Advertisement

ಮನೆ ಛಾವಣಿ ಕುಸಿತ: ಮಹಿಳೆ –ಮಗು ಅಪಾಯದಿಂದ ಪಾರು

06:00 AM Jun 17, 2018 | |

ಮಂಗಳೂರು: ನಗರದ ಬೋಳಾರದಲ್ಲಿ ಶನಿವಾರ ಮಧ್ಯಾಹ್ನ ಹಳೆಯ ಮನೆಯೊಂದರ ಛಾವಣಿ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಮಹಿಳೆ ಮತ್ತು ಮಗು ಅಪಾಯದಿಂದ ಪಾರಾಗಿದ್ದಾರೆ. 

Advertisement

ಬೋಳಾರದ ನಾಗಪ್ಪ ಕಂಪೌಂಡ್‌ನ‌ ಬಟ್ರಿ ಗಾರ್ಡನ್‌ನಲ್ಲಿರುವ ಈ ಹಂಚಿನ ಮನೆ ಮಣ್ಣಿನ ಗೋಡೆಯಿಂದ ನಿರ್ಮಾಣಗೊಂಡಿದ್ದು, ಸುಮಾರು ನೂರು ವರ್ಷಗಳಷ್ಟು ಹಳೆಯ ಕಟ್ಟಡ ಎನ್ನಲಾಗಿದೆ. ಇದರಲ್ಲಿ ಕಳೆದ 78 ವರ್ಷಗಳಿಂದ ನಾರಾಯಣ ಶೆಟ್ಟಿ, ಪ್ರಮೀಳಾ ಮತ್ತು ಹರೀಶ್‌ ಎಂಬ 3 ಕುಟುಂಬಗಳು ಬಾಡಿಗೆಗೆ ವಾಸವಾಗಿದ್ದವು.  ದೇವಕಿ ಎಂಬವರು ಈ ಮನೆಯ ಮಾಲಕರು ಎಂಬುದಾಗಿ ಬಾಡಿಗೆ ಮನೆಯಲ್ಲಿದ್ದವರು ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಮನೆಯ ಛಾವಣಿ ಸಂಪೂರ್ಣವಾಗಿ ಕುಸಿದ ಕಾರಣ ಇದರಲ್ಲಿ ವಾಸಿಸುತ್ತಿದ್ದ ಮೂರೂ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಮನೆಯ ಕಟ್ಟಡ ಹಾಗೂ ಛಾವಣಿ ಶಿಥಿಲಗೊಂಡಿದ್ದು, ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಛಾವಣಿಯ ಒಂದು ಭಾಗದಲ್ಲಿ ಮರದ ರೀಪು ಮುರಿದು ಹಂಚುಗಳು ಕೆಳಗೆ ಬಿದ್ದವು. ಈ ಸಂದರ್ಭದಲ್ಲಿ ನಾರಾಯಣ ಶೆಟ್ಟಿ ಅವರ ಪತ್ನಿ ಮತ್ತು ಮಗು ಚಾವಡಿಯಲ್ಲಿ ಊಟ ಮಾಡುತ್ತಿದ್ದು, ಶಬ್ದ ಕೇಳಿ ಓಡಿ ಹೊರಗೆ ಬಂದಿದ್ದರು. ಹಾಗಾಗಿ ಅಪಾಯದಿಂದ ಪಾರಾದರು. ಎರಡು ಮನೆಗಳ ಭಾಗದಲ್ಲಿರುವ ಛಾವಣಿ ಸಂಪೂರ್ಣ ಉರುಳಿದೆ. 

ಘಟನೆಯ ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಮೇಯರ್‌ ಭಾಸ್ಕರ್‌ ಕೆ., ಕಾರ್ಪೊರೇಟರ್‌ ಕವಿತಾ ವಾಸು, ಪಾಲಿಕೆ ಕಮಿಷನರ್‌ ಮೊಹಮದ್‌ ನಝೀರ್‌, ಪಾಂಡೇಶ್ವರ ಪೊಲೀಸರು ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿದರು. 

ಸಂಜೆ ವೇಳೆಗೆ ಮತ್ತೆ ಮೇಯರ್‌, ಕಮಿಷನರ್‌, ಶಾಸಕ ವೇದವ್ಯಾಸ ಕಾಮತ್‌, ಕಾರ್ಪೊರೇಟರ್‌, ತಹಸೀಲ್ದಾರ್‌, ಪಾಲಿಕೆಯ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಈ ಮನೆಯಲ್ಲಿದ್ದ 3 ಕುಟುಂಬಗಳಿಗೆ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆಗೆ ನೆರವಾದರು. 

Advertisement

ಮೂರೂ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ಪರಿಹಾರಕ್ಕೆ ವ್ಯವಸ್ಥೆ ಮಾಡುವುದಾಗಿ ಮೇಯರ್‌ ಭಾಸ್ಕರ್‌ ಕೆ. ಅವರು ಭರವಸೆ ನೀಡಿದರು. ಕುಟುಂಬಗಳ ಪೈಕಿ ಒಬ್ಬರು ತಾತ್ಕಾಲಿಕವಾಗಿ ಸಂಬಂಧಿಕರ ಮನೆಗೆ ತೆರಳಿದ್ದು, ಉಳಿದ  ಕುಟುಂಬಗಳವರು ಬೇರೆ ಕಡೆ ಬಾಡಿಗೆ ಮನೆಗೆ ತೆರಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next