Advertisement

ಹೆದ್ದಾರಿ ತಡೆ ಪ್ರತಿಭಟನೆ ಕೈಬಿಡಲು ಗೃಹ ಸಚಿವರ ಮನವಿ

05:05 AM Jan 06, 2019 | |

ಉಡುಪಿ: ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಎಂ.ಬಿ. ಪಾಟೀಲ್‌  ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಮೀನುಗಾರ ಸಭೆ ನಡೆಸಿದರು. ಮೀನುಗಾರ ಸಂಘಟನೆಗಳು ರವಿವಾರ ನೀಡಿರುವ ಹೆದ್ದಾರಿ ತಡೆ ಪ್ರತಿಭಟನೆಯನ್ನು ಕೈಬಿಡುವಂತೆ  ಮನವಿ ಮಾಡಿದರು.

Advertisement

ಡಿ. 22ರಂದು ನಾಪತ್ತೆ ಪ್ರಕರಣ ಗೊತ್ತಾದಂದಿನಿಂದ ಈ ವರೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸರ್ವ ರೀತಿಯಲ್ಲಿ ಶೋಧ ನಡೆಸುತ್ತಿವೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಮಹಾ, ಗೋವಾ: ಶೀಘ್ರ ಸಭೆ
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗೃಹ ಸಚಿವರೊಂದಿಗೆ ಪತ್ರ ವ್ಯವಹಾರ ನಡೆಸಿ ಶೀಘ್ರವೇ ಸಭೆ ನಡೆಸಿ ಉಭಯ ರಾಜ್ಯಗಳ ಮೀನುಗಾರರ ನಡುವೆ ಭಿನ್ನಾಭಿಪ್ರಾಯವಿದ್ದರೆ ಸರಿಪಡಿಸಲಾಗುವುದು ಮತ್ತು ಸರಕಾರದ ಮಟ್ಟದಲ್ಲಿ ಸೌಹಾರ್ದ ಕಾಪಾಡಲಾಗುವುದು ಎಂದರು.

ಕಂಟೈನರ್‌ ಪತ್ತೆ: ತನಿಖೆ 
ಪೊಲೀಸರು, ಕರಾವಳಿ ಕಾವಲು ಪಡೆ, ಕೋಸ್ಟ್‌ಗಾರ್ಡ್‌, ನೌಕಾದಳಗಳು ಸತತ ಪ್ರಯತ್ನ ನಡೆಸುತ್ತಿವೆ. ಕೊಚ್ಚಿಯಿಂದ ಗುಜರಾತ್‌ ವರೆಗೆ ಕಾರ್ಯಾ ಚರಣೆ ನಡೆಸಲಾಗುತ್ತಿದೆ. ಶನಿವಾರ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತೀರದಲ್ಲಿ ಪ್ಲಾಸ್ಟಿಕ್‌ ಕಂಟೈನರ್‌ ಸಿಕ್ಕಿರುವ ಮಾಹಿತಿ ಇದ್ದು, ತನಿಖೆ ನಡೆಸಲಾಗುತ್ತಿದೆ. ನಮ್ಮ ಎಲ್ಲ ಪ್ರಯತ್ನಗಳನ್ನು ಮೀನುಗಾರ ಮುಖಂಡರಿಗೆ ತಿಳಿಸುವ ಉದ್ದೇಶದಿಂದಲೇ ಈ ಸಭೆ ಕರೆದಿದ್ದೇನೆ ಎಂದು ಪಾಟೀಲ್‌ ತಿಳಿಸಿದರು. ಸ್ಥಗಿತಗೊಂಡ ಮೀನುಗಾರಿಕೆಯನ್ನು ಆರಂಭಿಸಿ. ನಿಮಗೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು ಎಂದರು. 

ಸಚಿವೆ ಪ್ರವಾಸ ರದ್ದು
ಈಗಾಗಲೇ ಪ್ರತಿಭಟನೆಗೆ ಕರೆ ನೀಡಿಯಾಗಿದೆ. ಈಗ ರದ್ದು ಅಸಾಧ್ಯ ಎಂದು ಮೀನುಗಾರ ಮುಖಂಡರು ತಿಳಿಸಿದಾಗ ಸಚಿವೆ ಡಾ| ಜಯಮಾಲಾ ಅವರೇ ಮನವಿ ಸ್ವೀಕರಿಸಬೇಕೆಂಬ ಆಗ್ರಹ ವ್ಯಕ್ತವಾಯಿತು. ಗೃಹ ಸಚಿವರ ಸೂಚನೆ ಮನ್ನಿಸಿದ ಸಚಿವೆ ತನ್ನ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ರವಿವಾರ ಮನವಿ ಸ್ವೀಕರಿಸುವೆ ಎಂದರು

Advertisement

ಜ. 8: ಮೀನುಗಾರಿಕೆ ಸಚಿವರ ಭೇಟಿ
ಮೀನುಗಾರಿಕೆ ಸಚಿವರು ಇಷ್ಟು ದಿನವಾದರೂ ಬಂದಿಲ್ಲ ಎಂದು ಮೀನುಗಾರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದಾಗ ಉತ್ತರಿಸಿದ ಸಚಿವೆ ಡಾ| ಜಯಮಾಲಾ, ಜ. 8ರಂದು ಬರುವುದಾಗಿ ತಿಳಿಸಿದ್ದಾರೆ ಎಂದರು.
ಮೀನುಗಾರರ ವಿವಿಧ ಬೇಡಿಕೆ ಗಳನ್ನು ಈಡೇರಿಸಲು ಶಾಸಕ ರಘುಪತಿ ಭಟ್‌, ಪ್ರಮೋದ್‌ ಮಧ್ವರಾಜ್‌, ಯು.ಆರ್‌. ಸಭಾಪತಿ, ಡಾ| ಜಿ. ಶಂಕರ್‌, ಯಶಪಾಲ್‌ ಸುವರ್ಣ, ಸತೀಶ್‌ ಕುಂದರ್‌, ಜಯ ಕೋಟ್ಯಾನ್‌, ಆರ್‌.ಕೆ. ಗೋಪಾಲ್‌, ಅಲ್ಪಸಂಖ್ಯಾಕ ನಿಗಮದ ಮಾಜಿ ಅಧ್ಯಕ್ಷ ಎಂ.ಎ. ಗಫ‌ೂರ್‌ ಒತ್ತಾಯಿಸಿದರು. ಸೂಕ್ತ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.  ಜಿಲ್ಲಾಧಿಕಾರಿ ಪ್ರಿಯಾಂಕಾ, ಡಿಐಜಿ (ಆಂತರಿಕ ಭದ್ರತೆ) ಎ.ಎನ್‌. ಪ್ರಸಾದ್‌, ಐಜಿಪಿ ಅರುಣ್‌ ಚಕ್ರವರ್ತಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು. ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಕಾರ್ಯಾಚರಣೆಯನ್ನು ವಿವರಿಸಿದರು. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಮುಖಂಡರಾದ ಮುನಿಯಾಲು ಉದಯಕುಮಾರ ಶೆಟ್ಟಿ, ಕೇಶವ ಕುಂದರ್‌, ರಮೇಶ ಕಾಂಚನ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next