Advertisement
ಕಾಂಕ್ರಿಟ್ ಕವರ್ಆರ್ಸಿಸಿ ಕೆಲಸದಲ್ಲಿ ಅತಿ ಮುಖ್ಯವಾದದ್ದು ಕಂಬಿಗೆ ನೀಡುವ ಕವರ್ ಆಗಿರುತ್ತದೆ. ಅನೇಕಬಾರಿ ನಾವು ಸ್ಟೀಲಿಗೆ ಇಂತಿಷ್ಟು ಕಾಂಕ್ರಿಟ್ ಕವಚ ನೀಡಬೇಕು ಎಂಬುದನ್ನು ಮರೆತು ಒಟ್ಟಾರೆಯಾಗಿ ಉಕ್ಕು ಹೊರಗೆ ಕಾಣದಿದ್ದರೆ ಸಾಕು ಎಂದಿರುತ್ತೇವೆ. ಆದರೆ ಉಕ್ಕಿಗೆ ನೀಡುವ ಕವಚ ಬರಿ ನೀರಿನಿಂದ ರಕ್ಷಣೆ ನೀಡುವುದರ ಜೊತೆ ಅದರೊಂದಿಗೆ ಬೆಸೆಯಲೂ ಕೂಡ ಅತ್ಯಂತ ಸಹಾಯಕಾರಿಯಾಗಿರುತ್ತದೆ. ಪಾಯದಲ್ಲಿ ಹಾಕುವ ಹನ್ನೆರಡು ಎಂ ಎಂ ಕಂಬಿಗೂ ಕೂಡ ಸುಮಾರು ಎರಡು ಇಂಚಿನಷ್ಟು ಕವರ್ ಕೊಟ್ಟರೆ ಒಳ್ಳೆಯದು. ಇದು ಕಂಬಿ ಹಾಗೂ ಕಾಂಕ್ರಿಟ್ ಚೆನ್ನಾಗಿ ಬೆಸೆಯಲು ಸಹಾಯಕಾರಿ ಆಗಿರುವುದರ ಜೊತೆಗೆ ಮಣ್ಣಿನ ಸಂಪರ್ಕ ಸುಲಭದಲ್ಲಿ ಆಗದಂತೆ ಹಾಗೂ ಭೂಮಿಯ ಆಳದಲ್ಲಿ ಇರಬಹುದಾದ ತೇವಾಂಶದಿಂದಲೂ ರಕ್ಷಣೆಯನ್ನು ನೀಡುತ್ತದೆ.
ಸ್ಲಾಬ್ ಹಾಗೂ ಬೀಮ್‌ಗೆ ಕವರ್ ನೀಡುವುದು ಸ್ವಲ್ಪ ಸುಲಭ. ಆದರೂ ಆರ್‌ಸಿಸಿ ಕಂಬಗಳಿಗೆ ಕವರ್ ನೀಡುವುದು ಕಷ್ಟ. ಆದಕಾರಣ, ಭಿನ್ನ ರೀತಿಯಲ್ಲಿ ಇದನ್ನು ಮಾಡಲಾಗುತ್ತದೆ. ಕಾಂಕ್ರೀಟ್ ಹಾಕಲು ಬಳಸುವ ಕಾಲಂ ಬಾಕ್ಸ್ ಕೆಳಗೆ ಸ್ಟಾರ್‌ರ್ಟರ್ ಹಾಗೂ ಮೇಲೆ ಸ್ಪೇಸರ್‌ಗಳನ್ನು ಇಡುವುದರಿಂದ ಕವರ್ ಇಲ್ಲಿ ತೊಂದರೆ ಕೊಡುವುದಿಲ್ಲವಾದರೂ ಮಧ್ಯಭಾಗದಲ್ಲಿ ನೀಡುವ ವೇಳೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಜೋಕೆ. ಆದುದರಿಂದ, ಕಂಬಿಕಟ್ಟಿದ ಮೇಲೆ, ಕಾಲಂ ಬಾಕ್ಸ್ ಸಿಗಿಸುವ ಮೊದಲು ಮಧ್ಯಭಾಗದಲ್ಲಿ ಏಳು ಅಡಿ ಎತ್ತರದ ಕಾಲಂ ಇದ್ದರೆ ಕಡೆ ಪಕ್ಷ ಎರಡು ಮಟ್ಟದಲ್ಲಿ ಕವರ್ ಬ್ಲಾಕ್ಸ್ ನೀಡುವುದು ಅಗತ್ಯ.
Related Articles
ಹೊರಚಾಚು ಮಾದರಿಯ ಸ್ಲಾಬ್ ಮತ್ತು ಬೀಮ್‌ಗೆ ಮುಖ್ಯ ಉಕ್ಕಿನ ಸರಳುಗಳು ಮೇಲು ಪದರದಲ್ಲಿ ಇರುತ್ತವೆ. ಇವು ಕಾಲು ತುಳಿತಕ್ಕೆ ನೇರವಾಗಿ ಒಳಗೆ ತಳ್ಳಲ್ಪಡುವುದರಿಂದ, ಕಾಂಕ್ರಿಟ್ ಕೆಳಗೆ ಹೋಗಿ ಕಂಬಿ ಮೇಲಕ್ಕೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೇಳಿಕೇಳಿ ಸೂರಿನ ಮೇಲುಗಡೆಯೇ ಹೆಚ್ಚು ನೀರಿನ ಹಾಗೂ ಇತರೆ ವಾತಾವರಣದ ಆಘಾತಗಳಿಂದ ತೊಂದರೆಗೀಡಾಗುವುದು. ಆದುದರಿಂದ ಮೇಲು ಪದರದ ಕಂಬಿಗಳಿಗೆ ಆರ್ ಸಿ ಸಿ ಕೆಲಸಗಳಲ್ಲಿ ಗರಿಷ್ಟ ಕವರ್ ಇರುವಂತೆ ನೋಡಿಕೊಳ್ಳಬೇಕು. ಟಾಪ್ ಸ್ಟೀಲಿನ ಕವರ್ ಇದೆಯೋ ಇಲ್ಲವೋ ಎಂಬುದನ್ನು ಕಾಂಕ್ರಿಟ್ ಫಿನಿಶ್ ಮಾಡುವ ವೇಳೆಯೇ ಪರೀಕ್ಷಿಸ ಬಹುದಾದ ಕಾರಣ, ತಕ್ಷಣವೇ ನಾಲ್ಕಾರು ಬಾಂಡಲಿ ಹೆಚ್ಚುವರಿ ಕಾಂಕ್ರಿಟ್ ಸುರಿದು, ಮಟ್ಟಮಾಡಿ, ನಿರ್ದಿಷ್ಟ ಮಟ್ಟದ ಕವರ್ ಇರುವಂತೆ ಮಾಡಬೇಕು.
Advertisement
ಯುದ್ಧಕ್ಕೆ ಹೋಗುವ ಸೈನಿಕರಿಗೆ ಗುರಾಣಿ ಇದ್ದಂತೆ ನಮ್ಮ ಮನೆ ಕಾಯುವ ವಸ್ತುಗಳಿಗೆ ಕವರ್ ರûಾಕವಚ ಇದ್ದಂತೆ. ಆದುದರಿಂದ ದುಬಾರಿ ಸಿಮೆಂಟ್, ಸ್ಟೀಲ್ ಹಾಕಿ ಕಟ್ಟುವ ಮನೆ ಕವರ್ ಇಲ್ಲದೆ ಸೊರಗದಂತೆ ಎಚ್ಚರವಹಿಸಿ!
ಒಂದೊಮ್ಮೆ ಸೂಕ್ತ ಕವರ್ ಸಿಗದಿದ್ದರೆ ?ಕಾಲಂಗಳಲ್ಲಿ ಈ ರೀತಿಯ ನ್ಯೂನತೆ ಆಗುವುದು ಹೆಚ್ಚು. ತೂಕು ನೋಡಿ, ಮಧ್ಯದ ರೇಖೆ- ಸೆಂಟರ್ ಲೈನ್‌ಗೆ ಸರಿದೂಗಿಸಲು ಕಾಲಂ ಬಾಕ್ಸ್ ಅನ್ನು ನಾಲ್ಕಾರುಸಾರಿ ಆಲುಗಾಡಿಸಿದರೆ, ಕವರ್ ಎಲ್ಲ ಅಲುಗಾಡಿ ಸರಿದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾಲಂ ಅನ್ನು ಪ್ಲಂಬ್‌ಗ ಇರುವಂತೆ ಮಾಡಿ, ಜೊತೆಗೆ ಕವರ್ ಸರಿ ಇದೆಯೇ? ಎಂದು ನೋಡದಿದ್ದರೆ ಎರಡು ದಿನ ಬಿಟ್ಟು ಬಾಕ್ಸ್ ತೆಗೆದ ನಂತರ ಕಾಂಕ್ರಿಟ್‌ಗೆ ಕವರ್ ಸರಿಯಾಗಿ ಸಿಗದೆ ಹೊರಗೆ ಕಾಣುತ್ತಿರಬಹುದು. ಇಂಥ ಸಮಯದಲ್ಲಿ ಮೊದಲು ಕಾಲಂಗೆ ಅಂಟಿರಬಹುದಾದ ಗ್ರೀಸ್ ಇತ್ಯಾದಿಯನ್ನು ತೆಗೆದು, ಕಾಣುತ್ತಿರುವ ಕಂಬಿಯ ಸುತ್ತಲೂ ಶುದ್ಧಮಾಡಿ, ಕಲುಪಾಗಿ ಅಂದರೆ ಒಂದು ಪಾಲು ಸಿಮೆಂಟ್ ಹಾಗೂ ಎರಡು ಪಾಲು ಮರಳು ಬೆರೆಸಿ ಕಡೇ ಪಕ್ಷ ಮುಕ್ಕಾಲು ಇಂಚು ದಪ್ಪದ ಪ್ಲಾಸ್ಟರ್ ಮಾಡಬೇಕು. ಸಾಮಾನ್ಯವಾಗಿ ಕೆಲಸಗಾರರು, “ಆಮೇಲೆ ಮಾಡಿಕೊಳ್ಳಾಣ ಸಾರ್, ಇಲ್ಲದಿದ್ದರೆ ಕಾಲಂ ಕ್ಯೂರಿಂಗ್ ತಡವಾಗುತ್ತದೆ’ ಎಂದು ರಾಗ ಎಳೆಯಬಹುದು. ಆದರೆ ತೆರೆದ ಉಕ್ಕಿನ ಕಂಬಿಗಳನ್ನು ಹಾಗೆಯೇ ಬಿಟ್ಟು ಇಪ್ಪತ್ತೂಂದು ದಿನ ಕ್ಯೂರಿಂಗ್ ಮಾಡಿದರೆ, ಸೂಕ್ತ ಕವರ್ ಇಲ್ಲದ ಸ್ಟೀಲ್ ತುಕ್ಕು ಹಿಡಿಯಲು ತೊಡಗಬಹುದು. ಆದುದರಿಂದ ತೆರೆದ ಕಂಬಿಗಳಿಗೆ ಮೊದಲು ಪ್ಲಾಸ್ಟರ್ ಮಾಡಿ ನಂತರ ಮುಂದುವರೆಯುವುದು ಒಳ್ಳೆಯದು. ಸ್ಲಾಬ್ ಹಾಗೂ ಬೀಮ್‌ನ ಉಕ್ಕಿಗೆ ಸೂಕ್ತ ಕವರ್ ಸಿಕ್ಕಿದೆಯೇ? ಎಂಬುದು ಮೊದಲೇ ಗೊತ್ತಾಗುವುದು ಕಷ್ಟ. ಕ್ಯೂರಿಂಗ್ ಆದಮೇಲೆ ಸೆಂಟ್ರಿಂಗ್ ಅನ್ನು ಸಂಪೂರ್ಣವಾಗಿ ತೆಗೆದ ನಂತರವೇ ನಮಗೆ ಎಲ್ಲೆಲ್ಲಿ ಹುಳುಕಾಗಿದೆ ಹಾಗೂ ಕವರ್ ಕಡಿಮೆ ಆಗಿದೆ ಎಂಬುದು ಗೊತ್ತಾಗುವುದು. ಇಲ್ಲಿಯೂ ಕೂಡ ಮಾಮೂಲಿಯಾಗಿ ಮಾಡುವ ಪ್ಲಾಸ್ಟರ್ ಉಕ್ಕಿಗೆ ಕವರ್ ನೀಡುವವರೆಗೆ ಕಾಯದೆ, ಸೆಂಟ್ರಿಂಗ್ ತೆಗೆದ ಕೂಡಲೆ ಎಲ್ಲೆಲ್ಲಿ ಕಂಬಿ ಕಾಣುತ್ತಿದೆಯೋ ಅಲ್ಲೆಲ್ಲ ಸಿಮೆಂಟ್ ಮರಳಿನ ನುಣುಪಾದ ಮಿಶ್ರಣದಿಂದ ಕಡೆಪಕ್ಷ ಟಕ್ಕು ಹೊಡೆಯುವುದು ಅಂದರೆ ಒಂದು ಪದರ ಗಾರೆಯ ಲೇಪನವನ್ನಾದರೂ ಮಾಡುವುದು ಸೂಕ್ತ ಎನಿಸುತ್ತದೆ.
ಹೆಚ್ಚಿನ ಮಾಹಿತಿಗೆ: 9844132826 – ಆರ್ಕಿಟೆಕ್ಟ್ ಕೆ. ಜಯರಾಮ್