Advertisement
ಇಂದಿನ ವೇಗದ ಜೀವನದಲ್ಲಿ ಮನೆ ಒಂದು ದೈಹಿಕ ಅಗತ್ಯವಷ್ಟೇ ಅಲ್ಲ, ಮನಸ್ಸಿಗೆ ಪ್ರೀತಿ, ನೆಮ್ಮದಿ, ಮತ್ತು ಆರಾಮವನ್ನು ನೀಡುವ ಜಾಗವೂ ಹೌದು. ಪ್ರತಿ ಮನೆಯಲ್ಲೂ ಬೆಳೆದ ಕಥೆಗಳು, ನೆನಪುಗಳು ಮತ್ತು ಬಲಗೊಂಡ ಬಾಂಧವ್ಯಗಳಿವೆ.
Related Articles
Advertisement
ಮನೆಯ ಬಗ್ಗೆ ಹೇಳಿದೆ. ಮನೆಗಿಂತಲೂ ನನಗೆ ಪ್ರಿಯವಾದ ಜಾಗವೊಂದಿದ್ದರೆ ನಮ್ಮ ಮನೆಯ ಪಕ್ಕದಲ್ಲಿರುವ ನಮ್ಮ ಗದ್ದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಎಂಬಂತೆ ಸಮಯವ ಅರಿವೇ ಇಲ್ಲದೇ ನಾನು ಮತ್ತು ನನ್ನ ಅಕ್ಕ ಆ ಜಾಗದಲ್ಲಿ ಕಳೆದ ಸಮಯ ಮಾತ್ರ ಎಂದಿಗೂ ಸಿಹಿ ನೆನಪು. ನಮ್ಮಿಬ್ಬರ ಎಲ್ಲ ಮಾತುಗಳಿಗೆ, ಖುಷಿಯನ್ನು ಹಂಚಿಕೊಂಡ ಕ್ಷಣಗಳಿಗೆ, ಬೇಸರಗಳಿಗೆ ಸಾಕ್ಷಿಯಾದ ಜಾಗವದು. ನನ್ನ ಪಾಲಿಗೆ ಭೂಮಿ ಮೇಲಿನ ಸ್ವರ್ಗ ಎಂದೇ ಹೇಳಬಹುದು.
ಸುಮಾರು ಸಮಯದ ಕಾಲ ನಿಂತಿದ್ದ ಬತ್ತದ ಕೃಷಿ ಆ ಗದ್ದೆಯಲ್ಲಿ ಮತ್ತೆ ಶುರುವಾದಾಗ ನನಗೂ ನನ್ನ ಅಕ್ಕನಿಗೂ ತಲೆ ಬಿಸಿಯಾಗಿತ್ತು. “ಅಯ್ಯೋ ಇನ್ನು ನಮ್ಮ ವಾಕಿಂಗ್ ಸ್ಪಾಟ್ ಕೈತಪ್ಪಿತಲ್ಲ’ ಎಂದು. ನಮ್ಮ ಫೋಟೋಶೂಟ್ ಕೂಡ ಅಲ್ಲೇ ನಡೆಯುತ್ತಿತ್ತು. ಆವಾಗಾವಾಗ ಅಪರೂಪಕ್ಕೆ ನಾನು ಮನೆಯಲ್ಲಿ ಹೇಳುವುದುಂಟು “ದೊಡ್ಡಪ್ಪ…ಅಪ್ಪ..ನನಗೆ ನೀವು ಏನೂ ಕೊಡದೇ ಇದ್ದರೂ ಪರವಾಗಿಲ್ಲ, ನಾನೂ ಕೇಳುವುದಿಲ್ಲ. ಆದರೆ ಆ ಗದ್ದೆಯನ್ನ ಮಾತ್ರ ನನ್ನ ಹೆಸರಿಗೆ ಬರೆದು ಬಿಡಿ ಪ್ಲೀಸ್’ ಎಂದು. “ನಾನು ಮನೆಯ ಸಣ್ಣ ಮಗಳು. ನನಗೆ ಮನೆ ಮೇಲೆ ಜಾಸ್ತಿ ಪ್ರೀತಿಯಲ್ಲ. ಅದಕ್ಕೆ ನನ್ನ ಮದುವೆಗೆ ನಮ್ಮ ಮನೆಯಲ್ಲೇ ವ್ಯವಸ್ಥೆ ಮಾಡಿ’ ಎಂದು ನಾನು ವಾರಕ್ಕೆ ನಾಲ್ಕು ಬಾರಿಯಾದರೂ ಹೇಳಿಯೇ ಹೇಳುತ್ತೇನೆ.
ಹೌದು, ಅವರವರ ಮನೆ ಅವರವರಿಗೆ ಅವರವರ ಮನಸ್ಸಿಗೆ ತುಂಬಾ ಹತ್ತಿರವಾದ ಜಾಗವಾಗಿರುತ್ತದೆ. ನಾವು ಹುಟ್ಟಿದ ಮನೆ, ಬೆಳೆದ ಮನೆ, ಆಡಿದ ಮನೆ, ಅತ್ತ ಮನೆ, ಕೀಲ ಕಿಲ ನಕ್ಕ ಮನೆ, ಹೀಗೆ ನಮ್ಮ ಪ್ರತಿಯೊಂದು ಕ್ಷಣಗಳಿಗೂ ಸಾಕ್ಷಿಯಾದ ಮನೆಯೆಂದರೆ ಎಲ್ಲರಿಗೂ ತಮ್ಮ ಮನಸ್ಸಿನ ಮೂಲೆಯಲ್ಲಿ ಒಂದು ದೊಡ್ಡ ಸ್ಥಾನ ಇದ್ದೇ ಇರುತ್ತದೆ. ಅದೇ ರೀತಿ ನನಗೂ ನಾನು ಹುಟ್ಟಿ ಬೆಳೆದ ಮನೆಯ ಮೇಲೆ ಏನೋ ವ್ಯಾಮೋಹ. ಅರಿಯದ ಪ್ರೀತಿ. ಯಾವಾಗಲೂ ಹಾಸ್ಟೆಲ್‌ನಿಂದ ಮನೆಗೆ ಬಂದಾಗ ಅನಿಸುವುದು ಮನೆ ಎಂದರೆ ಒಂದು ರೀತಿ ಮಯಾಲೋಕವೇ ಸರಿ ಎಂದು.
ಶ್ರೇಯಾ ಮಿಂಚಿನಡ್ಕ
ಎಸ್‌ಡಿಎಂ ಕಾಲೇಜು ಉಜಿರೆ