ಶಿರಸಿ : ಒಬ್ಬ ಅಧಿಕಾರಿ ಅಥವಾ ಗೃಹ ಸಚಿವರಿಗೆ ಹೊಗಳಿಕೆ ಇದ್ದರೆ ಅವರು ಸರಿಯಲ್ಲ ಎಂದರ್ಥ. ಪೊಲೀಸರು, ಗೃಹ ಸಚಿವ ಎಲ್ಲರಿಗೂ ಸರಿ ಇರಲು ಸಾಧ್ಯ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಅವರು ನಗರದಲ್ಲಿ ಭಾನುವಾರ ಹಿರಿಯ ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಆರೋಗ್ಯ ವಿಚಾರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ಒಬ್ಬ ಪೊಲೀಸ್ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದೇ ಅರ್ಥ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಒಂದೆರಡು ಘಟನೆ ಬಿಟ್ಟರೆ ಬೇರೆ ಸಂಗತಿಯೇ ಇಲ್ಲ. ಶಿವಮೊಗ್ಗದಲ್ಲಿ ಘಟನೆ ನಡೆದ 24 ಗಂಟೆಯಲ್ಲಿ ಹೆಡೆ ಮುರಿಕಟ್ಟಿದ್ದಾರೆ ಎಂದರು.
ಚುನಾವಣಾ ವರ್ಷದಲ್ಲಿ ಎಲ್ಲರೂ ಕ್ರಿಯಾಶೀಲ ಆಗುತ್ತಾರೆ. ರಾಜಕಾರಣ, ಎಲ್ಲ ಪಕ್ಷಗಳೂ ಕ್ರಿಯಾಶೀಲ ಆಗುತ್ತಾರೆ ಎಂದ ಅವರು ಅನ್ಯ ಚಟುವಟಿಕೆ ನಡೆಸುತ್ತಿರುವವರ ನಿಯಂತ್ರಣ ನಡೆಸಲಾಗುತ್ತಿದೆ. ಮಾನಸಿಕ ಅಸ್ವಸ್ಥ ಕೊಲೆ ಆರೋಪಿಯನ್ನು ಪೊಲೀಸರು ಕರೆತರುವಾಗ ಹೊಸನಗರ ಎಸ್ ಐಗೆ ಕಚ್ಚಿದ್ದಾರೆ. ಕಚ್ಚಿದ ವಿಡಿಯೋ ವೈರಲ್ ಆಗಿದೆ. ಆದರೆ, ಪೊಲೀಸ್ ಹೊಡೆದದ್ದು ಕೂಡ ತಪ್ಪೇ ಎಂದರು.
ಶಾಂತಿ ಕದಡುವ ಕೆಲಸ ಮಾಡುವ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆಗಳನ್ನು ನಿಷೇಧ ಮಾಡುವ ಬದಲು ಅವರ ಕಾರ್ಯಚಟುವಟಿಕೆ ಮೇಲೆ ನಿಗಾ ಇಡುವುದು ಮುಖ್ಯ. ಈ ಬಗ್ಗೆ ವಿಶೇಷ ಗಮನ ನೀಡಿದ್ದೇವೆ. ನಿಷೇಧ ಮಾಡಿದರೆ ಇನ್ನೊಂದು ಸಂಘಟನೆ ಮಾಡಬಹುದು ಎಂದೂ ಹೇಳಿದ ಅವರು, ಈ ಸಂಘಟನೆಗಳನ್ನು ನಿಷೇಧ ಮಾಡುವುದು ಕೇಂದ್ರದ ನಿರ್ಧಾರ. ಇಲ್ಲಿನ ಘಟನಾವಳಿಗಳನ್ನು ಕೇಂದ್ರಕ್ಕೆ ವರದಿ ನೀಡುತ್ತಿದ್ದೇವೆ. ಕೇಂದ್ರವೂ ಕಣ್ಣಿಟ್ಟಿದೆ ಎಂದೂ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ : ಬ್ಯಾಟಿಂಗ್ ನಂತರ ಬೌಲಿಂಗ್ ನಲ್ಲೂ ಜಡೇಜಾ ಮಿಂಚು; 400 ರನ್ ಹಿನ್ನಡೆ ಅನುಭವಿಸಿದ ಲಂಕಾ!
ಶಿವಮೊಗ್ಗ, ಆಳಂದ ಘಟನೆ ಹೊರತುಪಡಿಸಿದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ ಎಂದೂ ಹೇಳಿದರು. ಸಾಮಾಜಿಕ ಶಾಂತಿ ಕದಡುವ ಕಾರ್ಯ ನಡೆಯುತ್ತಿದ್ದರೆ ಅದನ್ನು ನಿಯಂತ್ರಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ನಿರ್ದೇಶಕ ಶಶಾಂಕ ಹೆಗಡೆ ಇತರರು ಇದ್ದರು. ಇದೇ ವೇಳೆ ಮಾರಿಕಾಂಬಾ ದೇವಸ್ಥಾನಕ್ಕೂ ತೆರಳಿ ಶ್ರೀದೇವಿ ದರ್ಶನ ಪಡೆದು ಗೌರವ ಸ್ವೀಕರಿಸಿದರು.
ಶೀಗೇಹಳ್ಳಿ ಅವರ ಆರೋಗ್ಯ ವಿಚಾರಣೆ ವೇಳೆ ಸ್ವತಃ ಶೀಗೆಹಳ್ಳಿ ಅವರು ಅರಗ ಅವರ ಬಳಿ ಖಾತೆ ಸಾಲ ಕೃಷಿ ಸಾಲವಾಗಿ ಪರಿವರ್ತನೆ ಮಾಡಿಕೊಡುವಂತೆ ಮನವಿ ಮಾಡಿದರು.