Advertisement

Hair Loss: ಕೂದಲು ಉದುರುವಿಕೆಯ ಸಮಸ್ಯೆಗೆ ಕಾರಣಗಳೇನು? ಮನೆ ಪರಿಹಾರ ಏನು? ಇಲ್ಲಿದೆ ಉತ್ತರ

06:36 PM Aug 24, 2024 | Team Udayavani |

ಮನುಷ್ಯನ ಸೌಂದರ್ಯವನ್ನು ಹೆಚ್ಚಿಸುವ ಒಂದು ಭಾಗ ಕೂದಲು. ಅದನ್ನು ಬೆಳೆಸಲು, ಗಟ್ಟಿಯಾಗಿ ಇಟ್ಟುಕೊಳ್ಳಲು ಪ್ರತಿದಿನ ಎಣ್ಣೆ, ಶ್ಯಾಂಪೂ ಇತ್ಯಾದಿಗಳನ್ನು ಬಳಸುತ್ತೇವೆ. ಆದರೆ ಅತಿಯಾದ ಆಸೆಯಿಂದ ತಲೆಗೂದಲಿಗೆ ಏನೇನೋ ಹಚ್ಚಿ, ಅಥವಾ ಏನನ್ನೂ ಹಚ್ಚದೆಯೂ ಕೂದಲನ್ನು ಹಾಳು ಮಾಡಿಕೊಳ್ಳುವವರೂ ಇದ್ದಾರೆ. ವಯಸ್ಸಾಗುತ್ತಾ ಹೋದ ಹಾಗೆ ಕೂದಲಿನ ಆಯಸ್ಸು ಕಡಿಮೆಯಾಗುತ್ತದೆ ಎಂಬುದು ಗೊತ್ತಿರುವ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ 18-20 ರ ಹರೆಯದ ಯುವಕ ಯುವತಿಯರೂ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆ ಯಾಕೆ ಬರುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?

Advertisement

ಮೇಲ್‌ ಪ್ಯಾಟರ್ನ್‌ ಬಾಲ್ಡ್‌ನೆಸ್‌

ಹುಡುಗರಲ್ಲಿ ಕೂದಲು ಉದುರುವಿಕೆಯನ್ನು ʻಮೇಲ್‌ ಪ್ಯಾಟರ್ನ್‌ ಬಾಲ್ಡ್‌ನೆಸ್‌ʼ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಹುಡುಗರಿಗೆ 20-25 ವಯಸ್ಸಿನ ನಂತರ ಕೂದಲಿನ ಬೇರು ಸಡಿಲಗೊಳ್ಳಲು ಶುರುವಾಗುತ್ತದೆ. ಇದಕ್ಕೆ ಕಾರಣ ʻಡಿ.ಎಚ್‌.ಟಿʼ ಅನ್ನುವ ಹಾರ್ಮೋನ್. ʻಡಿ.ಎಚ್.ಟಿʼ ಎಂದರೆ ʼಡೈ ಹೈಡ್ರೋ ಟೆಸ್ಟೋಸ್ಟೆರಾನ್ʼ. ʻಟೆಸ್ಟೋಸ್ಟೆರಾನ್ʼ ಹಾರ್ಮೋನ್ ಪುರುಷರ ಲಿಂಗವನ್ನು ಪ್ರತಿನಿಧಿಸುವ ಹಾರ್ಮೋನ್‌ ಆಗಿದೆ. ಇದು ಹುಡುಗರ ವ್ಯಕ್ತಿತ್ವ ಮತ್ತು ದೇಹದ ಬಲಶಾಲಿತನಕ್ಕೂ ಕಾರಣವಾಗುತ್ತದೆ. ಅಕಸ್ಮಾತ್‌ ಈ ಹಾರ್ಮೋನ್‌ ಹೆಚ್ಚಾದರೆ ಅದು ಡಿ.ಎಚ್.ಟಿಯಾಗಿ ಪರಿವರ್ತನೆಗೊಳ್ಳುತ್ತದೆ. ಡಿ.ಎಚ್.ಟಿ ಹೆಚ್ಚಾಗಲು ಬಹಳಷ್ಟು ಕಾರಣಗಳಿವೆ. ಅನುವಂಶಿಕವಾಗಿಯೂ ಕೂದಲು ಉದುರುತ್ತದೆ.  ನಮ್ಮ ತಂದೆ- ತಾತ 20- 25 ನೇ ವಯಸ್ಸಿನಲ್ಲಿ ಕೂದಲನ್ನು ಕಳೆದುಕೊಂಡಿದ್ದರೆ ನಾವು ಕೂಡ ಆ ವಯಸ್ಸಿಗೆ ಕೂದಲು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಹುಡುಗರು 7 ಗಂಟೆಗಿಂತಲೂ ಕಡಿಮೆ ಹೊತ್ತು ನಿದ್ರೆ ಮಾಡಿದರೆ, ಅದು ಅವರ ಟೆಸ್ಟೋಸ್ಟೆರಾನ್ ಲೆವೆಲ್‌ ಮೇಲೆ ಹೊಡೆತ ಬೀಳುತ್ತದೆ. ಇದು ಕೂದಲಿನ ಬೇರುಗಳನ್ನು ಬ್ಲಾಕ್‌ ಮಾಡಿ ಬೋಳುತನಕ್ಕೆ ಕಾರಣವಾಗುತ್ತದೆ. ಡಿಎಚ್ ಟಿ ದೇಹದಲ್ಲಿ ಹೆಚ್ಚಾದರೆ “ಆಂಡ್ರೋಜನಿಟಿಕ್ ಅಲೋಪೇಶಿಯಾ” ಎಂಬ ಕಾಯಿಲೆಗೆ ಒಳಗಾಗುತ್ತೇವೆ. ಇದೂ ಬೋಳುತನಕ್ಕೆ ಕಾರಣವಾಗುತ್ತದೆ.

ಕೂದಲು ಉದುರುವಿಕೆಗೆ ಕಾರಣಗಳು

Advertisement

ತಿನ್ನುವ ಆಹಾರವೂ ಕೆಲವೊಮ್ಮೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಾವು ತಿನ್ನುವ ಆಹಾರದಲ್ಲಿ ಕೂದಲಿಗೆ ಬೇಕಾದ ವಿಟಮಿನ್ಸ್‌ ಗಳಿರದಿದ್ದರೆ, ಆಗ ಕೂದಲು ಸಡಿಲಗೊಂಡು, ಉದುರುವ ಸಾಧ್ಯತೆ ಇರುತ್ತದೆ. ಕೂದಲನ್ನು ಕಾಪಾಡಿಕೊಳ್ಳಬೇಕಂದರೆ ಅದಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಸೇವಿಸುವುದು ಆವಶ್ಯವಾಗುತ್ತದೆ. ವಿಟಮಿನ್ಸ್‌ ಹೆಚ್ಚಿರುವ ಮೊಟ್ಟೆ, ಸೊಪ್ಪು ಮುಂತಾದ ಆಹಾರವನ್ನು ಸೇವಿಸಲೇಬೇಕು. ಹೆಚ್ಚಾಗಿ ನಮ್ಮ ಭಾರತ ದೇಶದಲ್ಲಿ ವಯಸ್ಸಾಗುತ್ತಾ ಹೋದ ಹಾಗೆ ಕೂದಲು ಉದುರಿ ಬೋಳಾಗುವುದು, ನಮ್ಮ ಆಹಾರ ಪದ್ಧತಿಯಿಂದಲೇ ಎಂದು ಸಂಶೋಧಕರು ಹೇಳುತ್ತಾರೆ. ಪ್ರೋಟೀನ್ ಹೆಚ್ಚಿರುವ ಆಹಾರವನ್ನು ನಮ್ಮ ದೇಶದಲ್ಲಿ ಬಹಳ ಕಡಿಮೆಯಾಗಿ ಸೇವಿಸುತ್ತಾರೆ.

ಕೂದಲನ್ನು ಕೇರ್‌ ಮಾಡುವ ದೃಷ್ಟಿಯಲ್ಲಿ ಶ್ಯಾಂಪುಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನವುಗಳಲ್ಲಿ ಸೋಡಿಯಮ್‌ ಲೋರಲ್‌ ಸಲ್ಫೇಟ್‌ ಎನ್ನುವ ರಾಸಾಯನಿಕವನ್ನು ಬಳಕೆ ಮಾಡುತ್ತಾರೆ. ಇದು ಕೂದಲಿಗೆ ಹಾನಿಕಾರಕ. ಈ ರಾಸಾಯನಿಕವು ಕೂದಲಿನಲ್ಲೇ ನೈಸರ್ಗಿಕವಾಗಿ ಇರುವಂತಹ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತದೆ. ಇದರಿಂದ ಕೂದಲು ಡಲ್ ಮತ್ತು ರಫ್ ಆಗಿ ಹೋಗಿಬಿಡುತ್ತದೆ. ಸೋಡಿಯಮ್‌ ಲೋರಲ್‌ ಸಲ್ಫೇಟ್‌ ಇರದ ಶ್ಯಾಂಪುಗಳನ್ನು ಬಳಸಿದರೆ ಕೂದಲನ್ನು ಬಹಳಷ್ಟು ವರ್ಷಗಳಕಾಲ ಕಾಪಾಡಿಕೊಳ್ಳಬಹುದು.

ಮಾನಸಿಕ ಒತ್ತಡವೂ ಬಲುದೊಡ್ಡ ಕಾರಣ

ಇವೆಲ್ಲವುಗಳ ಜೊತೆಗೆ, ನಾವು ನಮ್ಮ ಮೇಲೆ ಹೇರಿಕೊಳ್ಳುವ ಒತ್ತಡಗಳಿಂದಲೂ ಕೂದಲು ಉದುರುತ್ತದೆ. ಈ ಒತ್ತಡ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಅದು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಆಗಿರಬಹುದು. ನಮ್ಮ ದೇಹದಲ್ಲಿ ಯಾವುದಾದರೂ ಭಾಗಕ್ಕೆ ಬಹಳ ಪೆಟ್ಟಾದರೆ ಅಥವಾ ಗಾಯಗೊಂಡರೆ ನಮಗೆ ಅದರ ನೋವಿನಿಂದ ಒತ್ತಡ ಆಗುವುದು ಸಹಜ. ಅದಕ್ಕೆ ಮದ್ದಿದೆ. ಆದರೆ ಮನಸ್ಸಿನಿಂದ ಬರುವಂತಹ ಒತ್ತಡ ನಿಜಕ್ಕೂ ಹಾನಿಕಾರಕ. ಸಾಮಾನ್ಯವಾಗಿ ಮಾನಸಿಕ ಒತ್ತಡಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಪ್ರೇಮ ವೈಫಲ್ಯ, ಸೋಲು, ಅವಮಾನ, ಕುಟುಂಬದ ಒತ್ತದ ಇವೆಲ್ಲವೂ ಮಾನಸಿಕ ಒತ್ತಡಗಳನ್ನು ತಂದುಕೊಡುತ್ತವೆ.

ಇಂತಹ ಒತ್ತಡಗಳಿಂದಾಗಿ ನಮ್ಮ ಕೂದಲು ಉದುರುತ್ತಿದೆ ಎಂಬುದು ಹೇಗೆ ತಿಳಿಯುವುದು? ಸ್ನಾನ ಮಾಡುವಾಗ ತಲೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ನಾವು ಕೂದಲಿಗೆ ಕೈ ಹಾಕಿದಾಗ ನಮ್ಮ ಕೈಗೆ ಒಂದಿಷ್ಟು ಕೂದಲು ಬಹಳ ಸುಲಭದಲ್ಲಿ ಬಂದರೆ ಅದು ಮಾನಸಿಕ ಒತ್ತಡದಿಂದ ಬಂದಿದೆ ಎಂದು ಅರ್ಥ. ಪರಿಹಾರ ಏನು ಎಂದರೆ, ಆರೋಗ್ಯಕರ ಮನಸ್ಸನ್ನು ಕಾಪಾಡಿಕೊಳ್ಳುವುದು. ಯಾವುದೇ ಒತ್ತಡವನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ತಾಳ್ಮೆಯಿಂದ ನಿಭಾಯಿಸುವುದು. ಉತ್ತಮ ಆರೋಗ್ಯವಿದ್ದರೆ, ಖಂಡಿತ ಪುನಃ ಕೂದಲು ಹುಟ್ಟಿಕೊಳ್ಳಲು ಶುರುವಾಗುತ್ತದೆ.

ಮನೆಯಲ್ಲೇ ಮಾಡಬಹುದಾದ ಪರಿಹಾರಗಳು

ಆದಷ್ಟು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಕೂದಲಿಗೆ ಹಚ್ಚುವಂತಹ ಮದ್ದನ್ನು ಮನೆಯಲ್ಲೇ ತಯಾರು ಮಾಡಿದರೆ ಉತ್ತಮ. ಕೂದಲಿಗೆ ಬೇಕಾದ ವಿಟಮಿನ್‌ ಳಾದ ಇ ಮತ್ತು ಜಿಂಕ್ ವಿಟಮಿನ್ ಬಿ12 ಇರುವಂತಹ ಆಹಾರಗಳನ್ನು ಸೇವಿಸಬೇಕು. ಮೊಟ್ಟೆಯನ್ನು ತಲೆಕೂದಲಿಗೆ ಹಚ್ಚಿ ಒಳ್ಳೆಯ ಫಲಿತಾಂಶ ಪಡೆಯಬಹುದು. ಮೊಟ್ಟೆಯಲ್ಲಿ ಪ್ರಮುಖ ಪ್ರೊಟೀನ್ ಗಳು ಹಾಗೂ ಫಾಸ್ಫರಸ್ ಸಲ್ಫರ್ ಮತ್ತು ಜಿಂಕ್‌ನಂತಹ ಅಂಶಗಳು ಒಳಗೊಂಡಿರುತ್ತವೆ. ಮೊಟ್ಟೆಗೆ ಒಂದು ಚಮಚ ಜೇನುತುಪ್ಪ ಹಾಗೂ ಆಲಿವ್ ಆಯಿಲ್ ಜೊತೆಗೆ ಮಿಕ್ಸ್ ಮಾಡಿ, ಆ ಮಿಶ್ರಿತವಾದ ಅಂಶವನ್ನು ಸಣ್ಣ ಬ್ರಷ್ ನ ಮೂಲಕ ಕೂದಲ ಬೇರಿನಿಂದ ತುದಿಯ ತನಕ ಹಚ್ಚಿರಿ. ನಂತರ 25 ನಿಮಿಷ ಬಿಟ್ಟು ಸ್ವಲ್ಪ ಶಾಂಪೂ ಬಳಸಿ, ತಣ್ಣೀರಿನಲ್ಲಿ ಸ್ನಾನ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಮಾಡಿದರೆ ಸಾಕು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವರಿಗೆ ಮೊಟ್ಟೆಯ ವಾಸನೆ ಹಿಡಿಸದೆ ಇರಬಹುದು ಹಾಗಿದ್ದಲ್ಲಿ ಮೆಂತೆಯನ್ನು ಬಳಸಿ.

ಮೆಂತೆ ಒಂದು ಪ್ರೊಟೀನ್‌ಯುಕ್ತ ಆಹಾರವಾಗಿದೆ. ಇದು ಹಾನಿಗೊಳಗಾದ ಕೂದಲಿನ ಬೇರುಗಳನ್ನು ಸದೃಢಗೊಳಿಸುತ್ತದೆ. ಒಂದು ಮುಷ್ಟಿಯಷ್ಟು ಅಥವಾ ಎರಡು ಮುಷ್ಟಿಯಷ್ಟು ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ಸೋಸಿ ರುಬ್ಬಿಕೊಳ್ಳಿ. ನಂತರ ಆದಂತಹ ಪೇಸ್ಟನ್ನು ನೆತ್ತಿಗೆ ಹಚ್ಚಿಕೊಳ್ಳಿ. ಪೇಸ್ಟ್ ಸ್ವಲ್ಪ ಒಣಗಿದ ಮೇಲೆ ತಣ್ಣೀರಿನಲ್ಲಿ ಸ್ನಾನ ಮಾಡಿ. ಈ ಮನೆ ಮದ್ದನ್ನು ಕೂಡ ವಾರದಲ್ಲಿ ಒಮ್ಮೆ ಪ್ರಯತ್ನಿಸಿದರೂ, ಕೂದಲಿನ ಆರೋಗ್ಯವು ಉಳಿದುಕೊಳ್ಳುತ್ತದೆ.

ಇದೇ ರೀತಿ ಈರುಳ್ಳಿಯ ರಸವನ್ನು ಕೂಡ ತಲೆಗೆ ಹಚ್ಚುವುದರಿಂದ ಕೂದಲ ಬೇರುಗಳು ಗಟ್ಟಿಗೊಂಡು ಬಹಳಷ್ಟು ವರ್ಷಗಳ ಕಾಲ ಸದೃಢವಾಗಿ ಉಳಿಯುತ್ತದೆ. ಈ ಮನೆ ಮದ್ದುಗಳನ್ನು ಪ್ರಯತ್ನಿಸುವ ವೇಳೆ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಪ್ರಯೋಗದಿಂದ ನಮಗೆ ಫಲಿತಾಂಶ ಸಿಗಬೇಕೆಂದರೆ ನಾವು ತಾಳ್ಮೆಯಿಂದ ಕಾಯಬೇಕಾಗುತ್ತದೆ. ಒಂದು ಬಾರಿ ಹಚ್ಚಿ, ಕೆಲವೇ ದಿನಗಳಲ್ಲಿ ಫಲಿತಾಂಶ ನಿರೀಕ್ಷಿಸಬಾರದು. ಫಲಿತಾಂಶ ಬರಲಿಲ್ಲ ಎಂದು ಒತ್ತಡಕ್ಕೆ ಒಳಗಾಗಬಾರದು. ಹಾಗಾಗಿ ಏನೂ ತಲೆಕೆಡಿಸಿಕೊಳ್ಳದೆ ಖುಷಿಯಿಂದ ಇರುವುದು ಒಂದೇ ಕೂದಲಿನ ಆರೋಗ್ಯಕ್ಕೆ ನೀಡಬೇಕಾದ ಮುಖ್ಯ ಮದ್ದು.

ಯಾವುದೇ ಮಾತ್ರೆಗಳನ್ನು ಅಥವಾ ಸೇರಂಗಳನ್ನು ತಲೆಗೆ ಹಚ್ಚುವ ಮೊದಲು ಕೂದಲಿನ ವೈದ್ಯರ ಬಳಿ ವಿಚಾರಿಸಿಕೊಂಡು ಪ್ರಯತ್ನಿಸಿ.

ತರುಣ್‌ ಶರಣ್‌

Advertisement

Udayavani is now on Telegram. Click here to join our channel and stay updated with the latest news.

Next