Advertisement

ಮತ್ತಷ್ಟು ಉತ್ತೇಜನ

10:03 AM Jan 18, 2018 | |

ಮಹಾನಗರ: ನಗರದಲ್ಲಿ ಹಲವು ವರ್ಷಗಳಿಂದ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೀಚ್‌ ಹೋಮ್‌ಸ್ಟೇ ಪರಿಕಲ್ಪನೆಗೆ ಮತ್ತೆ ಮಹತ್ತ್ವಬಂದಿದ್ದು, ಕರಾವಳಿಗರಲ್ಲಿ ಒಲವು ಹೆಚ್ಚುತ್ತಿದೆ. ಈಗಾಗಲೇ 8 ಹೋಮ್‌ ಸ್ಟೇಗಳು ಅಸ್ತಿತ್ವಕ್ಕೆ ಬಂದಿದ್ದು, ಇನ್ನೂ 10 ಮಂದಿ ಉದ್ಯಮಿಗಳು ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಮಂಗಳೂರು ವಿಶಾಲ ಸಾಗರ ತೀರವನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನಗರದ ಅರ್ಥಿಕ ಅಭಿವೃದ್ಧಿಗೆ ಇದೂ ಒಂದು ಪ್ರಮುಖ ಸಾಧನವಾಗಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು
ತನ್ನ ‘ಪ್ರವಾಸೋದ್ಯಮ ನೀತಿ 2015- 2020’ ಜಾರಿಗೊಳಿಸಿದ್ದು, ಇದರಲ್ಲಿ ವರ್ಗೀಕರಿಸಿದ 18 ವಿಭಾಗಗಳಲ್ಲಿ
ಹೋಮ್‌ ಸ್ಟೇ ಯೋಜನೆಯೂ ಸೇರಿದೆ.

ನಗರಕ್ಕೆ ಹೊಂದಿಕೊಂಡಂತೆ ತಲಪಾಡಿಯಿಂದ ಸಸಿಹಿತ್ಲುವರೆಗೆ ಹಲವೆಡೆ ಸುಂದರ ಬೀಚ್‌ ತಾಣಗಳಿವೆ. ತಲಪಾಡಿ, ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು, ಸುರತ್ಕಲ್‌ ಹಾಗೂ ನಗರದಲ್ಲಿ ಪ್ರಮುಖ ಬೀಚ್‌ ಗಳಿವೆ. ಇವುಗಳಲ್ಲಿ ವಿಹರಿಸಲು ಮತ್ತು ವಿಶ್ರಾಂತಿ ಪಡೆಯಲು ಬಯಲು ಸೀಮೆ, ಉತ್ತರ ಕರ್ನಾಟಕ, ಉತ್ತರ ಭಾರತದಿಂದಲೂ ಸಾಕಷ್ಟು ಮಂದಿ ಭೇಟಿ ಕೊಡುತ್ತಿದ್ದಾರೆ. ಆದರೆ, ಸದ್ಯಕ್ಕೆ ಸಮುದ್ರ ತೀರದಲ್ಲೇ ಉಳಿದುಕೊಳ್ಳಲು ಸೂಕ್ತ ಹೋಮ್‌ ಸ್ಟೇಗಳಿಲ್ಲ. ಈ ಸೌಲಭ್ಯ ಕಲ್ಪಿಸಿದರೆ ಬೀಚ್‌ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬೇಡಿಕೆ ಬರಲಿದೆ. ಸಸಿಹಿತ್ಲು ಬೀಚ್‌ ಈಗಾಗಲೇ ಸರ್ಫಿಂಗ್ ಕ್ರೀಡೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಆರ್ಥಿಕ ಲಾಭ
ಇಲ್ಲಿಯ ಸಾಗರ ತೀರದಲ್ಲಿ ಸಾವಿರಾರು ಮನೆಗಳು, ಬಾಡಿಗೆ ಕಟ್ಟಡಗಳಿವೆ. ಇವುಗಳಲ್ಲಿ ಒಂದಷ್ಟನ್ನು ಹೋಮ್‌ಸ್ಟೇಗಳಾಗಿ ಪರಿವರ್ತಿಸಿದರೆ ಅನುಕೂಲವಾಗಲಿದೆ. 

ದಿನವೊಂದಕ್ಕೆ ಮನೆ ಮಾಲಕನಿಗೆ ಕನಿಷ್ಠ 2 ಸಾವಿರ ರೂ. ಬಾಡಿಗೆ ರೂಪದಲ್ಲಿ ಬರುತ್ತದೆ. ತಿಂಗಳಿಗೆ ಕನಿಷ್ಠ 10 ದಿನ ಪ್ರವಾಸಿಗರು ಬಂದರೂ ತಿಂಗಳಿಗೆ 20 ಸಾವಿರ ರೂ. ಆದಾಯ ಸಿಗಲಿದೆ. ಜತೆಗೆ ಸುಸಜ್ಜಿತ ಹೋಮ್‌ ಸ್ಟೇಗಳಿಂದ ಈ ಪ್ರದೇಶಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎನ್ನುತ್ತಾರೆ ಪ್ರವಾಸೋದ್ಯಮ ಪರಿಣಿತರು.

Advertisement

ಇದೇ ಸಂದರ್ಭದಲ್ಲಿ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು. ನಿರಾಕ್ಷೇಪಣಾ ಪತ್ರಗಳು ತ್ವರಿತ ಗತಿಯಲ್ಲಿ ಲಭಿಸಬೇಕು ಎಂಬುದು ಅರ್ಜಿದಾರರ ಆಗ್ರಹ.

ಮಾರ್ಗಸೂಚಿ
ಹೋಮ್‌ಸ್ಟೇಗೆ ಅನುಮತಿ ಪತ್ರ ಪಡೆಯಲು ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳಿಂದ ನಿರಾಪೇಕ್ಷಣ
ಪತ್ರ ಅವಶ್ಯ. ಮಹಾನಗರ ಪಾಲಿಕೆ ವ್ಯಾಪ್ತಿಯಾದರೆ ಮಂಗಳೂರು ಪೊಲೀಸ್‌ ಆಯಕ್ತರು ಹಾಗೂ ಮಹಾನಗರ ಪಾಲಿಕೆ, ಇದರ ಹೊರಗಿನ ವ್ಯಾಪ್ತಿಯಾದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಗ್ರಾ.ಪಂ., ನಗರ ಸಭೆ, ಪುರಸಭೆಯಿಂದ ನಿರಾಕ್ಷೇಪಣೆ ಪತ್ರ ಪಡೆಯಬೇಕು.ಯಾವುದೇ ಅನಪೇಕ್ಷಿತ ವಿದ್ಯಮಾನ, ವ್ಯವಹಾರಗಳಿಗೆ ಆಸ್ಪದ ನೀಡಬಾರದು. ಪ್ರತಿ ಪ್ರವಾಸಿಗರಿಂದ ಗುರುತುಚೀಟಿ ಪಡೆದೇ ವಸತಿ ಸೌಲಭ್ಯ ನೀಡಬೇಕು. ಹೋಮ್‌ಸ್ಟೇಗೆ ಬರುವ ಅತಿಥಿಗಳ ವಿವರ ಬಗ್ಗೆ ನೋಂದಣಿ ಪುಸ್ತಕ ಹಾಗೂ ಇಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಗಣಕೀಕರಣಗೊಳಿಸಬೇಕು. ಅನುಮತಿಗೆ ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕವೂ ಸಲ್ಲಿಸಬಹುದು. 

ಹೊರ ಜಿಲ್ಲೆಗಳು ಮಾದರಿ
ಪ್ರಾಕೃತಿಕ ಅನನ್ಯತೆಯನ್ನು ಬಳಸಿ ಪ್ರವಾಸೋದ್ಯಮ ಬೆಳೆಸಬಹುದೆಂಬುದಕ್ಕೆ ಕೆಲವು ಜಿಲ್ಲೆಗಳೇ ಸಾಕ್ಷಿ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳಲ್ಲಿ ಹಿಂದಿನಿಂದಲೂ ಹೆಚ್ಚು ಹೋಮ್‌ಸ್ಟೇಗಳು
ಕಾರ್ಯನಿರತವಾಗಿವೆ. ಮಡಿಕೇರಿ- 48, ಸೋಮವಾರಪೇಟೆ-7, ವಿರಾಜಪೇಟೆ- 5, ಶ್ರೀಮಂಗಲ- 3 ಚಿಕ್ಕಮಗಳೂರು- 8, ಹಂಪಿ- 7, ಬೆಂಗಳೂರು-11, ಮೈಸೂರು- 4 ಹೋಮ್‌ಸ್ಟೇಗಳಿವೆ. ಮಂಗಳೂರಿನಲ್ಲಿ 2 ಹೋಮ್‌ಸ್ಟೇಗಳು ಅಧಿಕೃತವಾಗಿ ನೋಂದಣಿಯಾಗಿವೆ.

ಅರ್ಜಿದಾರರ ಸಂಖ್ಯೆ ಹೆಚ್ಚಳ
ಮಂಗಳೂರಿನಲ್ಲಿ ಹೋಮ್‌ಸ್ಟೇ ಸ್ಥಾಪನೆಗೆ ಒಲವು ಹೆಚ್ಚುತ್ತಿದೆ. ಸರಕಾರವು ಹೋಮ್‌ ಸ್ಟೇ ಸ್ಥಾಪನೆ ಬಗ್ಗೆ ನಿಯಮಗಳನ್ನು ಸರಳಗೊಳಿಸಿದೆ. ಈಗಾಗಲೇ 8 ಮಂದಿ ಅನುಮತಿ ಪಡೆದಿದ್ದಾರೆ. ಇನ್ನೂ ಹಲವರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲನೆ ಹಾಗೂ ನಿರಾಕ್ಷೇಪಣೆ ಪತ್ರ ಪಕ್ರಿಯೆ ಮುಗಿದ ಬಳಿಕ ಅನುಮತಿ ನೀಡಲಾಗುವುದು.
ಸುಧೀರ್‌ ಗೌಡ,
 ಜಿಲ್ಲಾ ಕನ್ಸಲ್ಟೆಂಟ್‌,
 ಪ್ರವಾಸೋದ್ಯಮ ಯೋಜನೆ

ಹೋಮ್‌ ಸ್ಟೇ ಪರಿಕಲ್ಪನೆ
ಪ್ರವಾಸೋದ್ಯಮ ಇಲಾಖೆಯು ಅತಿಥಿ ಹೆಸರಿನಲ್ಲಿ ಹೋಮ್‌ಸ್ಟೇ ಯೋಜನೆಯನ್ನು ಜಾರಿಗೆ ತಂದಿದೆ. ಭಾರತೀಯ ಕುಟುಂಬದೊಂದಿಗೆ ವಾಸಿಸುವ ವಾತಾವರಣ, ಸಂಸ್ಕೃತಿ ಹಾಗೂ ಆಯಾ ಪ್ರದೇಶದ ಆಹಾರ ಪದ್ಧತಿಗಳ ಅನುಭವದೊಂದಿಗೆ ಉತ್ತಮ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸುವುದು ಇದರ ಉದ್ದೇಶ. ಗುಣಮಟ್ಟದ ಕುರಿತು ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ. ಇಲಾಖೆ ರೇಟಿಂಗ್‌ (ಶ್ರೇಣಿ) ವ್ಯವಸ್ಥೆ ಜಾರಿಗೆ ತಂದಿದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next