ಬೆಳಗಾವಿ: ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ರಾತ್ರಿ ಹೊತ್ತು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಮನೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಕಣಬರಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಕಣಬರಗಿಯ ಇಂಡಾಲ್ ರಸ್ತೆಯ ಸಿದ್ದೇಶ್ವರ ನಗರದ ಸೋನಪ್ಪ ತಳವಾರ ಎಂಬವರ ಮನೆಗೆ ಕನ್ಬ ಹಾಕಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ದೋಚಿಕೊಂಡು ಮನೆಗೆಲ್ಲ ಬೆಂಕಿ ಹಚ್ಚಿದ್ದಾರೆ. ಇದರಿಂದ ಸಂಪೂರ್ಣ ಮನೆ ಸುಟ್ಟು ಕರಕಲಾಗಿದೆ.
ಮನೆಯ ಟ್ರೇಜರಿಯಲ್ಲಿ ಇಟ್ಟಿದ್ದ 5 ತೊಲೆ ಚಿನ್ನಾಭರಣ, 15 ತೊಲೆ ಬೆಳ್ಳಿ ಆಭರಣ, 25 ಸಾವಿರ ರೂ. ನಗದು ಹೊಸ ಬಟ್ಟೆ, ಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಬಳಿಕ ಹೋಗುವಾಗ ಮನೆಯಲ್ಲಿದ್ದ ಕಾಗದದ ತುಂಡುಗಳ ಮೂಲಕ ಮನೆಗೆಲ್ಲ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಸೋನಪ್ಪ ತಳವಾರ ನೋವು ತೋಡಿಕೊಂಡಿದ್ದಾರೆ.
ಸೋಮವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಹೆದರಿ ಕುಟುಂಬಸ್ಥರು ತಮ್ಮ ಹಿಂಬದಿಯ ಮನೆಯಲ್ಲಿ ಮಲಗುತ್ತಿದ್ದರು. ಮಂಗಳವಾರ ರಾತ್ರಿಯೂ ಅದೇ ಮನೆಯಲ್ಲಿಯೇ ಇದ್ದರು. ಸಿದ್ದೇಶ್ವರ ನಗರದ ಇಂಡಾಲ್ ರಸ್ತೆಯ ಮುಂಭಾಗದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಕನ್ನ ಹಾಕಿದ್ದಾರೆ. ಚಿನ್ನಾಭರಣ, ನಗದು, ಪೀಠೋಪಕರಣ, ಹೊಸ ಸೀರೆ, ಬಟ್ಟೆಗಳು, ಆಸ್ತಿ ದಾಖಲೆ ಪತ್ರಗಳನ್ನು ಕಳ್ಳರು ದೋಚಿ ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಮನೆಗಳ್ಳತನ ಮಾಡಿ ಬೆಂಕಿ ಹಚ್ಚಿದ್ದಾರೆ. ಟ್ರೇಜರಿ ರಾಡ್ ದಿಂದ ಮುರಿದು ಕಳವು ಮಾಡಿ ಬೆಂಕಿ ಹಚ್ಚಿದ್ದರಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಮುಖಂಡ ಅಂಜನಕುಮಾರ ಗಂಡಗುದ್ರಿ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.