ಪಣಂಬೂರು: ನಗರದಲ್ಲಿ ಗೋಡೆಗಳಲ್ಲಿ ಉಗ್ರಪರ ಬರಹ ಘಟನೆ ಕುರಿತಂತೆ ತನಿಖೆ ಪ್ರಗತಿಯಲ್ಲಿದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಣಂಬೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಾಲಿಕೆ ಭಾಗದಲ್ಲಿ 1500ಸಿ ಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಸಿ ಸಿ ಕ್ಯಾಮರಾ ನೀಡಲು ದಾನಿಗಳು ಮುಂದೆ ಬಂದಲ್ಲಿ ಸ್ವಾಗತಿಸುತ್ತೇವೆ. ಕತ್ತಲೆ ಪ್ರದೇಶದಲ್ಲಿ ಬೀದಿ ದೀಪ, ಪೊಲೀಸ್ ಕಣ್ಗಾವಲು ಸಹಿತ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಲವ್ ಜಿಹಾದ್ ಬಗ್ಗೆ ಕಾನೂನು ಅಗತ್ಯವಿದ್ದು ಸರಕಾರ ಕ್ರಮ ಕೈಗೊಳ್ಳಲಿದೆ. ಅಕ್ರಮ ಗೋಹತ್ಯೆ ಕಾನೂನು ಬಲಪಡಿಸಲಾಗುವುದು ಎಂದು ನುಡಿದರು.
ಇದನ್ನೂ ಓದಿ:ಎಂಡಿಎಚ್ ಮಸಾಲ ಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ನಿಧನ
ಪಣಂಬೂರಿನಲ್ಲಿ ಪೊಲೀಸ್ ಕ್ವಾಟ್ರಸ್ ಉದ್ಘಾಟನೆ
ನಗರದ ಪಣಂಬೂರಿನಲ್ಲಿ ಪೊಲೀಸ್ ಕ್ವಾಟ್ರಸ್ ವಸತಿ ಸಮುಚ್ಚಯ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 2025ರ ಒಳಗಾಗಿ 11,000ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮಂಗಳೂರಿನಲ್ಲಿ ಈಗ 112 ಮನೆಗಳ ನಿರ್ಮಾಣ ಆಗಿದೆ. ಇನ್ನೂ 192 ಮನೆಗಳ ನಿರ್ಮಾಣವಾಗಲಿದ್ದು 100 ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡುವುದಾಗಿ ತಿಳಿಸಿದರು. ಉಳಿದ ಮನೆಗಳನ್ನು ಲಭ್ಯವಿರುವ ಭೂಮಿಯನ್ನು ನೋಡಿಕೊಂಡು ನಿರ್ಮಿಸಲಾಗುವುದು ಎಂದರು.
2025ರ ಒಳಗೆ ಶೇ.60 ಸಿಬಂದಿಗಳಿಗೆ ವಸತಿ ಒದಗಿಸುವ ಗುರಿಯಿದೆ ಎಂದ ಅವರು, ಪೊಲೀಸರಿಗೆ ಹೊಸ ಸವಾಲು ಎದುರಿಸಲು ಸುಸಜ್ಜಿತ ಠಾಣೆ, ಕೋಸ್ಟಲ್ ಪೊಲೀಸರಿಗೆ ಸ್ಪೀಡ್ ಬೋಟ್, ಐದು ಐಜಿಪಿ ರೇಂಜ್ ನಲ್ಲಿ ಎಸ್ಎಫ್ಎಲ್ ವ್ಯವಸ್ಥೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಮಾಸ್ಟರ್ ಪ್ಲಾನ್ ಮತ್ತಿತರ ಯೋಜನೆಯನ್ನು ರೂಪಿಸಿ ಮುಂದಿನ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.