Advertisement
ಜೀವರಕ್ಷಕದಳ ಹಾಗೂ ಸ್ಥಳೀಯ ಮೀನುಗಾರರ ಮತ್ತು ಜೀವರಕ್ಷಕರ ಸಹಕಾರದೊಂದಿಗೆ ಗೃಹರಕ್ಷಕ ಸಿಬಂದಿ ಕಳೆದ ಮಳೆಗಾಲದ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಜೀವರಕ್ಷಕ ಈಜುಗಾರರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಅವರ ಮಾತಿಗೆ ಬೆಲೆ ಕೊಡುವುದಿಲ್ಲ. ಆದರೆ ಗೃಹರಕ್ಷಕ ಸಿಬಂದಿ ಯೂನಿಫಾರ್ಮ್ ನಲ್ಲಿರುವ ಕಾರಣ ಇವರ ಮಾತಿಗೆ ಬೆಲೆ ಕೊಡುತ್ತಾರೆ ಎನ್ನುವ ನಿಟ್ಟಿನಲ್ಲಿ ತಲಾ ಮೂವರಂತೆ ಗೃಹರಕ್ಷಕ ಸಿಬಂದಿಯನ್ನು ನೇಮಕ ಮಾಡಿದ್ದು, ಸಮುದ್ರ ತಟದಲ್ಲಿ ಕಾರ್ಯಾರಂಭ ಮಾಡಿದ್ದಾರೆ.
ಸಮುದ್ರ ಕಿನಾರೆಯಲ್ಲಿ ಸಮುದ್ರದ ಬದಿಯಿಂದ 50 ಮೀ. ದೂರದಲ್ಲಿ ಅಪಾಯಕಾರಿ ವಲಯ ಎಂದು ಗುರುತಿಸಿ ನಾಮಫಲಕವನ್ನು ಅಳವಡಿಸಲಾಗಿದೆ. ಇದರೊಂದಿಗೆ ಹ್ಯಾಂಡ್ ಮೈಕ್‌ಗಳನ್ನು ನೀಡಿದ್ದು, ಜನರಿಗೆ ಎಚ್ಚರಿಕೆಯನ್ನು ಈ ಮೈಕ್ ಮೂಲಕ ನೀಡಲು ಅವಕಾಶವಿದೆ. ಮಳೆಗಾಲದಲ್ಲಿ ಉಳ್ಳಾಲ ಮೊಗವೀರಪಟ್ಣ ಬೀಚ್ ಅತ್ಯಂತ ಅಪಾಯಕಾರಿ. ಒಂದೆಡೆ ಕಡಲ್ಕೊರೆತಕ್ಕೆ ಹಾಕಿರುವ ಕಲ್ಲುಗಳ ರಾಶಿ, ಎತ್ತರದಲ್ಲಿ ಚಿಮ್ಮುವ ಸಮುದ್ರದ ಅಲೆಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಕಲ್ಲುಗಳ ರಾಶಿ ಅತ್ಯಂತ ಅಪಾಯಕಾರಿಯಾಗಿದ್ದು, ಪ್ರತೀ ವರ್ಷ ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಇಲ್ಲಿ ಸಮುದ್ರ ಪಾಲಾಗುತ್ತಿರುವುದು ಸಾಮಾನ್ಯವಾಗಿದೆ. ಪಕ್ಷುಬ್ಧ ಸಮುದ್ರದಲ್ಲಿ ಜೀವ ರಕ್ಷಕ ಈಜುಗಾರರು ಸಮುದ್ರಕ್ಕೆ ಇಳಿಯುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಈ ನಿಟ್ಟಿನಲ್ಲಿ ಸಮುದ್ರದಲ್ಲಿ ಆಟವಾಡುವ ಬದಲು ಎಚ್ಚರಿಕೆಯಿಂದ ದೂರದಲ್ಲೇ ನೋಡಬೇಕು. ಎಲ್ಲೆಲ್ಲಿ ಗೃಹರಕ್ಷಕ ದಳ ?
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶದಂತೆ ಜಿಲ್ಲೆಯ ಕರಾವಳಿಯ ಎಂಟು ಸಮುದ್ರ ಕಿನಾರೆಗಳಲ್ಲಿ 24 ಗೃಹರಕ್ಷಕ ಸಿಬಂದಿ ಬೀಚ್ ಗಾರ್ಡ್‌ಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ 1, ತಣ್ಣೀರುಬಾವಿ 2, ಪಣಂಬೂರು, ಸಸಿಹಿತ್ಲು, ಸುರತ್ಕಲ್, ಮುಕ್ಕ ಭಾಗಗಳಲ್ಲಿ ತಲಾ ಮೂರರಂತೆ ಗೃಹರಕ್ಷಕ ಸಿಬಂದಿ ಇದ್ದಾರೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳವನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಗಾರ್ಡ್‌ಗಳು ಮಾಡುತ್ತಿದ್ದಾರೆ.
Related Articles
ಜೀವರಕ್ಷಕ ಹಾಗೂ ಗೃಹರಕ್ಷಕ ಸಿಬಂದಿ ಕೊಡು- ಕೊಳ್ಳುವಿಕೆ ರೀತಿಯಲ್ಲಿ ಕಾರ್ಯಾಚರಿಸುತ್ತಾರೆ. ಗಾರ್ಡ್‌ಗಳು ಎಲ್ಲ ತರಬೇತಿಯನ್ನು ಪಡೆದವರಾದರೂ, ರಭಸದಿಂದ ಕೂಡಿದ ಸಮುದ್ರದಲ್ಲಿ ಈಜುವುದು ಕಷ್ಟಕರ. ಅದಕ್ಕಾಗಿ ಸ್ಥಳೀಯ ಜೀವರಕ್ಷಕ ದಳದ ಸಹಾಯದ ಜತೆಗೆ ಕಾರ್ಯಾಚರಣೆ ನಡೆಯುತ್ತಿದೆ.
– ಡಾ| ಮುರಲೀ ಮೋಹನ್ ಚೂಂತಾರು, ಕಮಾಂಡೆಂಟ್, ಜಿಲ್ಲಾ ಗೃಹರಕ್ಷದಳ
Advertisement
ಸಿಬಂದಿಗಳಿದ್ದರೆ ಸಹಕಾರಮೀನುಗಾರಿಕೆಗೆ ರಜೆಯಾಗಿರುವುದರಿಂದ ಹೆಚ್ಚಿನ ಸಮಯವನ್ನು ನಾವು ಉಳ್ಳಾಲ ಬೀಚ್ ನಲ್ಲಿ ಕಳೆಯುವುದರಿಂದ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತೇವೆ. ಆದರೆ ಕೆಲವರು ನಮ್ಮ ಮೇಲೆ ರೇಗುತ್ತಾರೆ ಇಂತಹ ಸಂದರ್ಭದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳದ ಸಿಬಂದಿಗಳಿದ್ದರೆ ನಮಗೆ ಸಹಕಾರಿಯಾಗುತ್ತದೆ.
– ವಾಸು ಟಾಗೋರ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯ