Advertisement

ಹೊರರಾಜ್ಯದವರಿಗೆ ಹೋಂ ಕ್ವಾರಂಟೈನ್‌: ಶ್ರೀರಾಮುಲು

09:39 AM Jun 10, 2020 | mahesh |

ಉಡುಪಿ: ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರನ್ನು ನಿರ್ದಿಷ್ಟ ಮನೆಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಿ ಆ ಮನೆಯನ್ನು ಸೀಲ್‌ಡೌನ್‌ ಮಾಡಲಾಗುವುದು. ಹೊರ ದೇಶದಿಂದ ಬಂದವರಿಗೆ ಮಾತ್ರ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್‌ ವಿಧಿಸಲಾಗುವುದು. ಇದು ಮಂಗಳ ವಾರದಿಂದಲೇ ರಾಜ್ಯಾದ್ಯಂತ ಅನ್ವಯ ಎಂದು ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.

Advertisement

ಕಾರ್ಯಪಡೆ ನಿಗಾ
ಕ್ವಾರಂಟೈನ್‌ ಅವಧಿಯಲ್ಲಿ ಕಾರ್ಯಪಡೆಯು ಅವರ ನಿಗಾ ಇಟ್ಟಿರುತ್ತದೆ. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು. ಮನೆಯಲ್ಲಿರಲು ತೊಂದರೆ ಆಗಿದ್ದರೆ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು. ಇನ್ನು ಮುಂದೆ ರೋಗ ಲಕ್ಷಣ ಇರುವವರ ಮಾದರಿಯನ್ನಷ್ಟೇ ಸಂಗ್ರ ಹಿಸಲಾಗುವುದು. ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯವರು ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹಣ ಪಡೆದುಕೊಂಡರೆ ಪ್ರಕರಣ ದಾಖಲಿ ಸಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್‌ ಬಂದವರಲ್ಲಿ ಒಬ್ಬರಿಗೆ ಮಾತ್ರ ಐಸಿಯು ವಿನಲ್ಲಿ ಚಿಕಿತ್ಸೆ ನೀಡಲಾಗಿದೆ; ವೆಂಟಿಲೇಟರ್‌ ಬಳಸಿಲ್ಲ ಎಂದು ಹೇಳಿದರು.

ಸಿಬಂದಿ ಮಂಜೂರು
ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜಿಲ್ಲಾಸ್ಪತ್ರೆ ಮಾದರಿಯಲ್ಲಿ ತಜ್ಞ ವೈದ್ಯರು, ಸಿಬಂದಿಯನ್ನು ಒದಗಿಸಲಾಗುವುದು. ಜಿಲ್ಲಾಸ್ಪತ್ರೆಗೆ 250 ಬೆಡ್‌ ಮಂಜೂರುಗೊಳಿಸಲು ಶಾಸಕ ಕೆ. ರಘುಪತಿ ಭಟ್‌ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ. ಕೊರೊನಾ ಗಡಿಬಿಡಿ ಮುಗಿದ ಅನಂತರ ಅದರ ಬಗ್ಗೆ ಗಮನ ಹರಿಸಲಾಗುವುದು. ಹೊಸ ತಾಲೂಕುಗಳಿಗೆ ತಾಲೂಕು ಆಸ್ಪತ್ರೆ ಒದಗಿಸಲೂ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ. ಎನ್‌ಆರ್‌ಎಚ್‌ಎಂ ಸಿಬಂದಿಯ ಬೇಡಿಕೆ ಈಡೇರಿಸಲು ಗಮನ ಹರಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.

ಮಹಿಳೆ, ಮಕ್ಕಳ ಆಸ್ಪತ್ರೆ ಚರ್ಚಿಸಿ ತೀರ್ಮಾನ
ಉಡುಪಿಯ ಬಿಆರ್‌ಎಸ್‌ ಸಂಸ್ಥೆಯವರು ಮಹಿಳೆಯರ-ಮಕ್ಕಳ ಆಸ್ಪತ್ರೆಗೆ 6 ವೈದ್ಯಕೀಯ ತಜ್ಞರನ್ನು ಕೊಡಲು ಮನವಿ ಮಾಡಿದಾಗ ಕೊಟ್ಟಿ ದ್ದೇವೆ. ಅವರ ಇತರ ಬೇಡಿಕೆಗಳೂ ಇವೆ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್‌ಪಿ ವಿಷ್ಣುವರ್ಧನ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next