ಬೆಂಗಳೂರು: ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಕಾಂಗ್ರೆಸ್ ನವರು ಗೂಂಡಾಗಳ ರೀತಿ ವರ್ತಿಸಿದ್ದಾರೆ. ವಿವಿಯಲ್ಲಿ ನಡೆದ ಘಟನೆಯ ಬಗ್ಗೆ ದೂರು ನೀಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಗೃಹ ಸಚಿವ ಪರಮೇಶ್ವರ್ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಬೆಂಬಲಿಗರು ಕುಲಪತಿ ಮೇಲೆ ಹಲ್ಲೆ ನಡೆಸಿರುವುದು ನೋಡಿದರೆ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ನಡೆದ ರಾಷ್ಟ್ರ ವಿರೋಧಿ ಚಟುವಟಿಕೆಗಳು ಇಲ್ಲಿಯೂ ಮರುಕಳಿಸುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿ ಆವರಣದಲ್ಲಿ ಗಲಾಟೆ ಮಾಡಿದವರ ವಿರುದ್ದ ದೂರು ದಾಖಲಾಗಿದ್ದರೂ ಯಾರನ್ನೂ ಬಂಧಿಸಿಲ್ಲ. ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮನೆ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಅದೇ ರೀತಿಯ ದಾಳಿ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಗೂಂಡಾಗಳಾಗಿರಬಹುದು. ಆದರೆ ಸಂವಿಧಾನದಡಿ ಕ್ರಮ ಕೈಗೊಳ್ಳಲು ಗೃಹ ಸಚಿವ ಪರಮೇಶ್ವರ್‌ಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು. ವಿವಿಯ ಕುಲಪತಿ ಹೊಸಮನಿ ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪಿಠೊಪಕರಣಗಳನ್ನು ಹಾಳು ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಭಾಗವಾಗಿರುವ ಕುಲಪತಿ ಉದ್ದೇಶ ಪೂರ್ವಕವಾಗಿ ಅಥವಾ ರಾಜಕೀಯ ಕಾರಣಕ್ಕಾಗಿ ತಪ್ಪು ಮಾಡಿದ್ದರೆ, ಅವರದೇ ಸರ್ಕಾರದ ಉನ್ನತ ಶಿಕ್ಷಣ ಸಚಿವರ ಮೂಲಕ ಅಥವಾ ರಾಜ್ಯಪಾಲರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಬಹುದಿತ್ತು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಮಾಡುವ ಕೀಳುಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.
ಸಾಲ ಮನ್ನಾ ಕಿರುಕುಳ: ಇದೇ ವೇಳೆ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ 12 ಕ್ಕೂ ಹೆಚ್ಚು ದಾಖಲೆ ನೀಡುವಂತೆ ಷರತ್ತು ವಿಧಿಸಿ ಕಿರುಕುಳ ನೀಡುತ್ತಿದೆ. ದಾಖಲೆಗಳ ಸಂಗ್ರಹಕ್ಕಾಗಿ ರೈತರು ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಾಲ ಮನ್ನಾದ ಪ್ರಯೋಜನ ಯಾವುದೇ ರೈತರಿಗೂ ದೊರೆತಿಲ್ಲ. ಸರ್ಕಾರ ಷರತ್ತುಗಳ ನಾಟಕ ನಿಲ್ಲಿಸಿ ತಕ್ಷಣ ರೈತರಿಗೆ ಋಣ ಮುಕ್ತ ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.