Advertisement

ತುಳು ಅಕಾಡೆಮಿಯಿಂದ ಮನೆ ಮನೆಗೆ ಸ್ಟಿಕ್ಕರ್‌ ಅಭಿಯಾನ

10:25 AM Mar 09, 2020 | mahesh |

ಮಹಾನಗರ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕಾದರೆ ಮೊದಲು ಅದು ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆಯಾಗಬೇಕಿದೆ. ಇದೇ ಕಾರಣಕ್ಕೆ ತುಳುನಾಡಿನ ಮನೆಗಳಲ್ಲಿ ತುಳು ಭಾಷೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಇದೀಗ ಮನೆ ಮನೆಗೆ ಸ್ಟಿಕ್ಕರ್‌ ಅಭಿಯಾನ ಕೈಗೊಳ್ಳಲು ತೀರ್ಮಾನ ಮಾಡಿದೆ.

Advertisement

ಅಕಾಡೆಮಿಯ ಸದಸ್ಯರು ಸಹಿತ ತುಳು ಭಾಷಾಭಿಮಾನಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 5,000 ಮನೆಗಳನ್ನು ತಲುಪುವ ಯೋಜನೆ ಅಕಾಡೆಮಿಯದ್ದಾಗಿದೆ. ಕೇವಲ ಮನೆಗಳಲ್ಲದೆ, ಸಾರ್ವಜನಿಕ ಪ್ರದೇಶಗಳು, ವಾಹನಗಳಲ್ಲಿಯೂ ಈ ಸ್ಟಿಕ್ಕರ್‌ ಅಳವಡಿಸುವಂತೆ ಕೋರಲಾಗುತ್ತದೆ. ಇದರೊಂದಿಗೆ ಸಾರ್ವಜನಿಕರಲ್ಲಿ ತುಳು ಭಾಷಾ ಪ್ರೇಮ ಪಸರಿಸಲು ಅಕಾಡೆಮಿ ತೀರ್ಮಾನ ಮಾಡಿದೆ.

ಈ ಸ್ಟಿಕ್ಕರ್‌ನಲ್ಲಿ “ಯಾನ್‌ ತುಳುವೆ, ಎನ್ನಪ್ಪೆ ತುಳುವಪ್ಪೆ, ತುಳು ಅಧಿಕೃತ ರಾಜ್ಯ ಭಾಷೆ ಆವೊಡು, 8ನೇ ಪರಿಛೇಧೊಗು ಸೇರೊಡು’ ಎಂಬ ಬರಹವನ್ನು ಬರೆಯಲಾಗಿದೆ. ಅಲ್ಲದೆ, ತುಳುನಾಡಿನ ಸಂಸ್ಕೃತಿ ಅನಾವರಣಗೊಂಡಿದೆ. ದೇವಸ್ಥಾನ, ಮಸೀದಿ, ಚರ್ಚ್‌, ಬಸದಿ ಒಳಗೊಂಡಿದ್ದು, ಕಂಬಳ, ಕೋಳಿಅಂಕ, ನಾಗಾರಾಧನೆ, ತುಳುನಾಡಿನ ದೈವಾರಾಧನೆಯ ಚಿತ್ರ ಬಳಸಲಾಗಿದೆ. ಅದೇ ರೀತಿ, ಕೇಸರಿ, ಬಿಳಿ, ಹಸುರು ವೃತ್ತ, ಅದರೊಳಗೆ ಕರ್ನಾಟಕ ಧ್ವಜದ ಬಣ್ಣ, ಅದರೊಳಗೆ, ಕೇಪುಳ ಬಣ್ಣದಲ್ಲಿ ಸೂರ್ಯ-ಚಂದ್ರರ ಚಿತ್ರ ಬರೆಯಲಾಗಿದೆ.

ಉಭಯ ಜಿಲ್ಲೆಗಳಲ್ಲಿ ಬಲೇ ತುಳು ಲಿಪಿ ಕಲ್ಪುಗ
ತುಳು ಭಾಷೆಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಜೈ ತುಳುನಾಡು ಸಂಘಟನೆಯು ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ದ.ಕ. ಮತ್ತು ಉಡುಪಿ ತುಳು ಲಿಪಿ ಕಲಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಸುಮಾರು 400ಕ್ಕೂ ಹೆಚ್ಚು ಮಂದಿಗೆ ತುಳು ಲಿಪಿಯನ್ನು ಕಲಿಸಲಾಗಿತ್ತು ಸುಮಾರು 50ಕ್ಕೂ ಮಿಕ್ಕಿ ತುಳು ಲಿಪಿ ಕಲಿಸುವ ಶಿಕ್ಷಕರು ಇದ್ದಾರೆ.

ಮಂಗಳೂರು, ಕಾರ್ಕಳ, ಉಡುಪಿ ಸಹಿತ ಇನ್ನಿತರ ಕಡೆಗಳಲ್ಲಿ ವಾರದಲ್ಲಿ ಒಂದು ತರಗತಿಯಂತೆ 6 ವಾರಗಳ ತರಗತಿ ಪೂರ್ಣಗೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಸಾರ್ವಜನಿಕರು ಕೂಡ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು ಆರು ವಾರಗಳ ಅನಂತರ 100 ಅಂಕಗಳಿಗೆ ತುಳು ಲಿಪಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಂದಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ. ಕಲಿಕೆ ಉಚಿತವಾಗಿದ್ದು, ಇದೇ ವೇಳೆ ತುಳು ಲಿಪಿಗೆ ಅಭ್ಯಾಸ ಪುಸ್ತಕಗಳನ್ನು ಸಂಘಟನೆ ನೀಡುತ್ತದೆ.

Advertisement

ನಿರೀಕ್ಷೆಗಳು ಹುಸಿಯಾಯ್ತು
“ಬೆಂಗಳೂರಿನಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ತುಳು ಭಾಷೆಯ ಬಗ್ಗೆ ಚರ್ಚೆ ನಡೆದು ರಾಜ್ಯ ಭಾಷೆಯಾಗಲು ಸರಕಾರದ ಮಾನ್ಯತೆ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಮಾತನಾಡಿದ್ದು ಹೊರತುಪಡಿಸಿ ಕರಾವಳಿ ಭಾಗದ ಬೇರ್ಯಾರೂ ಶಾಸಕರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಕೋಟ್ಯಾನ್‌ ಅವರು ಈ ವಿಷಯ ಪ್ರಸ್ತಾವಿಸುವಾಗಲೂ ಅವರ ಮಾತಿಗೆ ಜತೆಯಾಗಲಿಲ್ಲ’ ಎನ್ನುತ್ತಾರೆ ಸಾರ್ವಜನಿಕರು.

ಭಾಷೆಗೆ ಪ್ರೋತ್ಸಾಹ
ಉಭಯ ಜಿಲ್ಲೆಗಳ ಸುಮಾರು 400ಕ್ಕೂ ಮಿಕ್ಕಿ ಮಂದಿಗೆ ಈಗಾಗಲೇ ತುಳು ಲಿಪಿ ಕಲಿಸಲಾಗಿದೆ. ತುಳು ಸಾಹಿತ್ಯ ಅಕಾಡೆಮಿ ಕೂಡ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಲ್ಲಿ ತುಳು ಲಿಪಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ತುಳು ರಾಜ್ಯ ಭಾಷೆಯಾಗಿ ಘೋಷಣೆಯಾಗಬೇಕು. ಬಳಿಕ ತುಳು ಲಿಪಿಯಾಗಿ ಶಾಲೆಗಳಲ್ಲಿ ಕಲಿಯಲು ಅವಕಾಶ ಸಿಗಬೇಕು.
– ಅಶ್ವತ್ಥ್ ತುಳುವೆ, ಜೈ ತುಳುನಾಡು ಕೇಂದ್ರ ಸಂಚಾಲಕ

ಅರಿವು ಮೂಡಿಸಲಾಗುತ್ತಿದೆ
ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ರಾಜ್ಯ ಭಾಷೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಬೇಕೆಂಬ ನಿಟ್ಟಿನಲ್ಲಿ ಸ್ಟಿಕ್ಕರ್‌ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಅಕಾಡೆಮಿಯ ಆಮಂತ್ರಣ ಪತ್ರಿಕೆಯಲ್ಲಿ ಈಗಾಗಲೇ ತುಳು ಜಾಗೃತಿ ಬರಹ ಬರೆಯಲಾಗುತ್ತಿದೆ.
– ದಯಾನಂದ ಕತ್ತಲ್‌ಸಾರ್‌, ರಾಜ್ಯ ತು. ಸಾ. ಅಕಾಡೆಮಿ ಅಧ್ಯಕ್ಷ

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next