ಯಾಗಣೇಶ್‌ ಸಾಲ್ಯಾನ್‌ ಮಣಿಪಾಲ ಕೆಎಂಸಿಯಲ್ಲಿ ಟೆಕ್ನೀಷಿಯನ್‌ ಆಗಿದ್ದು ಆಕೆ ಈ ಘಟಕ ನಿರ್ಮಿಸಲು ಹೆಚ್ಚು ಪ್ರೋತ್ಸಾಹ ನೀಡಿದ್ದಾಳೆ. ಯಾರಾದರೂ ಈ ಘಟಕವನ್ನು ಅಳವಡಿಸಲು ಬಯಸಿದಲ್ಲಿ ಲಭ್ಯ ಸಮಯಾವಕಾಶದಲ್ಲಿ ತೆರಳಿ ಸಿದ್ಧಪಡಿಸಿ ಅಳವಡಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಾಗೃತಿ ಮೂಡಿಸುತ್ತೇನೆ
ಪ್ರಕೃತಿಯಿಂದ ಹೇರಳವಾಗಿ ಲಭಿಸುವ ನೀರನ್ನು ನಾವೆಲ್ಲರೂ ಪೋಷಿಸಬೇಕು. ರಕ್ತದ ಹನಿಯಂತೆ ನೀರಿನ ಹನಿ ಹನಿಯೂ ಬೆಲೆಬಾಳುತ್ತದೆ. ಈ ಬಗ್ಗೆ ಜನಮನದ ಜೀವ ನಾಡಿಯಾದ ಉದಯವಾಣಿ ದಿನಪತ್ರಿಕೆ ಎಚ್ಚರಿಸುವ ರೀತಿಯಿಂದ (ಜನಜಾಗೃತಿ) ಉತ್ತೇಜಿತನಾಗಿದ್ದೇನೆ. ಬಹಳಷ್ಟು ಕಡಿಮೆ ವೆಚ್ಚದ ಘಟಕ ಅಳವಡಿಸಲು ನನ್ನ ಸಂಬಂಧಿಕರಲ್ಲಿಯೂ ಕೋರಿಕೊಂಡಿದ್ದೇನೆ. ಸ್ವತಃ ಉದಾಹರಣೆಯಾಗಿ ಗ್ರಾಹಕರಲ್ಲೂ ಜಾಗೃತಿ ಮೂಡಿಸುತ್ತೇನೆ .
-ಗಣೇಶ್‌ ಸಾಲ್ಯಾನ್‌ ಕುಚ್ಚಿಕಾಡು,
ಸೆಲೂನು ಮಾಲಕ, ಕೋಟೆ, ಕಟಪಾಡಿ

Advertisement

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

Advertisement

Udayavani is now on Telegram. Click here to join our channel and stay updated with the latest news.

Next