Advertisement

ಹೋಂ ಕ್ವಾರಂಟೈನ್‌ 14 ದಿನ ವಿಸ್ತರಣೆ

11:37 AM Mar 30, 2020 | Suhan S |

ಕಲಬುರಗಿ: ಕೋವಿಡ್ 19 ಸೋಂಕು ನಿಯಂತ್ರಣ ನಿಟ್ಟಿನಲ್ಲಿ ವಿದೇಶದಿಂದ ಜಿಲ್ಲೆಗೆ ಮರಳಿದವರು ಮತ್ತು ಶಂಕಿತ ವ್ಯಕ್ತಿಗಳನ್ನು ಮತ್ತೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲೇ ಇರಿಸಿ ನಿಗಾ ವಹಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ನಿಯಂತ್ರಿಸಲು ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ತುಮಕೂರಿನಲ್ಲಿ 15ನೇ ದಿನಕ್ಕೆ ಕೊರೊನಾ ಸೋಂಕು ಪತ್ತೆಯಾಗಿದೆ. ಆದ್ದರಿಂದ ಈಗಾಗಲೇ 14 ದಿನ ಹೋಂ ಕ್ವಾರಂಟೈನ್‌ ಮುಗಿದವರೆಗೆ ಮತ್ತೆ 14 ದಿನ ಮನೆಯಲ್ಲೇ ಇರಿಸಿ ನಿಗಾವಣೆ ಮಾಡಬೇಕು. ಇಂತಹ ವ್ಯಕ್ತಿಗಳ ಮನೆಗೆ “ಹೋಂ ಕ್ವಾರಂಟೈನ್‌’ ಚೀಟಿ ಅಂಟಿಸಬೇಕು ಎಂದು ಹೇಳಿದರು.

ಜಿಲ್ಲೆಗೆ ಬೇಕಾಗಿರುವ ವೈದ್ಯರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು, ಮೆಡಿಸಿನ್‌ಗಳ ಬಗ್ಗೆ ಪಟ್ಟಿ ಮಾಡಬೇಕು. ಬೆಂಗಳೂರಿನಲ್ಲಿ ಸ್ಥಾಪಿಸಿರುವ ಕೋವಿಡ್ 19  ವಾರ್‌ ರೂಂಗೆ ಮಾಹಿತಿ ಕಳುಹಿಸಿದಲ್ಲಿ ಸರಬರಾಜಿಗೆ ಕ್ರಮ ವಹಿಸಲಾಗುತ್ತದೆ. ವಾರ್‌ ರೂಂನಲ್ಲಿ ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ ಇದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿ, ಕೋವಿಡ್ 19  ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಾಗಿ 1,465 ಸುರಕ್ಷಾ ಕಿಟ್‌ಗಳು ಲಭ್ಯ ಇವೆ. ಜಿಮ್ಸ್‌, ಇಎಸ್‌ಐ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 40 ವೆಂಟಿಲೇಟರ್‌ಗಳು ಇವೆ. ಜಿಮ್ಸ್‌ ಮತ್ತು ಇಎಸ್‌ಐ ಆಸ್ಪತ್ರೆಗಳನ್ನು ವಿಶೇಷವಾಗಿ ಕೊರೊನಾ ಆಸ್ಪತ್ರೆಗಳೆಂದು ಘೋಷಿಸಲಾಗಿದೆ. ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಚಿಕಿತ್ಸೆ ನೀಡಲು ಹಾಗೂ ಎಬಿಆರ್‌ಕೆ ಕಾರ್ಡ್‌ ಮೇಲೆ ವೈದ್ಯಕೀಯ ವೆಚ್ಚ ಪಾವತಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದರು.

ಈ ವೇಳೆ ಡಿಸಿಎಂ ಕಾರಜೋಳ, ಪ್ರಸ್ತುತ 40 ವೆಂಟಿಲೇಟರ್‌ಗಳು ಸಾಕಾಗುವುದಿಲ್ಲ. ಮಹಿಂದ್ರಾ ಕಂಪನಿಯವರು 7,500 ರೂ. ಬೆಲೆಯಲ್ಲಿ ವೆಂಟಿಲೇಟರ್‌ ತಯಾರಿಸಿ ಕೊಡಲು ಮುಂದೆ ಬಂದಿದ್ದಾರೆ. ಇಂತಹ 100 ವೆಂಟಿಲೇಟರ್‌ಗಳು ಹಾಗೂ ಐದು ಸಾವಿರ ಎನ್‌-95 ಮಾಸ್ಕ್ಗಳು ಮತ್ತು ಸುರಕ್ಷಾ ಕಿಟ್‌ಗಳು ಖರೀದಿಸುವಂತೆ ನಿದೇರ್ಶನ ನೀಡಿದರು.

Advertisement

ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ಜಿಪಂ ಸಿಇಒ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬ್ನ್ಯಾಂಗ್‌, ಡಿಸಿಪಿ ಕಿಶೋರಬಾಬು, ಡಿಎಚ್‌ಒ ಡಾ.ಎಂ.ಎ.ಜಬ್ಟಾರ್‌, ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಮಹಮ್ಮದ್‌ ಶಫಿಯುದ್ದಿನ್‌, ಇಎಸ್‌ಐ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಎ.ಎಲ್‌.ನಾಗರಾಜ, ಜಿಲ್ಲಾ ಶಸ್ತ್ರಜ್ಞ ಡಾ.ಅಂಬರಾಯ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next