ಬೆಂಗಳೂರು: ನಗರದಲ್ಲಿ ಬಾಂಗ್ಲಾದೇಶದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಸೇರಿ ಐದು ಜನ ಇದ್ದಾರೆ. ಪೂರ್ಣ ಪ್ರಮಾಣದ ತನಿಖೆಯ ಮೇಲೆ ಸತ್ಯಾಂಶ ಹೊರಬರುತ್ತದೆ ಎಂದರು.
ಗ್ಯಾಂಗ್ ರೇಪ್ ನಡೆದ ಲೊಕೇಷನ್ ಗೊತ್ತಿರಲಿಲ್ಲ, ವೈರಲ್ ಆದ ಮೂಲ ಹಿಡಿದು ತನಿಖೆ ನಡೆದಾಗ ಬೆಂಗಳೂರೆಂದು ಗೊತ್ತಾಗಿದೆ. ರಾಮಮೂರ್ತಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಕಮಿಷನರ್ ಅವರೇ ಈ ಪ್ರಕರಣದ ಜಾಲ ಪತ್ತೆ ಹಚ್ಚಲು ನೇತೃತ್ವ ವಹಿಸಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ:ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ: ಅತ್ಯಾಚಾರ ಆರೋಪಿಗಳ ವಿರುದ್ಧ ಸಿಎಂ ಗುಡುಗು
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿರೋಧ ಪಕ್ಷಗಳ ಆರೋಪದ ಬಗ್ಗೆ ಮಾತನಾಡಿದ ಅವರು, ಹೆಣ್ಣು ಮಗಳು ದೂರು ಕೊಡಲು ಬಂದಾಗ ತಡೆದವರು ಯಾರು? ಈಗ ದೂರು ಕೊಟ್ಡ ಮೇಲೆ ತನಿಖೆ ನಡೆಯಬೇಕಲ್ವಾ? ಪ್ರಕರಣದಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಎಸ್ ಐಟಿಯಲ್ಲೂ ಹಸ್ತಕ್ಷೇಪವಾಗಿಲ್ಲ. ಸೌಮೇಂದ್ರ ಮುಖರ್ಜಿ ಅವರಿಗೆ ಆರೋಗ್ಯದ ದೃಷ್ಟಿಯಿಂದ ರಜಾ ಕೊಟ್ಟಿದ್ದೇವೆ ಎಂದರು.
ಸಿಪಿವೈ ವಿಜಯೇಂದ್ರ ವಿರುದ್ದ ಮಾಡಿರುವ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲರ ಹೇಳಿಕೆಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಅವರವರ ಹೇಳಿಕೆ ಅವರೇ ಬದ್ದರು ಎಂದರು.