ಗುಂಡ್ಲುಪೇಟೆ: ಮನೆಯಲ್ಲಿ ಮಾಲೀಕರು ಮಲಗಿರುವ ವೇಳೆ ಬಾಗಿಲು ಮುರಿದು ಖದೀಮರು ಕಳ್ಳತನ ಮಾಡಿರುವ ಘಟನೆ ಪಟ್ಟಣದ 5ನೇ ವಾರ್ಡ್‌ನ ಜಿ.ಪಿ.ರಾಜರತ್ನಂ ರಸ್ತೆಯಲ್ಲಿ ಗುರುವಾರ ಮಧ್ಯರಾತ್ರಿ 2.30ರಲ್ಲಿ ನಡೆದಿದೆ.
ಪಟ್ಟಣದ ಜೈನ್ ಭವನ ರಸ್ತೆ ಸಂದೀಪ್ ಕುಮಾರ್ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಬೀರು ಒಡೆದು 10 ಚಿನ್ನದ ಮೂಗುತಿ, ಒಂದು ಜೊತೆ ಬೆಳ್ಳಿ ದೀಪ, ಒಂದು ಜೊತೆ ಬೆಳ್ಳಿ ಕುಂಕುಮದ ಬಟ್ಟಲು, ಒಂದು ಬೆಳ್ಳಿ ಕೈಬಂದಿ, ಮೊಬೈಲ್ ಸೇರಿದಂತೆ 20 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯ ಹಿಂಭಾಗದ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ನಂತರ ಶುಕ್ರವಾರ ಬೆಳಗ್ಗೆ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿಸಿ ಟಿವಿ ದೃಶ್ಯಾವಳಿ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ನಿದ್ರಾವಸ್ಥೆಯಲ್ಲಿ ಮನೆ ಮಾಲೀಕರು: ಮನೆಯಲ್ಲಿ ಕಳ್ಳತನ ನಡೆದು ಖದೀಮರು ನಗ ನಾಣ್ಯ ದೋಚುತ್ತಿದ್ದ ವೇಳೆ ಮನೆ ಮಾಲೀಕರಿಗೆ ಘಟನೆ ಪರಿವೇ ಇಲ್ಲದಂತೆ ಮಲಗಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದರೆ ಕಳ್ಳರು ಮಾಲೀಕರು ಪ್ರಜ್ಞಾಹೀನವಾಗುವ ಔಷಧಿ ಸಿಂಪಡಿಸಿ ಇಂತಹ ಕೃತ್ಯ ನಡೆಸಿದ್ದಾರೆಯೋ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪ್ರಮುಖ ರಸ್ತೆಯಲ್ಲಿ ಸಿಸಿ ಟಿವಿ, ಗಸ್ತು ನಡೆಸಿ: ಪಟ್ಟಣದ ಪ್ರಮುಖ ಜನ ನಿಬಿಡ ಪ್ರದೇಶದಲ್ಲೆ ಖದೀಮರು ಕಳ್ಳತನ ಮಾಡುತ್ತಿದ್ದಾರೆ. ಆದ್ದರಿಂದ ಅಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಜೊತೆಗೆ ರಾತ್ರಿ ವೇಳೆ ಪೊಲೀಸರು ಹೆಚ್ಚಿನ ರೀತಿಯಲ್ಲಿ ಗಸ್ತು ತಿರುಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.