Advertisement

ಸಿದ್ದರಾಮಯ್ಯ ಮೇಲಿನ ದಾಳಿಗಾಗಿ ಗೃಹಸಚಿವರು ರಾಜೀನಾಮೆ ನೀಡಬೇಕು: ಧ್ರುವನಾರಾಯಣ್

12:17 PM Aug 19, 2022 | Team Udayavani |

ಮೈಸೂರು: ಕೊಡಗು ಜಿಲ್ಲೆಯಲ್ಲಿ ವಿಪಕ್ಷ‌ ನಾಯಕ ಸಿದ್ದರಾಮಯ್ಯ ಅವರ ಮೇಲಿನ ದಾಳಿ ಸರ್ಕಾರದ ಪ್ರಾಯೋಜಿತವಾಗಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು, ಗೃಹಸಚಿವರು ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಒತ್ತಾಯಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೊಡಗು‌ ಜಿಲ್ಲೆಯಲ್ಲಿ‌ ನೆರೆ ಹಾನಿ ವೀಕ್ಷಣೆಗೆ ತೆರಳಿದ್ದ ಸಿದ್ದರಾಮಯ್ಯ ಅವರ ಕಾರಿನ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಇದು ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯ ಎತ್ತಿ ತೋರಿಸುತ್ತದೆ. ಸರ್ಕಾರಕ್ಕೆ ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಕಿಡಿ ಕಾರಿದರು.

ಕರ್ನಾಟಕ ಶಾಂತಿಪ್ರಿಯರ ನಾಡು. ಆದರೆ, ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ, ಕೊಲೆ, ಸುಲಿಗೆ ಹೆಚ್ಚಾಗಿದೆ. ಸರಣಿ ಪ್ರತಿಭಟನೆಗಳ ಮುನ್ಸೂಚನೆ ಇದ್ದರೂ ಗೃಹಸಚಿವರು ಘಟನೆ ತಡೆಯಲು ವಿಫಲವಾಗಿದ್ದಾರೆ. ಇದು ಕೇವಲ ಸಿದ್ದಾರಮಯ್ಯ ಅವರಿಗೆ ಆದ ಅಪಮಾನವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ದೊಡ್ಡ ಹಾನಿ. ಹೀಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು. ಗೃಹಸಚಿವರು ಕೂಡಲೇ ರಾಜೀನಾಮೆ‌ ನೀಡಬೇಕು. ಅವರು ರಾಜೀನಾಮೆ‌‌‌ ನೀಡದಿದ್ದರೆ ರಾಜ್ಯಪಾಲರೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮೋತ್ಸವದ ಯಶಸ್ಸಿನಿಂದ ಬಿಜೆಪಿ ಬೆಚ್ಚಿಬಿದ್ದಿದೆ. ಈ ಕಾರಣಕ್ಕಾಗಿಯೇ ಮೂಲೆ ಗುಂಪಾಗಿದ್ದ ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ‌ ಸ್ಥಾನ ನೀಡಿದೆ. ಚುನಾವಣೆ ಮುಗಿದ ಬಳಿಕ ಮತ್ತೆ ಮನೆಗೆ ಕಳುಹಿಸುತ್ತಾರೆ ಎಂದರು.

ಹೇಡಿಗಳ ಕೃತ್ಯ
ಕೊಡಗು ವೀರರ ನಾಡು. ಪ್ರತಿ ಮನೆಯಲ್ಲೂ ಯೋಧರಿದ್ದಾರೆ. ಆದರೆ, ಅಂತಹ ವೀರ ಸಂಸ್ಕೃತಿಗೆ ಧಕ್ಕೆ ತರುವ ಹೇಡಿ ಕೃತ್ಯವನ್ನು ಬಿಜೆಪಿ‌ ಪುಂಡರು ಮಾಡಿದ್ದಾರೆ. ಕೊಡಗಿನ ಪ್ರತಿ ಮನೆಯಲ್ಲೂ ಪುಂಡರನ್ನು ಹುಟ್ಟುಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿ ಕಾರಿದರು.

Advertisement

ನೆರೆ ಸಂಕಷ್ಟದಲ್ಲೂ ಭ್ರಷ್ಟಾಚಾರ
ಕೊಡಗು ಜಿಲ್ಲೆಯಲ್ಲಿ 2018ರಿಂದಲೂ ಹೆಚ್ಚು ಮಳೆಯಾಗುತ್ತಿದ್ದು, ಹಾನಿಯೂ ಹೆಚ್ಚಾಗಿದೆ. ಸೂಕ್ತ ಅನುದಾನ ನೀಡಿ ಸಮಸ್ಯೆ ಬಗೆಹರಿಸಬೇಕಾದ‌ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕರ್ನಾಟಕ ಅಭಿವೃದ್ಧಿಯದಲ್ಲಿ‌ ಕೊನೆ‌ ಸ್ಥಾನದಲ್ಲಿದ್ದು, ಭ್ರಷ್ಟಾಚಾರದಲ್ಲಿ‌ ಮೊದಲ ಸ್ಥಾನದಲ್ಲಿದೆ. ಕೊಟ್ಟ 600 ಭರವಸೆಗಳಲ್ಲಿ‌ ಕೇವಲ ಶೇ.9ರಷ್ಟನ್ನು ಮಾತ್ರ ಈಡೇರಿಸಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.

26ಕ್ಕೆ ಕೊಡಗು ಚಲೋ
ಘಟನೆ ಖಂಡಿಸಿ ಆ.26ರಂದು ಕೊಡಗು ಚಲೋ ನಡೆಸಲಾಗುತ್ತಿದ್ದು, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದು, ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿಯಂತೆ ಹೇಡಿಗಳ ಕೃತ್ಯ ಮಾಡುವುದಿಲ್ಲ ಎಂದು ತಿಳಿಸಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಇದು ಹೇಡಿಗಳು ಮಾಡುವ ಕೃತ್ಯ. ಸೈದ್ಧಾಂತಿಕ ಹೋರಾಟಕ್ಕೆ ಹಿಂಸಾತ್ಮಕ ರೂಪ ನೀಡಿರುವುದು ಖಂಡನೀಯ. ಇದು ಬಿಜೆಪಿಯಯವರ ಬೌದ್ಧಿಕ ದಿವಾಳಿತ‌ ತೋರಿಸುತ್ತದೆ. ವಿಪಕ್ಷ ನಾಯಕರಿಗೆ ಭದ್ರತೆ‌‌ ನೀಡಲಾಗದ‌ ಸರ್ಕಾರ ಜನರಿಗೆ ಹೇಗೆ‌ ನೀಡುತ್ತದೆ. ಘಟನೆ ಹಿಂದೆ ಸರ್ಕಾರದ ಕುಮ್ಮಕ್ಕಿದ್ದು, ಇಂತಹ ಬೆದರಿಕೆಗಳಿಗೆ‌‌ ಸಿದ್ದರಾಮಯ್ಯ ಅವರು, ಹೆದರುವುದಿಲ್ಲ ಎಂದರು.

ಗೋಷ್ಠಿಯಲ್ಲಿ ಶಾಸಕ‌ ಅನಿಲ್‌ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್,‌ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಒಬಿಸಿ ಘಟಕದ ಅಧ್ಯಕ್ಷ ಮಾರುತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next