ನವದೆಹಲಿ: ‘ಛತ್ತೀಸಗಡದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಂತ್ವನ ಹೇಳಿದ್ದಾರೆ.
ಭಾನುವಾರ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಜೊತೆ ಮಾತಾಡಿರುವ ಶಾ, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೂ CRPF ಜನರಲ್ ಡೈರೆಕ್ಟರ್ ಕುಲದೀಪ್ ಸಿಂಗ್ ಅವರಿಗೆ ಛತ್ತೀಸಗಡಕ್ಕೆ ಭೇಟಿ ನೀಡಿ ಘಟನೆ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.
ಎನ್‍ಕೌಂಟರ್ ವೇಳೆ ವೀರಮರಣ ಹೊಂದಿರುವ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಗೃಹ ಮಂತ್ರಿಗಳು, ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಗೊಂಡಿರುವ ಯೋಧರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಇದೇ ವೇಳೆ ನಕ್ಸಲೈಟ್ ವಿರುದ್ಧ ಗುಡುಗಿರುವ ಶಾ, ಶಾಂತಿ ಕದಡುವವರ ಹಾಗೂ ಅಭಿವೃದ್ಧಿಯ ಶತ್ರುಗಳ ವಿರುದ್ಧದ ಹೋರಾಟವನ್ನು ಸರ್ಕಾರ ಮುಂದುವರಿಸುವುದು ಎಂದು ಎಚ್ಚರಿಕೆ ನೀಡಿದ್ದಾರೆ.
‘ಛತ್ತೀಸಗಡದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರು ಮರೆಯಲಾಗದ ತ್ಯಾಗ, ಅಪ್ರತಿಮ ಶೌರ್ಯ ಮೆರೆದಿದ್ದಾರೆ. ಅವರ ಈ ತ್ಯಾಗವನ್ನು ದೇಶವು ಎಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.